72 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸದಿದ್ದರೆ ಮತ್ತೆ ಠಾಣೆಯಲ್ಲಿ ಬಂದು ಕೂರುತ್ತೇವೆ: ನಿಶು ಆಜಾದ್

ಹೊಸದೆಹಲಿ: ಜಂತರ್ ಮಂತರ್‌ನಲ್ಲಿ ತಮ್ಮ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಚ್ಚಿಕೊಳ್ಳುತ್ತಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ನನ್ನು 72 ಗಂಟೆಗಳ ಒಳಗೆ ಬಂಧಿಸುವುದಾಗಿ ದೆಹಲಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ತಿಳಿಸಿದ್ದಾರೆ. ಪ್ರಕರಣ ನಡೆದು 2 ತಿಂಗಳು ಕಳೆದರೂ ಆರೋಪಿ ವಿರುದ್ಧ ಕೊಲೆ ಯತ್ನ (ಸೆಕ್ಷನ್ 307) ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸದೆ ಆತನನ್ನು ಮುಕ್ತವಾಗಿ ಓಡಾಡಲು ಬಿಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಸಂಸದ ಚಂದ್ರಶೇಖರ್ ಆಜಾದ್ ಜತೆಗೂಡಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಎಎನ್‌ಐ ಜತೆ ಮಾತನಾಡಿದ ನಿಶು, “ತನಿಖಾಧಿಕಾರಿಗಳು ನಮ್ಮ ಬೇಡಿಕೆಗಳಿಗೆ ಸಮ್ಮತಿಸಿದ್ದು, ಎಫ್‌ಐಆರ್‌ನಲ್ಲಿ ಕೊಲೆ ಯತ್ನ ಹಾಗೂ ಎಸ್‌ಸಿ/ಎಸ್‌ಟಿ ಸೆಕ್ಷನ್‌ಗಳನ್ನು ಸೇರಿಸುವುದಾಗಿ ಭರವಸೆ ನೀಡಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ನಿರಂತರವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ಅತ್ಯಾಚಾರ ಬೆದರಿಕೆ ಹಾಕುತ್ತಿದ್ದವರ ವಿರುದ್ಧವೂ ಪ್ರತ್ಯೇಕ ದೂರು ನೀಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಮಾನಸಿಕ ಕಿರುಕುಳ ತಾಳಲಾರದೆ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೂ ತಲುಪಿದ್ದೆ” ಎಂದು ಭಾವುಕರಾದರು.

ಆರೋಪಿಗಳು ಬಹಿರಂಗವಾಗಿಯೇ ಬೆದರಿಕೆ ಹಾಕುತ್ತಿದ್ದು, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಜೀವಭಯವಿರುವುದರಿಂದ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಅವರು ಮನವಿ ಮಾಡಿದರು. “ನಾವು ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದನ್ನು ಸಂವಿಧಾನ ನಮಗೆ ನೀಡಿರುವ ಹಕ್ಕು. ಆದರೆ ಪ್ರಶ್ನೆ ಕೇಳಿದವರ ಮೇಲೆ ಹಲ್ಲೆ ನಡೆಸಿ, ಅದನ್ನು ರಾಜಕೀಯವಾಗಿ ತಿರುಚಲಾಗುತ್ತಿದೆ. ಪೊಲೀಸರು ನೀಡಿದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಆರೋಪಿಯನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಠಾಣೆಯ ಎದುರು ಹೋರಾಟ ಮುಂದುವರಿಸುತ್ತೇವೆ” ಎಂದು ನಿಶು ಎಚ್ಚರಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು