ಮೋದಿ–ಪೆಜೆಶ್ಕಿಯನ್ ಭೇಟಿ ಬೆನ್ನಲ್ಲೇ ಭಾರತಕ್ಕೆ ಅಮೆರಿಕದ ಎಚ್ಚರಿಕೆ; ಇರಾನ್ ಜೊತೆಗಿನ ವಹಿವಾಟಿಗೆ ನಿರ್ಬಂಧದ ಸಂದೇಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರನ್ನು ಭೇಟಿಯಾದ ಬೆನ್ನಲ್ಲೇ ಭಾರತಕ್ಕೆ ಅಮೆರಿಕದಿಂದ ಸೂಕ್ಷ್ಮವಾದರೂ ಕಠಿಣ ಸಂದೇಶ ರವಾನೆಯಾಗಿದೆ. ಇರಾನ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಹೊಂದಿರುವ ಸ್ವತಂತ್ರ ಹಕ್ಕನ್ನು ರಾಷ್ಟ್ರಗಳಿಗೆ ಒಪ್ಪಿಕೊಂಡಿರುವ ಅಮೆರಿಕ, ತನ್ನ ನಿರ್ಬಂಧಗಳನ್ನು ಉಲ್ಲಂಘಿಸಿ ಇರಾನ್‌ಗೆ ಆದಾಯ ತಂದುಕೊಡುವ ಆರ್ಥಿಕ ಅಥವಾ ವಾಣಿಜ್ಯ ವ್ಯವಸ್ಥೆಗಳಿಗೆ ನೆರವು ನೀಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

ಕಿರ್ಗಿಸ್ತಾನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಮತ್ತು ಪೆಜೆಶ್ಕಿಯನ್ ನಡುವೆ ಮಾತುಕತೆ ನಡೆದಿದ್ದು, ಈ ಭೇಟಿಯ ಬಳಿಕ ಭಾರತ–ಇರಾನ್ ನಡುವೆ ಹೊಸ ವಾಣಿಜ್ಯ ಒಪ್ಪಂದಕ್ಕೆ ಮುಂದಾಗಿರುವ ವರದಿಗಳನ್ನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಳ್ಳಿಹಾಕಿದ್ದಾರೆ. ಶೃಂಗಸಭೆಯ ವೇಳೆ ಯಾವುದೇ ಹೊಸ ವ್ಯಾಪಾರ ಒಪ್ಪಂದ ನಡೆದಿರುವ ಮಾಹಿತಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸ್ವತಂತ್ರ ವಿದೇಶಾಂಗ ನೀತಿಗೆ ಮನ್ನಣೆ
ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿ ಇದೆ ಎಂಬುದನ್ನು ಅಮೆರಿಕ ಒಪ್ಪಿಕೊಳ್ಳುತ್ತದೆ ಎಂದು ರೂಬಿಯೊ ಹೇಳಿದ್ದಾರೆ. ಹಲವು ರಾಷ್ಟ್ರಗಳು ಇರಾನ್ ಸರ್ಕಾರದೊಂದಿಗೆ ರಾಜತಾಂತ್ರಿಕ ಸಂಪರ್ಕ ಹೊಂದಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.

ಆದರೆ, ಇರಾನ್‌ಗೆ ಆದಾಯ ತಂದುಕೊಡುವಂತಹ ವ್ಯವಸ್ಥೆಗಳಿಗೆ ಬೆಂಬಲ ನೀಡುವುದನ್ನು ಯಾವುದೇ ದೇಶವೂ ತಪ್ಪಿಸಬೇಕು ಎಂಬುದು ಅಮೆರಿಕದ ನಿಲುವಾಗಿದೆ. ಇರಾನ್‌ಗೆ ದೊರೆಯುವ ಹಣವನ್ನು ಭಯೋತ್ಪಾದನೆಗೆ ಹಾಗೂ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂಬ ಆರೋಪವನ್ನು ವಾಷಿಂಗ್ಟನ್ ಮುಂದಿಟ್ಟಿದೆ.

ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿ ಇರಾನ್‌ಗೆ ಆರ್ಥಿಕ ನೆರವು ಅಥವಾ ವಾಣಿಜ್ಯ ಸಹಕಾರ ನೀಡುವ ರಾಷ್ಟ್ರಗಳ ಮೇಲೂ ನಿರ್ಬಂಧ ವಿಧಿಸುವ ಸಾಧ್ಯತೆಯನ್ನು ರೂಬಿಯೊ ಸ್ಪಷ್ಟಪಡಿಸಿದ್ದಾರೆ.

ಇರಾನ್‌ಗೆ ಪರಮಾಣು ಬಾಂಬ್ ಇಲ್ಲ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿರುವವರೆಗೆ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ರೂಬಿಯೊ ಪುನರುಚ್ಚರಿಸಿದ್ದಾರೆ. ಅಗತ್ಯವಿದ್ದರೆ ಸೇನಾ ಕ್ರಮಕ್ಕೂ ಅಮೆರಿಕ ಹಿಂಜರಿಯುವುದಿಲ್ಲ ಎಂಬ ಸಂದೇಶವನ್ನು ವಾಷಿಂಗ್ಟನ್ ನೀಡಿದೆ.

ಇದರ ನಡುವೆ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿರುವುದು ಮಧ್ಯಪ್ರಾಚ್ಯದ ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿದೆ. ಇರಾನ್ ಕೂಡ ಅಮೆರಿಕದ ಒತ್ತಡ ಮತ್ತು ನಿರ್ಬಂಧಗಳನ್ನು ಎದುರಿಸಲು ಹೊಸ ಸಮರ ತಂತ್ರ ರೂಪಿಸಿರುವುದಾಗಿ ಎಚ್ಚರಿಕೆ ನೀಡಿದೆ.

ಭಾರತದ ಪಾಲಿಗೆ ಚಬಹಾರ್ ಸವಾಲು
ಅಮೆರಿಕದ ಎಚ್ಚರಿಕೆ ಭಾರತದ ಪಾಲಿಗೆ ವಿಶೇಷ ಮಹತ್ವ ಪಡೆದುಕೊಂಡಿದೆ. ಇರಾನ್‌ನ ಚಬಹಾರ್ ಬಂದರು ಯೋಜನೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದ್ದು, ಅಫ್ಘಾನಿಸ್ತಾನ ಹಾಗೂ ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ಸಂಪರ್ಕ ಸಾಧಿಸಲು ಈ ಬಂದರು ಭಾರತದ ಪಾಲಿಗೆ ಪ್ರಮುಖ ಕಾರ್ಯತಂತ್ರದ ಕೇಂದ್ರವಾಗಿದೆ.

ಈ ಹಿಂದೆ ಚಬಹಾರ್ ಯೋಜನೆಗೆ ಸಂಬಂಧಿಸಿದಂತೆ ಅಮೆರಿಕದಿಂದ ಭಾರತಕ್ಕೆ ಕೆಲವು ನಿರ್ಬಂಧ ವಿನಾಯಿತಿಗಳು ಲಭ್ಯವಾಗಿದ್ದವು. ಆದರೆ ಟ್ರಂಪ್ ಆಡಳಿತ ಇರಾನ್ ವಿರುದ್ಧ ಕಠಿಣ ನಿಲುವು ತಾಳಿರುವ ಹಿನ್ನೆಲೆಯಲ್ಲಿ, ಚಬಹಾರ್ ಯೋಜನೆಯನ್ನು ಮುಂದುವರಿಸುವುದರ ಜೊತೆಗೆ ಅಮೆರಿಕದ ನಿರ್ಬಂಧ ನೀತಿಯನ್ನೂ ಗಮನದಲ್ಲಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಭಾರತಕ್ಕೆ ಎದುರಾಗಿದೆ.

ತೈಲ ವ್ಯಾಪಾರದಲ್ಲೂ ಪರಿಣಾಮದ ಆತಂಕ
ಇರಾನ್ ಮೇಲಿನ ಅಮೆರಿಕದ ಹಿಂದಿನ ನಿರ್ಬಂಧಗಳ ಹಿನ್ನೆಲೆಯಲ್ಲಿ ಭಾರತವು ಇರಾನ್‌ನಿಂದ ಕಚ್ಚಾ ತೈಲ ಆಮದನ್ನು ಬಹುತೇಕ ಸ್ಥಗಿತಗೊಳಿಸಿ, ರಷ್ಯಾ ಹಾಗೂ ಕೊಲ್ಲಿ ರಾಷ್ಟ್ರಗಳತ್ತ ತನ್ನ ಇಂಧನ ಆಮದು ಮೂಲಗಳನ್ನು ವಿಸ್ತರಿಸಿತ್ತು.

ಹೀಗಾಗಿ, ಈಗಿನ ಅಮೆರಿಕದ ಎಚ್ಚರಿಕೆ ಕೇವಲ ಭಾರತ–ಇರಾನ್ ಸಂಬಂಧಕ್ಕೆ ಸೀಮಿತವಾಗದೆ, ಭಾರತದ ಇಂಧನ ಭದ್ರತೆ, ಸರಕು ಸಾಗಣೆ ಮಾರ್ಗಗಳು ಮತ್ತು ಮಧ್ಯ ಏಷ್ಯಾದೊಂದಿಗೆ ಸಂಪರ್ಕ ಸಾಧಿಸುವ ದೀರ್ಘಕಾಲೀನ ಕಾರ್ಯತಂತ್ರದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಒಂದೆಡೆ ಇರಾನ್‌ನೊಂದಿಗೆ ತನ್ನ ಸಾಂಪ್ರದಾಯಿಕ ಹಾಗೂ ಕಾರ್ಯತಂತ್ರದ ಸಂಬಂಧವನ್ನು ಕಾಪಾಡಿಕೊಳ್ಳುವುದು, ಮತ್ತೊಂದೆಡೆ ಅಮೆರಿಕದೊಂದಿಗೆ ಬೆಳೆದಿರುವ ರಾಜತಾಂತ್ರಿಕ ಮತ್ತು ಆರ್ಥಿಕ ಬಾಂಧವ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು.. ಈ ಎರಡರ ನಡುವೆ ಭಾರತ ಇದೀಗ ಅತ್ಯಂತ ಸೂಕ್ಷ್ಮ ರಾಜತಾಂತ್ರಿಕ ಸಮತೋಲನ ಕಾಯ್ದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

Related Articles

ಇತ್ತೀಚಿನ ಸುದ್ದಿಗಳು