ದೆಹಲಿಯಲ್ಲಿ ಐದು ಅಂತಸ್ತಿನ ಪಿಜಿ ಹಾಸ್ಟೆಲ್ ಕುಸಿತ: ಐವರು ಸಾವು, ಅವಶೇಷಗಳಡಿ 50ಕ್ಕೂ ಹೆಚ್ಚು ಮಂದಿ ಸಿಲುಕಿರುವ ಶಂಕೆ

ದೆಹಲಿ: ದೇಶದ ರಾಜಧಾನಿ ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಐದು ಅಂತಸ್ತಿನ ಖಾಸಗಿ ಪಿಜಿ (Paying Guest) ಹಾಸ್ಟೆಲ್ ಕಟ್ಟಡ ದಿಢೀರನೆ ಕುಸಿದುಬಿದ್ದ ಪರಿಣಾಮ ಐವರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸುಮಾರು 50ಕ್ಕೂ ಹೆಚ್ಚು ಮಂದಿ, ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಆತಂಕ ವ್ಯಕ್ತವಾಗಿದೆ.

ದೆಹಲಿ ವಿಶ್ವವಿದ್ಯಾಲಯದ ಸೌತ್ ಕ್ಯಾಂಪಸ್ ಸಮೀಪವಿರುವ ಆರ್.ಕೆ. ಪುರಂ ವ್ಯಾಪ್ತಿಯ ಸತ್ಯ ನಿಕೇತನದಲ್ಲಿ ಮಧ್ಯಾಹ್ನ 1:30 ರ ಸುಮಾರಿಗೆ ಈ ಭೀಕರ ದುರಂತ ಸಂಭವಿಸಿದೆ. ಸುಮಾರು 50 ವರ್ಷಗಳಷ್ಟು ಹಳೆಯದಾದ ಈ ಕಟ್ಟಡದಲ್ಲಿ ಗುರುಗ್ರಾಮ ಮೂಲದ ವ್ಯಕ್ತಿಯೊಬ್ಬರು ‘ಹಾಸ್ಟೆಲ್ ಡೇಜ್’ ಹೆಸರಿನಲ್ಲಿ ವಿದ್ಯಾರ್ಥಿಗಳ ಪಿಜಿ ಹಾಸ್ಟೆಲ್ ನಡೆಸುತ್ತಿದ್ದರು. ಕಟ್ಟಡ ಕುಸಿಯುವ ವೇಳೆ ಒಳಗೆ ಸುಮಾರು 50 ಮಂದಿ ಇದ್ದು, ಅವರಲ್ಲಿ ಬಹುತೇಕರು ದೆಹಲಿ ವಿವಿಯ ವಿದ್ಯಾರ್ಥಿಗಳಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅವಶೇಷಗಳಡಿಯಿಂದ ರಕ್ಷಣಾ ತಂಡಗಳು ಇದುವರೆಗೆ 8-10 ಮಂದಿಯನ್ನು ಹೊರತೆಗೆದಿದ್ದು, ನಾಲ್ವರ ಸ್ಥಿತಿ ತೀರಾ ಚಿಂತಾಜನಕವಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಬಿಜೆಪಿ ಶಾಸಕ ಅನಿಲ್ ಶರ್ಮಾ ಆತಂಕ ವ್ಯಕ್ತಪಡಿಸಿದ್ದು, ಅವಶೇಷಗಳಡಿ ಸಿಲುಕಿರುವ ಹಲವು ವಿದ್ಯಾರ್ಥಿಗಳು ಒಳಗಿನಿಂದಲೇ ಮೊಬೈಲ್ ಕರೆ ಮಾಡಿ ತಮ್ಮನ್ನು ರಕ್ಷಿಸುವಂತೆ ಅಂಗಲಾಚುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ದುರಂತಕ್ಕೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ರೇಖಾ ಗುಪ್ತಾ, ಎನ್‌ಡಿಆರ್‌ಎಫ್, ದೆಹಲಿ ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ಪಡೆಗಳು ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ಈ ದುರಂತಕ್ಕೆ ಭ್ರಷ್ಟಾಚಾರವೇ ನೇರ ಕಾರಣ ಎಂದು ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ. 40-50 ವರ್ಷ ಹಳೆಯದಾದ ಈ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಅಕ್ರಮವಾಗಿ ನವೀಕರಣ ಕಾಮಗಾರಿ ನಡೆಸಲಾಗುತ್ತಿತ್ತು; ಈ ದುರಸ್ತಿ ಕಾರ್ಯವೇ ಅಡಿಪಾಯ ಕುಸಿದು ಇಡೀ ಕಟ್ಟಡ ಧರೆಗುರುಳಲು ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು