ಸುರಂಗ ರಸ್ತೆ ಯೋಜನೆಯಲ್ಲಿ ₹40,000 ಕೋಟಿ ನಿಧಿ ಅಡಗಿದೆ: ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರಸ್ತಾಪಿಸಲಾಗಿರುವ ಸುರಂಗ ರಸ್ತೆ (ಟನಲ್ ರೋಡ್) ಯೋಜನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಲು ತೀವ್ರ ಹಠ ಹಿಡಿದಿದೆ. ಈ ಯೋಜನೆಯ ಕೊನೆಯಲ್ಲಿ ₹40,000 ಕೋಟಿ ಮೌಲ್ಯದ ನಿಧಿ ಅಡಗಿದೆ ಎಂಬಂತೆ ಸರ್ಕಾರ ವರ್ತಿಸುತ್ತಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಂಗ ರಸ್ತೆ ನಿರ್ಮಾಣದ ನೆಪದಲ್ಲಿ ನಗರದ ಉದ್ಯಾನವನಗಳು, ಕೆರೆಗಳು ಹಾಗೂ ವೈಜ್ಞಾನಿಕ ನಗರ ಯೋಜನೆಯನ್ನು ರಕ್ಷಿಸುವ ಪ್ರಮುಖ ಕಾನೂನುಗಳನ್ನು ಸರ್ಕಾರ ಬಲಿಕೊಟ್ಟಿದೆ ಎಂದು ಆರೋಪಿಸಿದರು.

ಸುರಂಗ ರಸ್ತೆ ಯೋಜನೆಗಾಗಿ ಸ್ಯಾಂಕಿ ಕೆರೆ, ಲಾಲ್‌ಬಾಗ್ ಮತ್ತು ಎನ್.ಆರ್. ಕಾಲೋನಿಯ ಕೃಷ್ಣರಾವ್ ಪಾರ್ಕ್‌ಗಳ ಜಾಗವನ್ನು ವಶಪಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ. ಹೈಕೋರ್ಟ್‌ನಲ್ಲಿ ಎದುರಾಗಬಹುದಾದ ಕಾನೂನು ತೊಡಕುಗಳನ್ನು ತಪ್ಪಿಸಲು, ಸರ್ಕಾರವು ಉದ್ಯಾನವನ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದು ಶೇ. 5ರಷ್ಟು ಪಾರ್ಕ್ ಜಾಗವನ್ನು ಅನ್ಯ ಉದ್ದೇಶಗಳಿಗೆ ಬಳಸಲು ಹಾಗೂ ಮಾರಾಟ ಮಾಡಲು ಕಾನೂನುಬದ್ಧಗೊಳಿಸಿತ್ತು.

ಸಾರ್ವಜನಿಕರ ತೀವ್ರ ಪ್ರತಿಭಟನೆಯ ನಂತರ ಈ ತಿದ್ದುಪಡಿಯನ್ನು ಮರುಪರಿಶೀಲಿಸುವುದಾಗಿ ಸರ್ಕಾರ ಹೇಳಿದೆಯಾದರೂ, ಹಿಂದಿನ ಕಾಯ್ದೆಯನ್ನೇ ಸಂಪೂರ್ಣವಾಗಿ ಮರುಸ್ಥಾಪಿಸುವವರೆಗೆ ನಾಗರಿಕರ ಹೋರಾಟ ಮುಂದುವರಿಯಲಿದೆ ಎಂದರು.

ಇದಲ್ಲದೆ, ಹೆಬ್ಬಾಳ ಕೆರೆ ವ್ಯಾಪ್ತಿಯಲ್ಲಿ ಕಿರು ಸುರಂಗ ಯೋಜನೆಗಾಗಿ 3.5 ಎಕರೆ ಕೆರೆ ಜಾಗವನ್ನು ಪಡೆಯಲು ರಾಜ್ಯ ಸರ್ಕಾರವು ‘ಕರ್ನಾಟಕ ಕೆರೆ ಸಂರಕ್ಷಣಾ ಕಾಯ್ದೆ’ಗೆ ತಿದ್ದುಪಡಿ ತಂದಿದೆ. ಇದರ ಮೂಲಕ ಕೆರೆಗಳ ಬಫರ್ ವಲಯವನ್ನು 30 ಮೀಟರ್‌ನಿಂದ ಕೇವಲ 3 ಮೀಟರ್‌ಗೆ ಇಳಿಸಲಾಗಿದೆ. ಇದು ವಾಸ್ತವದಲ್ಲಿ ಯಾವುದೇ ಬಫರ್ ವಲಯವೇ ಇಲ್ಲದಂತಹ ಸ್ಥಿತಿಯನ್ನು ನಿರ್ಮಿಸಿದ್ದು, ನಗರದ ಎಲ್ಲಾ ಕೆರೆಗಳ ಅಸ್ತಿತ್ವಕ್ಕೆ ಮಾರಕವಾಗಿದೆ.

ಬೆಂಗಳೂರು ತನ್ನ ನೀರಿನ ಅಗತ್ಯಕ್ಕಾಗಿ ಅಂತರ್ಜಲ ಮತ್ತು ಬೋರ್‌ವೆಲ್‌ಗಳನ್ನು ಅವಲಂಬಿಸಿರುವಾಗ, ಕೆರೆಗಳನ್ನು ನಾಶಪಡಿಸಿದರೆ ನಗರದ ಭವಿಷ್ಯದ ಜಲ ಭದ್ರತೆ ಸಂಪೂರ್ಣವಾಗಿ ಅಪಾಯಕ್ಕೆ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಗರದ ವೈಜ್ಞಾನಿಕ ಯೋಜನೆಗಾಗಿ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ 18 ವರ್ಷಗಳ ನಾಗರಿಕ ಹೋರಾಟದ ಫಲವಾಗಿ ಜಾರಿಗೆ ತರಲಾಗಿದ್ದ ‘ಬಿಎಂಎಲ್‌ಟಿಎ’ (BMLTA) ಕಾಯ್ದೆಯ ಸೆಕ್ಷನ್ 19 ಅನ್ನು ಕೂಡ ಸರ್ಕಾರ ಹಿಂಪಡೆದಿದೆ ಎಂದು ಸೂರ್ಯ ದೂರಿದರು. ಈ ನಿಯಮದ ಪ್ರಕಾರ ಎಲ್ಲಾ ಮೂಲಸೌಕರ್ಯ ಯೋಜನೆಗಳನ್ನು ಸ್ವತಂತ್ರ ಸಂಸ್ಥೆಯಾದ ಬಿಎಂಎಲ್‌ಟಿಎ ಪರಿಶೀಲನೆಗೆ ಒಳಪಡಿಸಬೇಕಿತ್ತು. ಆದರೆ ಸುರಂಗ ರಸ್ತೆಗೆ ಯಾವುದೇ ತಡೆ ಇರಬಾರದು ಎಂಬ ಕಾರಣಕ್ಕೆ ಈ ಕಾಯ್ದೆಯನ್ನೂ ದುರ್ಬಲಗೊಳಿಸಲಾಗಿದೆ.

ಉದ್ಯಾನವನ, ಕೆರೆ ಸಂರಕ್ಷಣೆ ಮತ್ತು ಬಿಎಂಎಲ್‌ಟಿಎ ಕಾಯ್ದೆಗಳಿಗೆ ತಂದಿರುವ ಜನವಿರೋಧಿ ತಿದ್ದುಪಡಿಗಳನ್ನು ಸರ್ಕಾರ ಸಂಪೂರ್ಣವಾಗಿ ಹಿಂಪಡೆಯುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದರು.

Related Articles

ಇತ್ತೀಚಿನ ಸುದ್ದಿಗಳು