ಹಲ್ದ್ವಾನಿ ‘ಶುದ್ಧೀಕರಣ’ ಘಟನೆ: ಮಲ್ಲಿಕಾರ್ಜುನ ಖರ್ಗೆಯವರನ್ನು ಅವಮಾನಿಸಿದ್ದನ್ನು ಖಂಡಿಸಿ ರಾಷ್ಟ್ರಪತಿ ಭೇಟಿಗೆ ಎಸ್‌ಸಿ, ಎಸ್‌ಟಿ ಸಂಸದರ ತೀರ್ಮಾನ

ದೆಹಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆಯ ನಂತರ ಮೈದಾನವನ್ನು ‘ಶುದ್ಧೀಕರಣ’ಗೊಳಿಸಿದ ಘಟನೆಯನ್ನು ಕಾಂಗ್ರೆಸ್ ಪಕ್ಷದ ಎಸ್‌ಸಿ ಮತ್ತು ಎಸ್‌ಟಿ ಸಂಸದರು ಹಾಗೂ ಹಿರಿಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಇದು ಕೇವಲ ಖರ್ಗೆ ಅವರಿಗೆ ಮಾಡಿದ ವೈಯಕ್ತಿಕ ಅವಮಾನವಲ್ಲ, ಬದಲಾಗಿ ಇಡೀ ದಲಿತ ಮತ್ತು ಆದಿವಾಸಿ ಸಮುದಾಯಗಳ ಆತ್ಮಗೌರವ ಹಾಗೂ ಘನತೆಗೆ ಬಗೆದ ಅಪಚಾರ ಎಂದು ಸಂಸದರು ಆಕ್ರೋಶ ಹೊರಹಾಕಿದ್ದಾರೆ.

ಬುಧವಾರ ನವದೆಹಲಿಯಲ್ಲಿ ತೆಲಂಗಾಣ ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ನೇತೃತ್ವದಲ್ಲಿ ಸಮಾವೇಶಗೊಂಡ ಎಸ್‌ಸಿ ಮತ್ತು ಎಸ್‌ಟಿ ಸಂಸದರ ನಿಯೋಗವು ಘಟನೆಯ ಕುರಿತು ಸುದೀರ್ಘ ಚರ್ಚೆ ನಡೆಸಿತು. ಸಮಾನತೆ, ಮಾನವ ಘನತೆ ಮತ್ತು ಅಸ್ಪೃಶ್ಯತಾ ನಿವಾರಣೆಯಂತಹ ಸಂವಿಧಾನದ ಮೂಲಭೂತ ಆಶಯಗಳಿಗೆ ಈ ಕೃತ್ಯ ಸಂಪೂರ್ಣ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟ ನಾಯಕರು, ಇಂತಹ ಅಮಾನವೀಯ ಜಾತಿವಾದಿ ಕೃತ್ಯ ಎಸಗಿದವರನ್ನು ತಕ್ಷಣವೇ ಗುರುತಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಈ ಅನ್ಯಾಯದ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಧ್ಯಪ್ರವೇಶಿಸಿ ಸಂತ್ರಸ್ತ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಲು ನಿರ್ಧರಿಸಲಾಯಿತು.

ಈ ಹೋರಾಟದ ಮುಂದಿನ ಹಂತವಾಗಿ, ಸೆಪ್ಟೆಂಬರ್ 7ರಂದು ಬೆಳಿಗ್ಗೆ 11 ಗಂಟೆಗೆ ಎಐಸಿಸಿ ಕೇಂದ್ರ ಕಚೇರಿಯಾದ ‘ಇಂದಿರಾ ಭವನ’ದಲ್ಲಿ ಎಲ್ಲ ಎಸ್‌ಸಿ, ಎಸ್‌ಟಿ ಸಂಸದರ ಮಹತ್ವದ ಸಭೆ ನಡೆಸಿ ಹೋರಾಟದ ನೀಲನಕ್ಷೆ ರೂಪಿಸಲಾಗುವುದು. ಬಳಿಕ ಸೆಪ್ಟೆಂಬರ್ 8ರಂದು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಮಯಾವಕಾಶ ಕೋರಲಾಗಿದೆ. ನಾಗರ್‌ಕರ್ನೂಲ್ ಸಂಸದ ಮಲ್ಲು ರವಿ ಸೇರಿದಂತೆ ಹಲವು ನಾಯಕರು ಈಗಾಗಲೇ ರಾಷ್ಟ್ರಪತಿಗಳಿಗೆ ಲಿಖಿತ ದೂರು ಸಲ್ಲಿಸಿದ್ದು, ಈ ವಿಚಾರವನ್ನು ಅತ್ಯುನ್ನತ ಸಾಂವಿಧಾನಿಕ ಮಟ್ಟಕ್ಕೆ ಕೊಂಡೊಯ್ದು ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು