ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ ಆರೋಪ: ಬಿಜೆಪಿ ಶಾಸಕನ ಪುತ್ರಿಗೆ ನಿರೀಕ್ಷಣಾ ಜಾಮೀನು ನಿರಾಕರಣೆ; ಇಂದು ಬಂಧನ ಸಾಧ್ಯತೆ

ಮಂಡ್ಯ: ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಿ. ಸುರೇಶ್‌ ಗೌಡ ಅವರ ಪುತ್ರಿ ಐಶ್ವರ್ಯಾಗೆ ಶ್ರೀರಂಗಪಟ್ಟಣದ ಸ್ಥಳೀಯ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ನ್ಯಾಯಾಲಯದ ಆದೇಶದ ಬೆನ್ನಲ್ಲೇ ಐಶ್ವರ್ಯಾ ಬಂಧನಕ್ಕೆ ಪೊಲೀಸರು ಮುಂದಾಗುವ ಸಾಧ್ಯತೆ ಇದ್ದು, ಇಂದು ಬಂಧನವಾಗುವ ಸಾಧ್ಯತೆ ಇದೆ.

ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಅಹಲ್ಯಾದೇವಿ ದೇವಸ್ಥಾನದಲ್ಲಿ ಕಳೆದ ತಿಂಗಳು ಭೀಮನ ಅಮಾವಾಸ್ಯೆ ಸಂದರ್ಭದಲ್ಲಿ ಘಟನೆ ನಡೆದಿತ್ತು. ಭಕ್ತರ ಸಂಖ್ಯೆ ಹೆಚ್ಚಿದ್ದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಗಾಗಿ ಮಂಡ್ಯ ಮಹಿಳಾ ಪೊಲೀಸ್‌ ಠಾಣೆಯ ಎಸ್‌ಐ ಸವಿತಾ ಬಿ. ಪಾಟೀಲ್ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.

ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ, ಸಂಜೆ 4ರ ಸುಮಾರಿಗೆ ದೇವಸ್ಥಾನಕ್ಕೆ ಬಂದಿದ್ದ ಐಶ್ವರ್ಯಾ, ಗರ್ಭಗುಡಿಗೆ ನೇರವಾಗಿ ತೆರಳಲು ಅವಕಾಶ ನೀಡುವಂತೆ ಪೊಲೀಸರ ಬಳಿ ಮನವಿ ಮಾಡಿದ್ದರು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇದ್ದ ಕಾರಣ ನೇರ ಪ್ರವೇಶಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಎಸ್‌ಐ ಸವಿತಾ ತಿಳಿಸಿದ್ದಾರೆ ಎನ್ನಲಾಗಿದೆ.

ಈ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಐಶ್ವರ್ಯಾ ಅವರು ತಾವು ರಾಜಕೀಯ ನಾಯಕರ ಪುತ್ರಿ ಹಾಗೂ ಡಿವೈಎಸ್‌ಪಿ ಪತ್ನಿ ಎಂದು ಹೇಳಿಕೊಂಡು ಎಸ್‌ಐ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಸಮವಸ್ತ್ರದಲ್ಲಿದ್ದ ಸವಿತಾ ಅವರ ಕಪಾಳಕ್ಕೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಎಸ್‌ಐ ಸವಿತಾ ಬಿ. ಪಾಟೀಲ್ ನೀಡಿದ ದೂರಿನ ಆಧಾರದ ಮೇಲೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಪೊಲೀಸರು ವಿಚಾರಣೆ ನಡೆಸಿದ್ದರೂ, ಈವರೆಗೆ ಬಂಧಿಸಿರಲಿಲ್ಲ. ಬಂಧನದ ಭೀತಿಯಿಂದ ಐಶ್ವರ್ಯಾ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.

ಆದರೆ ಇದೀಗ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿರುವುದರಿಂದ ಪ್ರಕರಣದಲ್ಲಿ ಐಶ್ವರ್ಯಾ ಬಂಧನದ ಸಾಧ್ಯತೆ ಹೆಚ್ಚಾಗಿದೆ. ನ್ಯಾಯಾಲಯದ ಆದೇಶದ ಪ್ರತಿ ಪಡೆದು ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಇಂದು ಬಂಧನವಾಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.

ಪುತ್ರಿಯ ಪರ ನಿಂತಿರಲಿಲ್ಲ ಶಾಸಕ; ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದ ಸುರೇಶ್‌ ಗೌಡ
ಈ ಪ್ರಕರಣದ ಕುರಿತು ಶಾಸಕ ಬಿ. ಸುರೇಶ್‌ ಗೌಡ ಕೂಡ ಪ್ರತಿಕ್ರಿಯಿಸಿ, ಪುತ್ರಿಯ ವರ್ತನೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಭೀಮನ ಅಮಾವಾಸ್ಯೆಯಂದು ತಮ್ಮ ಪುತ್ರಿ ಇಬ್ಬರು ಸಣ್ಣ ಮಕ್ಕಳೊಂದಿಗೆ ದೇವಸ್ಥಾನಕ್ಕೆ ತೆರಳಿದ್ದಳು. ವಿಐಪಿ ಸಾಲಿನಲ್ಲಿ ನಿಂತಿದ್ದ ವೇಳೆ ಇತರರನ್ನು ಒಳಗೆ ಕಳುಹಿಸಿ, ತಮ್ಮ ಪುತ್ರಿಯನ್ನು ಮಾತ್ರ ತಡೆದಿದ್ದರಿಂದ ಮಾತಿಗೆ ಮಾತು ಬೆಳೆದಿದೆ ಎಂದು ಅವರು ಹೇಳಿದ್ದರು.

ಘಟನೆ ನಡೆದ ಸಂದರ್ಭದಲ್ಲಿ ಪುತ್ರಿ ತಾಳ್ಮೆ ಕಳೆದುಕೊಂಡಿರಬಹುದು. ಆದರೆ ಸಾರ್ವಜನಿಕ ಜೀವನದಲ್ಲಿರುವವರು ಈ ರೀತಿಯಾಗಿ ವರ್ತಿಸಬಾರದು ಎಂದು ಶಾಸಕ ಸುರೇಶ್‌ ಗೌಡ ತಿಳಿಸಿದ್ದರು. ಪುತ್ರಿಯದ್ದು ತಪ್ಪಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ತಾವೇ ಮುಂದಾಗುವುದಾಗಿ ಹೇಳಿದ್ದ ಅವರು, ಬಳಿಕ ಪುತ್ರಿಯ ವರ್ತನೆಗೆ ಸಂಬಂಧಿಸಿದಂತೆ ಕ್ಷಮೆಯನ್ನೂ ಕೋರಿದ್ದರು.

ಇದೀಗ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತವಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ನ್ಯಾಯಾಲಯದ ಆದೇಶದ ಬಳಿಕ ಪೊಲೀಸರು ಕೈಗೊಳ್ಳುವ ಮುಂದಿನ ಕ್ರಮದ ಮೇಲೆ ಎಲ್ಲರ ಗಮನ ನೆಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು