ಸಿಜೆಪಿ ಕಾರ್ಯಕರ್ತನಿಗೆ ದೇಶದ್ರೋಹಿ ಪಟ್ಟ ಕಟ್ಟಿದ ಪ್ರಕರಣ: ಪತ್ರಕರ್ತ ಸುಧೀರ್ ಚೌಧರಿ, ಡಿಡಿ ನ್ಯೂಸ್‌ಗೆ ದೆಹಲಿ ಹೈಕೋರ್ಟ್ ಸಮನ್ಸ್

ನವದೆಹಲಿ: ಸಾರ್ವಜನಿಕ ಕಾರ್ಯಕರ್ತ ವಿಜಯ್ ಶೆರಾವತ್ ಅವರನ್ನು ‘ದೇಶದ್ರೋಹಿ’ ಎಂದು ಬಿಂಬಿಸಿ ಸುಳ್ಳು ವರದಿ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ಪತ್ರಕರ್ತ ಸುಧೀರ್ ಚೌಧರಿ, ಅವರ ನಿರ್ಮಾಣ ಸಂಸ್ಥೆ ಎಸ್‌ಪ್ರಿಟ್ ಪ್ರೊಡಕ್ಷನ್ಸ್ ಮತ್ತು ಪ್ರಸಾರ ಭಾರತಿ (ಡಿಡಿ ನ್ಯೂಸ್) ವಿರುದ್ಧ ದಾಖಲಾಗಿರುವ ₹5 ಕೋಟಿ ಮಾನನಷ್ಟ ಮೊಕದ್ದಮೆಯಲ್ಲಿ ದೆಹಲಿ ಹೈಕೋರ್ಟ್ ಸೋಮವಾರ ಸಮನ್ಸ್ ಜಾರಿ ಮಾಡಿದೆ.

ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿ ಸಮನ್ಸ್ ಹೊರಡಿಸಿದೆ. ಅಲ್ಲದೆ, ಈ ಸುಳ್ಳು ಆರೋಪಗಳನ್ನು ಮರುಪ್ರಸಾರ ಮಾಡದಂತೆ ಅಥವಾ ಪ್ರಕಟಿಸದಂತೆ ಮಧ್ಯಂತರ ತಡೆಯಾಜ್ಞೆ ನೀಡಬೇಕು ಎಂಬ ಶೆರಾವತ್ ಅವರ ಅರ್ಜಿಯ ಕುರಿತು ನೋಟಿಸ್ ಜಾರಿ ಮಾಡಿದ್ದು, ಸೆಪ್ಟೆಂಬರ್ 22ರಂದು ಮಧ್ಯಂತರ ತಡೆಯಾಜ್ಞೆ ಕುರಿತ ವಾದಗಳನ್ನು ಆಲಿಸುವುದಾಗಿ ನ್ಯಾಯಾಲಯ ತಿಳಿಸಿದೆ.

ಆಗಸ್ಟ್ 27ರಂದು ಡಿಡಿ ನ್ಯೂಸ್‌ನಲ್ಲಿ ಪ್ರಸಾರವಾದ ಸುಧೀರ್ ಚೌಧರಿ ಅವರ ‘ಡಿಕೋಡ್’ (DECODE) ಕಾರ್ಯಕ್ರಮದಲ್ಲಿ, ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆಯ ವೇಳೆ ವಿಜಯ್ ಶೆರಾವತ್ ಅವರು ಸಂಸತ್ ಭವನವನ್ನು ಕಿತ್ತೊಗೆಯುವಂತೆ ಮತ್ತು ಭಾರತದಲ್ಲಿ ನೇಪಾಳದಂತಹ ಪರಿಸ್ಥಿತಿ ಸೃಷ್ಟಿಸುವಂತೆ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಅವರ ಭಾವಚಿತ್ರವನ್ನು ಪ್ರದರ್ಶಿಸಲಾಗಿತ್ತು.

ಆದರೆ, ಆ ಹೇಳಿಕೆಯನ್ನು ತಾನು ನೀಡಿರಲಿಲ್ಲ; ಬೇರೊಂದು ಕಾರ್ಯಕ್ರಮದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನೀಡಿದ್ದ ಹೇಳಿಕೆಯನ್ನು ಯಾವುದೇ ಸತ್ಯಾಸತ್ಯತೆ ಪರಿಶೀಲಿಸದೆ, ಸ್ಪಷ್ಟನೆಗೂ ಅವಕಾಶ ನೀಡದೆ ತಮ್ಮ ತಲೆಗೆ ಕಟ್ಟಲಾಗಿದೆ ಎಂದು ಶೆರಾವತ್ ದೂರಿನಲ್ಲಿ ತಿಳಿಸಿದ್ದಾರೆ. ಮುಖಗಳು ಸ್ಪಷ್ಟವಾಗಿ ಕಾಣದಂತೆ ಕಳಪೆ ಗುಣಮಟ್ಟದ ವಿಡಿಯೋ ಬಳಸಿ ಈ ಅಪಪ್ರಚಾರ ಮಾಡಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

ಈ ಸುಳ್ಳು ಪ್ರಸಾರದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಕ್ಲಿಪ್ ವೈರಲ್ ಆಗಿದ್ದು, ತಮ್ಮ ಕೈಕಾಲು ಮುರಿಯುವುದಾಗಿ, ಶೂಟ್ ಮಾಡುವುದಾಗಿ ಮತ್ತು ಶಿರಚ್ಛೇದ ಮಾಡುವುದಾಗಿ ಬಹಿರಂಗ ಜೀವ ಬೆದರಿಕೆಗಳು ಬರುತ್ತಿವೆ ಎಂದು ಶೆರಾವತ್ ದೂರಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸ್ಪಷ್ಟನೆ ನೀಡಿದರೂ, ಶತಕೋಟಿ ಡಿಜಿಟಲ್ ವೀಕ್ಷಣೆಗಳನ್ನು ಹೊಂದಿರುವ ರಾಷ್ಟ್ರೀಯ ವಾಹಿನಿಯ ಅಪಪ್ರಚಾರಕ್ಕೆ ಸಾಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ವಕೀಲರಾದ ಪುಷ್ಪ ಶರ್ಮಾ, ಆದಿತ್ಯ ನಾರಾಯಣ ಶುಕ್ಲಾ, ಜೈ ಅಲ್ಲಾಘ್ ಮತ್ತು ಪ್ರಸೂನ್ ಶೇಖರ್ ಮೂಲಕ ಈ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು