ಸಂಚಾರಿ ನಿಯಮ ಉಲ್ಲಂಘನೆ; ಪೊಲೀಸ್ ವಾಹನಗಳ ವಿರುದ್ಧವೇ 3,366 ಪ್ರಕರಣ; ಸರ್ಕಾರಿ ವಾಹನಗಳಿಂದ ₹19.23 ಕೋಟಿ ದಂಡ ಬಾಕಿ

ಬೆಂಗಳೂರು: ಜನಸಾಮಾನ್ಯರು ಸಂಚಾರಿ ನಿಯಮ ಉಲ್ಲಂಘಿಸಿದರೆ ಇ-ಚಲನ್ ಮೂಲಕ ದಂಡದ ನೋಟಿಸ್ ಕ್ಷಣಾರ್ಧದಲ್ಲೇ ಮೊಬೈಲ್‌ಗೆ ತಲುಪುತ್ತದೆ. ಆದರೆ ಕಾನೂನು ಪಾಲನೆ ಹಾಗೂ ಸಾರ್ವಜನಿಕರಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕಾದ ಸರ್ಕಾರಿ ಇಲಾಖೆಗಳ ವಾಹನಗಳೇ ನಿಯಮ ಉಲ್ಲಂಘಿಸಿದರೆ.. ಹೌದು. ಸರ್ಕಾರಿ ವಾಹನಗಳೇ ಈಗ ನಿಯಮ ಉಲ್ಲಂಘನೆಯಲ್ಲಿ ಅತಿ ಹೆಚ್ಚು ಮುಂದಿದೆ ಎಂದು ಬಿಡುಗಡೆಯಾದ ದಾಖಲೆಗಳು ಹೇಳಿವೆ.

ಗೃಹ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ ಮೂರೂವರೆ ವರ್ಷಗಳಲ್ಲಿ ಪೊಲೀಸ್ ಇಲಾಖೆಯ ವಾಹನಗಳ ವಿರುದ್ಧವೇ 3,366 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. 2023ರಲ್ಲಿ 21 ಪ್ರಕರಣಗಳಿದ್ದರೆ, 2024ರಲ್ಲಿ ಬರೋಬ್ಬರಿ 1,494 ಪ್ರಕರಣಗಳು ದಾಖಲಾಗಿವೆ. 2025ರಲ್ಲಿ 1,251 ಹಾಗೂ 2026ರ ಜುಲೈ ಅಂತ್ಯದವರೆಗೆ 600 ಪ್ರಕರಣಗಳು ದಾಖಲಾಗಿವೆ.

ಇದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ವಾಹನಗಳು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿರುವುದು ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. ಕಳೆದ ಮೂರೂವರೆ ವರ್ಷಗಳಲ್ಲಿ ಸರ್ಕಾರಿ ವಾಹನಗಳ ವಿರುದ್ಧ ಒಟ್ಟು 82,478 ಪ್ರಕರಣಗಳು ದಾಖಲಾಗಿವೆ.

2023ರಲ್ಲಿ 1,055 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ 35,832 ಹಾಗೂ 2025ರಲ್ಲಿ ಗರಿಷ್ಠ 38,282 ಪ್ರಕರಣಗಳು ದಾಖಲಾಗಿವೆ. 2026ರ ಜುಲೈ ಅಂತ್ಯದ ವೇಳೆಗೆ 7,309 ಪ್ರಕರಣಗಳು ದಾಖಲಾಗಿರುವುದು ವರದಿಯಾಗಿದೆ.

ದಂಡ ವಿಧಿಸುವುದರಲ್ಲಿ ಭಾರಿ ಏರಿಕೆ, ವಸೂಲಿಯಲ್ಲಿ ಮಾತ್ರ ಹಿನ್ನಡೆ
ಸರ್ಕಾರಿ ವಾಹನಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ವಿಧಿಸಲಾದ ದಂಡದ ಮೊತ್ತಕ್ಕೂ, ವಸೂಲಾದ ಮೊತ್ತಕ್ಕೂ ಭಾರಿ ಅಂತರವಿದೆ.

  • 2023: ₹5.41 ಲಕ್ಷ ದಂಡ — ₹1.19 ಲಕ್ಷ ವಸೂಲಿ; ₹4.22 ಲಕ್ಷ ಬಾಕಿ
  • 2024: ₹17.48 ಕೋಟಿ ದಂಡ — ₹35.27 ಲಕ್ಷ ವಸೂಲಿ; ₹17.13 ಕೋಟಿ ಬಾಕಿ
  • 2025: ₹2.09 ಕೋಟಿ ದಂಡ — ₹6.61 ಲಕ್ಷ ವಸೂಲಿ; ₹2.02 ಕೋಟಿ ಬಾಕಿ
  • 2026ರ ಜುಲೈವರೆಗೆ: ₹40.10 ಲಕ್ಷ ದಂಡ — ₹4.64 ಲಕ್ಷ ವಸೂಲಿ; ₹36.05 ಲಕ್ಷ ಬಾಕಿ

ಹೀಗಾಗಿ ಸರ್ಕಾರಿ ಹಾಗೂ ಪೊಲೀಸ್ ಇಲಾಖೆಯ ವಾಹನಗಳಿಂದ ಸಂಗ್ರಹಿಸಬೇಕಾದ ದಂಡದ ಮೊತ್ತದಲ್ಲಿ ಸುಮಾರು ₹19.23 ಕೋಟಿ ಬಾಕಿ ಉಳಿದಿರುವುದು ಗೃಹ ಇಲಾಖೆಯ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ಸಾಮಾನ್ಯ ವಾಹನ ಸವಾರರಿಂದ ಸಂಚಾರಿ ನಿಯಮ ಉಲ್ಲಂಘನೆಗೆ ಕಟ್ಟುನಿಟ್ಟಾಗಿ ದಂಡ ವಸೂಲಿ ಮಾಡುವ ವ್ಯವಸ್ಥೆಯ ನಡುವೆ, ಸರ್ಕಾರಿ ವಾಹನಗಳೇ ನಿಯಮ ಉಲ್ಲಂಘಿಸಿ ದಂಡ ಪಾವತಿಸದೆ ಉಳಿದಿರುವುದು ‘ಕಾನೂನು ಎಲ್ಲರಿಗೂ ಒಂದೇನಾ?’ ಎಂಬ ಪ್ರಶ್ನೆ ಹುಟ್ಟುಹಾಕಿದೆ. ನಿಯಮ ಪಾಲನೆಯ ಬಗ್ಗೆ ಸಾರ್ವಜನಿಕರಿಗೆ ಮಾದರಿಯಾಗಬೇಕಾದ ಇಲಾಖೆಗಳೇ ಮೊದಲು ನಿಯಮ ಪಾಲಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

Related Articles

ಇತ್ತೀಚಿನ ಸುದ್ದಿಗಳು