ಓವರ್‌ಟೇಕ್ ಮಾಡಿದಕ್ಕೆ ಸಹಪಾಠಿ ವಿದ್ಯಾರ್ಥಿಯ ಅಪಹರಣ : ‘ದುನಿಯಾ’ ವಿಜಯ್ ಪುತ್ರನ ವಿರುದ್ಧ ಗಂಭೀರ ಆರೋಪ; ಕಾರಿನಲ್ಲೇ ಹಲ್ಲೆ

ಬೆಂಗಳೂರು: ವಾಹನ ಓವರ್‌ಟೇಕ್ ಮಾಡಿದ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಸಹಪಾಠಿ ವಿದ್ಯಾರ್ಥಿಯೊಬ್ಬನನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸ್ಯಾಂಡಲ್‌ವುಡ್ ನಟ ‘ದುನಿಯಾ’ ವಿಜಯ್ ಅವರ ಪುತ್ರ ಹಾಗೂ ಆತನ ಸ್ನೇಹಿತರ ವಿರುದ್ಧ ಈ ಆರೋಪ ಮಾಡಲಾಗಿದ್ದು, ರಾಜರಾಜೇಶ್ವರಿ ನಗರ – ಮೈಸೂರು ರಸ್ತೆ ಭಾಗದಲ್ಲಿ ನಡೆದ ಘಟನೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಾಹಿತಿ ಪ್ರಕಾರ, ರಾಜರಾಜೇಶ್ವರಿ ನಗರದಲ್ಲಿ ‘ದುನಿಯಾ’ ವಿಜಯ್ ಪುತ್ರ ಹಾಗೂ ಆತನ ಸ್ನೇಹಿತರು ಜಿಪ್ಸಿ ವಾಹನದಲ್ಲಿ ತೆರಳುತ್ತಿದ್ದ ವೇಳೆ, ಆರ್‌.ವಿ. ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಐ-20 ಕಾರಿನಲ್ಲಿ ಅವರ ವಾಹನವನ್ನು ಓವರ್‌ಟೇಕ್ ಮಾಡಿದ್ದಾನೆ ಎನ್ನಲಾಗಿದೆ. ಇದೇ ವಿಚಾರಕ್ಕೆ ರಸ್ತೆಯಲ್ಲಿ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿತ್ತು ಎಂದು ತಿಳಿದುಬಂದಿದೆ.

ಬಳಿಕ ಇದೇ ವಿಚಾರವನ್ನು ಮುಂದುವರಿಸಿಕೊಂಡು ಬಂದಿದ್ದ ಆರೋಪಿಗಳು, ಮೈಸೂರು ರಸ್ತೆಯ ಆರ್‌.ವಿ. ವಿಶ್ವವಿದ್ಯಾಲಯದ ಗೇಟ್ ಬಳಿ ವಿದ್ಯಾರ್ಥಿಯನ್ನು ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ. ಆತನನ್ನು ಬಲವಂತವಾಗಿ ವಾಹನಕ್ಕೆ ಎಳೆದುಕೊಂಡು ಹೋಗಿ, ಚಲಿಸುತ್ತಿದ್ದ ಕಾರಿನಲ್ಲೇ ಹಲ್ಲೆ ನಡೆಸಲಾಗಿದೆ ಎಂದು ಸಂತ್ರಸ್ತ ದೂರಿನಲ್ಲಿ ಆರೋಪಿಸಿದ್ದಾನೆ.

ಹಲ್ಲೆಯಿಂದ ಗಾಯಗೊಂಡಿರುವ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಿಶೇಷವೆಂದರೆ, ಆರೋಪಿತ ನಟನ ಪುತ್ರ ಮತ್ತು ಹಲ್ಲೆಗೊಳಗಾದ ವಿದ್ಯಾರ್ಥಿ ಇಬ್ಬರೂ ಒಂದೇ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಸಹಪಾಠಿಗಳೆಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾಲೇಜು ಆವರಣ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಘಟನೆಗೆ ನಿಖರ ಕಾರಣವೇನು, ಅಪಹರಣ ನಡೆದಿತ್ತೇ ಹಾಗೂ ಹಲ್ಲೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ನೀಡಿದ ಬಳಿಕ ಘಟನೆಯ ಸಂಪೂರ್ಣ ಚಿತ್ರಣ ಹೊರಬರುವ ಸಾಧ್ಯತೆಯಿದೆ.

Related Articles

ಇತ್ತೀಚಿನ ಸುದ್ದಿಗಳು