ಕಲ್ಲು ಮಿಶ್ರಿತ ಕಳಪೆ ರಾಗಿ ವಿತರಣೆ ಆರೋಪ 30 ಕೆಜಿ ರಾಗಿಯಲ್ಲಿ 13 ಕೆಜಿ ಕಲ್ಲೇ ಇದೆ ಎಂದ ಗ್ರಾಹಕ

ಕೊಳ್ಳೇಗಾಲ : ತಾಲ್ಲೂಕಿನ ಕಾಮಗೆರೆ ಗ್ರಾಮದ ಪಿಎಸಿಸಿಬಿ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಕಲ್ಲು ಮಿಶ್ರಿತ ಕಳಪೆ ರಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಗ್ರಾಹಕ ಮಧು ಅವರು ಆರೋಪಿಸಿದ್ದಾರೆ.

ನಮ್ಮ ಬಿಪಿಎಲ್ ಕಾರ್ಡ್ ನಲ್ಲಿ ಐದು ಜನ ಸದಸ್ಯರಿದ್ದು, ತಲಾ 6 ಕೆಜಿಯಂತೆ 30 ಕೆಜಿ ರಾಗಿ ವಿತರಣೆ ಮಾಡಿದ್ದಾರೆ. ಆದರೆ ನೀಡಿರುವ ರಾಗಿಯಲ್ಲಿ 17 ಕೆಜಿ ರಾಗಿ ಇದ್ದರೆ, 12 ಕೆಜಿಗೂ ಹೆಚ್ಚು ಕಲ್ಲು ಮತ್ತು ಮಣ್ಣು ಇದೆ. ಇದನ್ನು ಮೊರದಲ್ಲಿ ಹಾಕಿ ಜರಡಿ ಹಿಡಿದರೆ ಕಲ್ಲೇ ಹೆಚ್ಚು ಸಿಗುತ್ತಿದೆ ಎಂದು ವಿಡಿಯೋ ಮಾಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡ ಜನರಿಗೆ ಅನುಕೂಲವಾಗಲಿ ಎಂದು ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಕೊಂಗರಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಗುಣಮಟ್ಟವಿಲ್ಲದ ಕಲ್ಲು ಮಿಶ್ರಿತ ರಾಗಿ ನೀಡಲಾಗುತ್ತಿದೆ. ಸರ್ಕಾರ ನಾವು ಹಕ್ಕಿ ರಾಗಿ ಕೊಡುತ್ತೇವೆ ಎಂದು ಹೇಳುತ್ತದೆ, ಆದರೆ ಇಲ್ಲಿ ವಿತರಣೆಯಾಗುತ್ತಿರುವುದು ಕಲ್ಲು ಮಿಶ್ರಿತ ರಾಗಿ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಗುಣಮಟ್ಟದ ಪಡಿತರ ವಿತರಣೆಯಾಗುವಂತೆ ಕ್ರಮ ವಹಿಸಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ.

ಈ ಕುರಿತು ಆಹಾರ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು