“ಸಿಎಂ ಆಗಿದ್ದಾಗ ಎರಡು ದಿನ ನಾಪತ್ತೆಯಾಗಿದ್ದರು! ಖುದ್ದು ದೇವೇಗೌಡರೇ ಕುಮಾರಸ್ವಾಮಿ ಹುಡುಕಿಕೊಡಲು ನನಗೆ ಹೇಳಿದ್ದರು” : ಚೆಲುವರಾಯಸ್ವಾಮಿ ಸ್ಫೋಟಕ ಹೇಳಿಕೆ

ಬೆಂಗಳೂರು: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕೃಷಿ ಸಚಿವ ಎನ್‌. ಚೆಲುವರಾಯಸ್ವಾಮಿ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದ್ದು, ಇದೀಗ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳ ಹಂತಕ್ಕೆ ತಲುಪಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡು ದಿನಗಳ ಕಾಲ ನಾಪತ್ತೆಯಾಗಿದ್ದರು ಎಂದು ಆರೋಪಿಸಿರುವ ಚೆಲುವರಾಯಸ್ವಾಮಿ, ಅವರನ್ನು ಹುಡುಕುವಂತೆ ಅಂದಿನ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ತಮ್ಮ ಬಳಿ ಮನವಿ ಮಾಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಚೆಲುವರಾಯಸ್ವಾಮಿ, “ಕುಮಾರಸ್ವಾಮಿ ಅವರು ಯಾರ ಬಾಗಿಲು ತಟ್ಟಲು ಹೋಗಿದ್ದರು ಎಂಬ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ” ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದರು.

“ಅಂದು ದೇವೇಗೌಡರು ನನ್ನನ್ನು ಕರೆದು, ‘ನನ್ನ ಮಗ ಕಾಣುತ್ತಿಲ್ಲ. ಎಲ್ಲಿದ್ದಾನೋ ಹುಡುಕಿ ವಿಧಾನಸಭೆಗೆ ಕರೆದುಕೊಂಡು ಬಾ. ಇಲ್ಲದಿದ್ದರೆ ನನ್ನ ಮರ್ಯಾದೆ ಹೋಗುತ್ತದೆ’ ಎಂದು ಕೇಳಿಕೊಂಡಿದ್ದರು. ಅವರ ಮರ್ಯಾದೆ ಉಳಿಸುವ ಸಲುವಾಗಿ ನಾನು ಬೆಳಿಗ್ಗೆ 9 ಗಂಟೆಗೆ ಹೋಗಿ ಬಾಗಿಲು ತಟ್ಟಿದ್ದೆ,” ಎಂದು ಅವರು ಹೇಳಿಕೊಂಡರು.

‘ನಾನು ಬಿಚ್ಚಿಟ್ಟರೆ ತಡೆದುಕೊಳ್ಳಲು ಸಾಧ್ಯವಿಲ್ಲ’
ತಾವು ಬೆಳಿಗ್ಗೆ 9 ಗಂಟೆಗೆ ಬಾಗಿಲು ತಟ್ಟಿದ್ದಾಗಿ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಚೆಲುವರಾಯಸ್ವಾಮಿ, ಈ ವಿಚಾರವನ್ನು ಸಂಪೂರ್ಣವಾಗಿ ಬಹಿರಂಗಪಡಿಸಲು ಆರಂಭಿಸಿದರೆ ಕುಮಾರಸ್ವಾಮಿಗೆ ಅದನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.

“ಕುಮಾರಸ್ವಾಮಿಗೆ ಧೈರ್ಯವಿದ್ದರೆ ಯಾವುದೇ ಮಾಧ್ಯಮದ ಮುಂದೆ ಅಥವಾ ವಿಧಾನಸೌಧಕ್ಕೆ ಬಂದು ಈ ಬಗ್ಗೆ ಚರ್ಚೆ ಮಾಡಲಿ. ಅಂದು ಮುಖ್ಯಮಂತ್ರಿ ನಾಪತ್ತೆಯಾಗಿದ್ದಾಗ ದೇವೇಗೌಡರು ನನ್ನ ಸಹಾಯ ಕೇಳಿದ್ದು ಸುಳ್ಳಾಗಿದ್ದರೆ ಅವರು ಸ್ಪಷ್ಟನೆ ನೀಡಲಿ,” ಎಂದು ಸವಾಲು ಹಾಕಿದರು.

‘ಕುಮಾರಸ್ವಾಮಿಗೆ ರಾತ್ರಿ ನಿದ್ದೆಯೇ ಬರುತ್ತಿಲ್ಲ’
ಕುಮಾರಸ್ವಾಮಿ ಅವರ ವಿರುದ್ಧ ಮತ್ತಷ್ಟು ವಾಗ್ದಾಳಿ ನಡೆಸಿದ ಅವರು, “ಕುಮಾರಸ್ವಾಮಿಗೆ ಈಗ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ. ಕನಸಿನಲ್ಲೂ ಡಿ.ಕೆ. ಶಿವಕುಮಾರ್, ಚೆಲುವರಾಯಸ್ವಾಮಿ ಹಾಗೂ ಬಾಲಕೃಷ್ಣ ಅವರೇ ಕಾಣುತ್ತಿದ್ದಾರೆ,” ಎಂದು ವ್ಯಂಗ್ಯವಾಡಿದರು.

“ನಮಗೆ ಪಕ್ಷ ದೊಡ್ಡ ಜವಾಬ್ದಾರಿಗಳನ್ನು ನೀಡಿದೆ. ಆದರೆ ಕೇಂದ್ರದಲ್ಲಿ ತಾವು ನಿರೀಕ್ಷಿಸಿದ್ದ ಖಾತೆ ಸಿಗದಿರುವುದನ್ನು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಹೊಟ್ಟೆ ಉರಿಗೆ ನಮ್ಮ ಬಳಿ ಯಾವುದೇ ಮದ್ದಿಲ್ಲ,” ಎಂದು ಲೇವಡಿ ಮಾಡಿದರು.

‘ಹಿಟ್‌ ಅಂಡ್‌ ರನ್‌ ರಾಜಕಾರಣ ಬೇಡ’
ತಮ್ಮ ವಿರುದ್ಧ ದಾಖಲೆಗಳಿಲ್ಲದೆ ಆರೋಪ ಮಾಡುತ್ತಿರುವುದನ್ನು ಕುಮಾರಸ್ವಾಮಿ ನಿಲ್ಲಿಸಬೇಕು ಎಂದು ಚೆಲುವರಾಯಸ್ವಾಮಿ ಆಗ್ರಹಿಸಿದರು.

“ಅವರ ರೀತಿ ಹಿಟ್‌ ಅಂಡ್‌ ರನ್ ರಾಜಕಾರಣ ಮಾಡುವುದು ನನಗೆ ಬರುವುದಿಲ್ಲ. ಅವರ ಬಳಿ ದಾಖಲೆಗಳಿದ್ದರೆ ತೆಗೆದುಕೊಂಡು ಬರಲಿ. ನಾನು ಕೂಡ ನನ್ನ ಬಳಿ ಇರುವ ದಾಖಲೆಗಳೊಂದಿಗೆ ಸಿದ್ಧನಿದ್ದೇನೆ,” ಎಂದು ಸವಾಲು ಹಾಕಿದರು.

ಕೇಂದ್ರ ಸಚಿವರಾಗಿ ತಮ್ಮ ಜವಾಬ್ದಾರಿ ನಿರ್ವಹಿಸುವುದನ್ನು ಬಿಟ್ಟು ರಾಜ್ಯ ರಾಜಕಾರಣದಲ್ಲಿ ಕೇವಲ ಟೀಕೆ ಮಾಡುವುದರಲ್ಲೇ ಕುಮಾರಸ್ವಾಮಿ ಕಾಲ ಕಳೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕುಮಾರಸ್ವಾಮಿ ಮತ್ತು ಚೆಲುವರಾಯಸ್ವಾಮಿ ನಡುವಿನ ಈ ಹೊಸ ಸುತ್ತಿನ ವಾಕ್ಸಮರ ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ‘ಸಿಎಂ ಆಗಿದ್ದಾಗ ಕುಮಾರಸ್ವಾಮಿ ಎರಡು ದಿನ ನಾಪತ್ತೆಯಾಗಿದ್ದರು’ ಎಂಬ ಆರೋಪಕ್ಕೆ ಜೆಡಿಎಸ್‌ ಹಾಗೂ ಕುಮಾರಸ್ವಾಮಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು