ಹಾಸನ: ಜಿಲ್ಲೆಯ ಮಹತ್ವಾಕಾಂಕ್ಷಿ ರಸ್ತೆ ಯೋಜನೆಯಾದ ರಾಷ್ಟ್ರೀಯ ಹೆದ್ದಾರಿ 373 ರ ಹಾಸನ-ಬೇಲೂರು ಮಾರ್ಗವನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 470.85 ಕೋಟಿ ಪರಿಷ್ಕೃತ ಮೊತ್ತಕ್ಕೆ ಆಡಳಿತಾತ್ಮಕ-ತಾಂತ್ರಿಕ ಜೊತೆಗೆ ಆರ್ಥಿಕ ಅನುಮೋದನೆ ನೀಡಿದೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ತಿಳಿಸಿದ್ದಾರೆ.
ಹಾಸನ-ಬೇಲೂರು ಹೆದ್ದಾರಿಯ ಅಭಿವೃದ್ಧಿಗೆ ಶೀಘ್ರ ಅನುಮೋದನೆ ನೀಡಿ ಕಾಮಗಾರಿಯನ್ನು ಆದ್ಯತೆ ಮೇಲೆ ಕೈಗೆತ್ತಿಕೊಳ್ಳುವಂತೆ ಶ್ರೇಯಸ್ ಎಂ.ಪಟೇಲ್ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದರು. ಬಳಿಕ ಸಂಬಂಧಪಟ್ಟ ಸಚಿವಾಲಯ ಮತ್ತು ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಯೋಜನೆಯ ತ್ವರಿತ ಅನುಮೋದನೆಗೆ ಒತ್ತಾಯಿಸಿದ್ದರು. ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ 373 ರ ವಿನ್ಯಾಸ ಸರಪಳಿ ಕಿ.ಮೀ.27.78೦ ರಿಂದ ಕಿ.ಮೀ. 57.320 ರವರೆಗಿನ ಒಟ್ಟು 29.54 ಕಿ.ಮೀ. ಹಾಸನ-ಬೇಲೂರು ರಸ್ತೆ ಭಾಗವನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು 47೦.85 ಕೋಟಿ ಮಂಜೂರು ಮಾಡಿದೆ. ಈ ಯೋಜನೆಯನ್ನು ಇಪಿಸಿ ಮಾದರಿಯಲ್ಲಿ ಎನ್ಹೆಚ್(ಒ) ವಾರ್ಷಿಕ ಯೋಜನೆ 2022-23ರ ಪ್ಯಾಕೇಜ್-11 ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.
ಪರಿಷ್ಕೃತ ಯೋಜನೆಯಡಿ ಭೂಸ್ವಾಧೀನಕ್ಕಾಗಿ 115.3೦ ಕೋಟಿ ಹಾಗೂ ಭೂಸ್ವಾಧೀನ ಸೇರಿದಂತೆ ಪೂರ್ವ ನಿರ್ಮಾಣ ಚಟುವಟಿಕೆಗಳಿಗೆ ಒಟ್ಟು 128.9೦ ಕೋಟಿ ಮೀಸಲಿಡಲಾಗಿದೆ. | ರಾಜ್ಯ ಲೋಕೋಪಯೋಗಿ ಇಲಾಖೆ ಭೂ ಸ್ವಾಧೀನ ಪರಿಹಾರ ವಿತರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ, 2026 ರ ಅಕ್ಟೋಬರ್ 31 ರೊಳಗೆ ಕಾಮಗಾರಿಯ ನಿಗದಿತ ಪ್ರಾರಂಭ ದಿನಾಂಕವನ್ನು ಅಂತಿಮಗೊಳಿಸಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಯೋಜನೆಯ ಕಾಮಗಾರಿಯನ್ನು 2029-30 ನೇ ಆರ್ಥಿಕ ವರ್ಷದೊಳಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕೇಂದ್ರಕ್ಕೆ ಧನ್ಯವಾದ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ 470.85 ಕೋಟಿ ಅನುದಾನಕ್ಕೆ ಅನುಮೋದನೆ ನೀಡಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದ ಹೇಳಿದ್ದಾರೆ.ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶ್ರೇಯಸ್ ಎಂ.ಪಟೇಲ್ ಅವರು, ಹಾಸನ-ಬೇಲೂರು ಮಾರ್ಗವು ಜಿಲ್ಲೆಯ ಜನರು, ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಅತ್ಯಂತ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಯನ್ನು ನಾಲ್ಕು ಪಥವಾಗಿ ಅಗಲೀಕರಣ ಮಾಡುವುದರಿಂದ ಸಂಚಾರ ದಟ್ಟಣೆ ಮತ್ತು ಪ್ರಯಾಣದ ಸಮಯ ಕಡಿಮೆಯಾಗುವುದರ ಜೊತೆಗೆ ರಸ್ತೆ ಸುರಕ್ಷತೆ, ವ್ಯಾಪಾರ, ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ ಎಂದು ಹೇಳಿದ್ದಾರೆ.
