ಫುಟ್‌ಪಾತ್‌ ಒತ್ತುವರಿ ಮಾಡಿದ್ರೆ ಎಫ್‌ಐಆರ್ ದಾಖಲು – ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ನಗರದ ವಿವಿಧೆಡೆ ಈಗಾಗಲೇ ತೆರವುಗೊಳಿಸಿರುವ ಫುಟ್‌ಪಾತ್‌ಗಳಲ್ಲಿ ಮತ್ತೆ  ಒತ್ತುವರಿ (footpath encroachers) ಮಾಡುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು (Greater Bengaluru Development) ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಫುಟ್‌ಪಾತ್ ಒತ್ತುವರಿ ಕುರಿತಂತೆ ನಡೆದ ವರ್ಚುವಲ್‌ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಮಸ್ಯೆ ಪರಿಶೀಲಿಸಿದ ಸಚಿವರು, ಒತ್ತುವರಿ ತೆರವುಗೊಳಿಸಿದ ಬಳಿಕ ಅದೇ ಸ್ಥಳದಲ್ಲಿ ಮತ್ತೆ ಒತ್ತುವರಿ ಕಾಣಿಸಿಕೊಳ್ಳುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಶಾಶ್ವತ ವ್ಯವಸ್ಥೆ ರೂಪಿಸಬೇಕು. ಪ್ರತಿ ನಗರ ಪಾಲಿಕೆ ವ್ಯಾಪ್ತಿಯಲ್ಲೂ ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳನ್ನೊಳಗೊಂಡ ಜಂಟಿ ಟಾಸ್ಕ್‌ಫೋರ್ಸ್ ಇರಬೇಕು. ತೆರವುಗೊಳಿಸಿರುವ ಫುಟ್‌ಪಾತ್‌ಗಳನ್ನು ನಿಯಮಿತವಾಗಿ ಹಾಗೂ ಅನಿರೀಕ್ಷಿತವಾಗಿ ಪರಿಶೀಲಿಸಬೇಕು. ಮರು ಒತ್ತುವರಿ ಕಂಡುಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬೈರೇಗೌಡ ನಿರ್ದೇಶಿಸಿದರು.

ಮರುಒತ್ತುವರಿ ಪ್ರಕರಣಗಳನ್ನು ತಕ್ಷಣ ಗುರುತಿಸಿ, ಛಾಯಾಚಿತ್ರ ಹಾಗೂ ಜಿಯೋ-ಟ್ಯಾಗ್‌ ಮಾಡಿದ ದಾಖಲೆಗಳೊಂದಿಗೆ ವರದಿ ಮಾಡಬೇಕು. ಮಾರ್ಷಲ್‌ಗಳು ಮತ್ತು ಬೀಟ್‌ ಪೊಲೀಸರು ಜಂಟಿಯಾಗಿ ನಿಯಮಿತ ತಪಾಸಣೆ ನಡೆಸಬೇಕು. ಎಫ್‌ಐಆರ್ ದಾಖಲಿಸುವುದು, ಒತ್ತುವರಿಗೆ ಬಳಸಿದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವುದು ಹಾಗೂ ನಿಯಮಾನುಸಾರ ಹೆಚ್ಚಿನ ದಂಡ ವಿಧಿಸುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಬೀದಿ ವ್ಯಾಪಾರಕ್ಕೆ ನಿರ್ಬಂಧ ಅಥವಾ ನಿಷೇಧ ಇರುವ ರಸ್ತೆಗಳನ್ನು ಸ್ಪಷ್ಟವಾಗಿ ಗುರುತಿಸಿ, ಹೆಚ್ಚು ಸಂಚಾರವಿರುವ ಪ್ರಮುಖ ರಸ್ತೆಗಳಲ್ಲಿ ಪಾದಚಾರಿಗಳು ಹಾಗೂ ವಾಹನಗಳ ಸಂಚಾರಕ್ಕೆ ಯಾವುದೇ ರೀತಿಯ ಅಡಚಣೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮರುಒತ್ತುವರಿ ಪತ್ತೆ ಹಾಗೂ ಕಾನೂನು ಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರ ಮಟ್ಟದಲ್ಲಿ ಜಂಟಿ ಆದೇಶ/ಸುತ್ತೋಲೆ ಹೊರಡಿಸಬೇಕು ಎಂದು ಸಚಿವರು ನಿರ್ದೇಶಿಸಿದರು.

Related Articles

ಇತ್ತೀಚಿನ ಸುದ್ದಿಗಳು