ಅಂಡರ್‌ವರ್ಲ್ಡ್, ಕ್ರಿಮಿನಲ್ಸ್ ಮತ್ತು ರೆಡ್ ಲೈಟ್ ಪ್ರದೇಶಗಳ ಶೇ. 92ರಷ್ಟು ವೋಟ್ ನನಗೆ ಬಿದ್ದಿದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿಯ ಹೇಳಿಕೆ

ನಾಗ್ಪುರ: ತಮ್ಮ ನೇರ ನಡೆ-ನುಡಿಯಿಂದಲೇ ಸದಾ ಸುದ್ದಿಯಲ್ಲಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಚುನಾವಣಾ ಮತದಾನದ ಕುರಿತು ಮತ್ತೊಂದು ಸ್ಫೋಟಕ ಹೇಳಿಕೆ ನೀಡಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಗರದ ವಿದ್ಯಾವಂತ ಮತ್ತು ಶ್ರೀಮಂತ ಬಡಾವಣೆಗಳಿಗಿಂತ ಕ್ರಿಮಿನಲ್‌ಗಳು, ಅಂಡರ್‌ವರ್ಲ್ಡ್ ಮತ್ತು ರೆಡ್ ಲೈಟ್ ಏರಿಯಾಗಳಲ್ಲೇ ತಮಗೆ ಅತಿ ಹೆಚ್ಚು ಮತಗಳು ಬಿದ್ದಿವೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಚುನಾವಣಾ ಅಂಕಿಅಂಶಗಳನ್ನು ಉಲ್ಲೇಖಿಸಿ ಮಾತನಾಡಿದ ಗಡ್ಕರಿ, ನಾಗ್ಪುರದ ವಿದ್ಯಾವಂತ ಹಾಗೂ ಗಣ್ಯರು ವಾಸಿಸುವ ಬಡಾವಣೆಗಳಲ್ಲಿ ತಮಗೆ ಸುಮಾರು ಶೇ. 70 ರಿಂದ 75ರಷ್ಟು ಮತಗಳು ಲಭಿಸಿದ್ದವು. ಆದರೆ ಕ್ರಿಮಿನಲ್ಸ್, ಅಂಡರ್‌ವರ್ಲ್ಡ್ ಹಾಗೂ ರೆಡ್ ಲೈಟ್ ಪ್ರದೇಶಗಳೆಂದು ಗುರುತಿಸಿಕೊಂಡಿರುವ ಏರಿಯಾಗಳಲ್ಲಿ ಬರೋಬ್ಬರಿ ಶೇ. 92ರಷ್ಟು ಮತಗಳು ತಮ್ಮ ಪರವಾಗಿ ಚಲಾವಣೆಯಾಗಿದ್ದವು ಎಂದು ಬಹಿರಂಗಪಡಿಸಿದರು. “ಹಾಗೆಂದ ಮಾತ್ರಕ್ಕೆ ನನಗೂ ಅಂತಹ ಜನರಿಗೂ ಯಾವುದೋ ಒಳಸಂಪರ್ಕವಿದೆ ಎಂದರ್ಥವಲ್ಲ; ಆ ಭಾಗಗಳಿಗೂ ನಾನು ಉತ್ತಮ ರಸ್ತೆಗಳನ್ನು ನಿರ್ಮಿಸಿಕೊಟ್ಟಿದ್ದೆ, ಜನ ಅಭಿವೃದ್ಧಿಯನ್ನು ನೋಡಿ ವೋಟ್ ಹಾಕಿದ್ದಾರೆ” ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

ಇದೇ ಸಮಾರಂಭದಲ್ಲಿ ಹಳೆಯ ಡೀಸೆಲ್ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯ ನಿಯಂತ್ರಣದ ಬಗ್ಗೆಯೂ ಗಡ್ಕರಿ ಮಹತ್ವದ ಮಾಹಿತಿ ನೀಡಿದರು. ಹಳೆಯ ಡೀಸೆಲ್ ಟ್ರಕ್ ಮತ್ತು ಬಸ್‌ಗಳಿಂದ ಹೊರಸೂಸುವ ಹೊಗೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಕಡಿಮೆ ವೆಚ್ಚದ ‘ರೆಟ್ರೋಫಿಟ್ ಎಮಿಷನ್ ಕಂಟ್ರೋಲ್ ಡಿವೈಸ್’ (RECD) ಅಳವಡಿಕೆಗೆ ಅನುಮೋದನೆ ನೀಡಿದೆ ಎಂದು ತಿಳಿಸಿದರು. ಈ ಸಾಧನವು ಪಾರ್ಟಿಕ್ಯುಲೇಟ್ ಮ್ಯಾಟರ್ (PM) ಅನ್ನು ಶೇ. 90ರಷ್ಟು ಮತ್ತು ನೈಟ್ರೋಜನ್ ಆಕ್ಸೈಡ್ (NOx) ಅನ್ನು ಶೇ. 60ರಷ್ಟು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದ್ದು, ಹಳೆಯ ವಾಹನಗಳನ್ನು ರಸ್ತೆಯಿಂದ ಸಂಪೂರ್ಣವಾಗಿ ತೆಗೆದುಹಾಕದೆ ಮಾಲಿನ್ಯ ತಗ್ಗಿಸಲು ನೆರವಾಗಲಿದೆ ಎಂದರು.

Related Articles

ಇತ್ತೀಚಿನ ಸುದ್ದಿಗಳು