ಇಂದು ಆತ್ಮ*ತ್ಯೆ ತಡೆಗಟ್ಟುವ ದಿನ : ಆತ್ಮ*ತ್ಯೆ ತಡೆಗಟ್ಟುವುದು ನಾಗರಿಕ ಸಮಾಜದ ಕರ್ತವ್ಯ ; ಒಂದು ಜೀವ ಉಳಿಸುವಲ್ಲಿ ನಮ್ಮೆಲ್ಲರ ಪಾತ್ರವಿದೆ

“..ತೀರ್ಪು ನೀಡುವುದಕ್ಕಿಂತ ಆಲಿಸುವುದು, ದೂಷಿಸುವುದಕ್ಕಿಂತ ಅರ್ಥಮಾಡಿಕೊಳ್ಳುವುದು ಮತ್ತು ನಿರ್ಲಕ್ಷಿಸುವುದಕ್ಕಿಂತ ನೆರವಿನ ಹಸ್ತ ಚಾಚುವುದು-ಇವೇ ಆತ್ಮಹತ್ಯೆ ತಡೆಗಟ್ಟುವಿಕೆಯ ಪ್ರಮುಖ ಹೆಜ್ಜೆಗಳು..” ಮನೋವೈದ್ಯಕೀಯ ಸಾಮಾಜಿಕ ಕಾರ್ಯಕರ್ತರಾದ ಪದ್ಮರೇಖಾ, ಎಸ್. ಅವರ ಬರಹದಲ್ಲಿ

ರಾಮನಗರ: ಆತ್ಮಹತ್ಯೆ ಇಂದು ಕೇವಲ ವೈಯಕ್ತಿಕ ಸಮಸ್ಯೆಯಾಗಿರದೆ, ಕುಟುಂಬ, ಸಮಾಜ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಗಂಭೀರ ಸಾಮಾಜಿಕ ಸಮಸ್ಯೆಯಾಗಿದೆ. ಪ್ರತಿವರ್ಷ ಸೆಪ್ಟೆಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಆಚರಿಸಲಾಗುತ್ತಿದ್ದು, ಆತ್ಮಹತ್ಯೆ ತಡೆಗಟ್ಟುವಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಸೂಕ್ತ ಸಮಯದಲ್ಲಿ ನೆರವು ದೊರಕುವಂತೆ ಮಾಡುವುದು ಇದರ ಪ್ರಮುಖ ಉದ್ದೇಶವಾಗಿದೆ.

ಭಾರತದಲ್ಲಿಯೂ ಆತ್ಮಹತ್ಯೆ ಒಂದು ಗಂಭೀರ ಸಾಮಾಜಿಕ ಹಾಗೂ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಮುಂದುವರಿದಿದೆ. ಇದು ಯಾವುದೇ ನಿರ್ದಿಷ್ಟ ವಯಸ್ಸು, ಲಿಂಗ, ಆರ್ಥಿಕ ಸ್ಥಿತಿ ಅಥವಾ ಸಾಮಾಜಿಕ ವರ್ಗಕ್ಕೆ ಸೀಮಿತವಾಗಿಲ್ಲ.

2024ರಲ್ಲಿ 1.70 ಲಕ್ಷಕ್ಕೂ ಅಧಿಕ ಆತ್ಮಹತ್ಯಾ ಸಾವು
ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ (NCRB) ಬಿಡುಗಡೆ ಮಾಡಿರುವ Accidental Deaths & Suicides in India – 2024 ವರದಿ ಪ್ರಕಾರ, ಭಾರತದಲ್ಲಿ 2024ರಲ್ಲಿ ಒಟ್ಟು 1,70,746 ಆತ್ಮಹತ್ಯಾ ಸಾವುಗಳು ದಾಖಲಾಗಿವೆ. 2023ರಲ್ಲಿ ಈ ಸಂಖ್ಯೆ 1,71,418 ಆಗಿದ್ದು, 2024ರಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದರೂ ದೇಶದಲ್ಲಿ ಪ್ರತಿದಿನವೂ ನೂರಾರು ಕುಟುಂಬಗಳು ಆತ್ಮಹತ್ಯೆಯ ದುರಂತವನ್ನು ಎದುರಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. 2024ರ ರಾಷ್ಟ್ರೀಯ ಆತ್ಮಹತ್ಯೆ ಪ್ರಮಾಣವು ಒಂದು ಲಕ್ಷ ಜನಸಂಖ್ಯೆಗೆ 12.2 ಆಗಿದೆ. ಆತ್ಮಹತ್ಯೆಗೆ ಪ್ರಯತ್ನಿಸುವವರ ಸಂಖ್ಯೆಯು ಆತ್ಮಹತ್ಯೆಯಿಂದ ಸಾವನ್ನಪ್ಪುವವರ ಸಂಖ್ಯೆಗಿಂತ 5 ಪಟ್ಟು ಹೆಚ್ಚಿರುತ್ತದೆ.

ರಾಜ್ಯವಾರು ಅಂಕಿಅಂಶಗಳನ್ನು ಗಮನಿಸಿದರೆ, ಮಹಾರಾಷ್ಟ್ರದಲ್ಲಿ 22,174, ತಮಿಳುನಾಡಿನಲ್ಲಿ 19,965, ಮಧ್ಯಪ್ರದೇಶದಲ್ಲಿ 15,491, ಕರ್ನಾಟಕದಲ್ಲಿ 13,151 ಮತ್ತು ಪಶ್ಚಿಮ ಬಂಗಾಳದಲ್ಲಿ 12,931 ಆತ್ಮಹತ್ಯಾ ಸಾವುಗಳು ವರದಿಯಾಗಿವೆ. ಈ ಐದು ರಾಜ್ಯಗಳು ದೇಶದಲ್ಲಿ ವರದಿಯಾದ ಒಟ್ಟು ಆತ್ಮಹತ್ಯೆ ಸಾವುಗಳ ಸುಮಾರು 49% ಪಾಲನ್ನು ಹೊಂದಿವೆ. ಕರ್ನಾಟಕವು ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿರುವುದು ಆತಂಕಕಾರಿ ಸಂಗತಿಯಾಗಿದೆ.

ವಯೋಮಾನದ ದೃಷ್ಟಿಯಿಂದ ನೋಡಿದಾಗ, 18ರಿಂದ 45 ವರ್ಷದ ವಯೋಮಾನದವರು 2024ರಲ್ಲಿ ವರದಿಯಾದ ಆತ್ಮಹತ್ಯೆ ಸಾವುಗಳ ಸುಮಾರು 65% ಹೊಂದಿದ್ದಾರೆ. ಇದು ದೇಶದ ಉತ್ಪಾದಕ ವಯೋಮಾನದ ಜನರ ಮಾನಸಿಕ ಆರೋಗ್ಯದ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವನ್ನು ಸೂಚಿಸುತ್ತದೆ. ಪುರುಷರಲ್ಲಿ ಆತ್ಮಹತ್ಯೆ ಸಾವುಗಳ ಸಂಖ್ಯೆ ಮಹಿಳೆಯರಿಗಿಂತ ಗಣನೀಯವಾಗಿ ಹೆಚ್ಚಿದೆ.

ಕುಟುಂಬ ಸಮಸ್ಯೆಗಳು ಪ್ರಮುಖ ಕಾರಣ
NCRB ವರದಿ ಪ್ರಕಾರ, 2024ರಲ್ಲಿ ವೈವಾಹಿಕ ಸಮಸ್ಯೆಗಳನ್ನು ಹೊರತುಪಡಿಸಿದ ಕೌಟುಂಬಿಕ ಸಮಸ್ಯೆಗಳು ಆತ್ಮಹತ್ಯೆಗೆ ಪ್ರಮುಖವಾಗಿ ವರದಿಯಾದ ಕಾರಣವಾಗಿದ್ದು, ಒಟ್ಟು ಪ್ರಕರಣಗಳ ಸುಮಾರು **33.5%**ಕ್ಕೆ ಸಂಬಂಧಿಸಿವೆ. ಅನಾರೋಗ್ಯ, ಮಾದಕ ವಸ್ತುಗಳ ವ್ಯಸನ ಸೇರಿದಂತೆ ಹಲವು ವಿಷಯಗಳು ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿದೆ.

ಆದರೆ ಆತ್ಮಹತ್ಯೆಯ ಹಿಂದೆ ಸಾಮಾನ್ಯವಾಗಿ ಒಂದೇ ಒಂದು ಕಾರಣ ಇರುವುದಿಲ್ಲ. ಕೌಟುಂಬಿಕ ಕಲಹ, ವೈವಾಹಿಕ ಸಮಸ್ಯೆಗಳು, ದೀರ್ಘಕಾಲಿಕ ಕಾಯಿಲೆಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಮದ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನ, ಆರ್ಥಿಕ ಸಂಕಷ್ಟ, ನಿರುದ್ಯೋಗ, ಪರೀಕ್ಷೆ ಅಥವಾ ಉದ್ಯೋಗದಲ್ಲಿ ವೈಫಲ್ಯ, ಆತ್ಮೀಯರ ಸಾವು, ಪ್ರೇಮ ಸಂಬಂಧಗಳಲ್ಲಿನ ಸಮಸ್ಯೆಗಳು, ಆಸ್ತಿ ವಿವಾದ, ಸಾಮಾಜಿಕ ಅವಮಾನ, ಬಡತನ ಸೇರಿದಂತೆ ಹಲವು ಅಂಶಗಳು ಪರಸ್ಪರ ಪ್ರಭಾವ ಬೀರಿ ವ್ಯಕ್ತಿಯನ್ನು ತೀವ್ರ ಸಂಕಷ್ಟಕ್ಕೆ ದೂಡಬಹುದು.

ವಿದ್ಯಾರ್ಥಿಗಳ ಆತ್ಮಹತ್ಯೆ: ಹೆಚ್ಚುತ್ತಿರುವ ಆತಂಕ
ವಿದ್ಯಾರ್ಥಿಗಳ ಆತ್ಮಹತ್ಯೆಯೂ ಗಂಭೀರ ಕಳವಳಕ್ಕೆ ಕಾರಣವಾಗಿದೆ. NCRB 2024ರ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ 14,488 ವಿದ್ಯಾರ್ಥಿಗಳ ಆತ್ಮಹತ್ಯಾ ಸಾವುಗಳು ವರದಿಯಾಗಿವೆ. ಇದು 2023ರ 13,892 ಪ್ರಕರಣಗಳಿಗೆ ಹೋಲಿಸಿದರೆ ಹೆಚ್ಚಳವಾಗಿದೆ. 2024ರಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ದೇಶದ ಒಟ್ಟು ಆತ್ಮಹತ್ಯೆ ಪ್ರಕರಣಗಳ ಸುಮಾರು 8.5% ಆಗಿವೆ.

ಅಂಕಗಳಿಗಾಗಿ ಪೋಷಕರು ಮತ್ತು ಶಿಕ್ಷಕರ ಒತ್ತಡ, ಪರೀಕ್ಷಾ ವೈಫಲ್ಯ, ಸ್ನೇಹಿತರ ಒತ್ತಡ, ಕೀಳರಿಮೆ, ಆತ್ಮವಿಶ್ವಾಸದ ಕೊರತೆ, ಕುಟುಂಬದ ಸಮಸ್ಯೆಗಳು, ಭವಿಷ್ಯದ ಕುರಿತ ಆತಂಕ ಹಾಗೂ ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆ ಸೇರಿದಂತೆ ಹಲವು ಅಂಶಗಳು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

ಆದ್ದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ಆರೋಗ್ಯ ಶಿಕ್ಷಣ, ಆಪ್ತಸಮಾಲೋಚನೆ, ಸುರಕ್ಷಿತ ಮತ್ತು ತಾರತಮ್ಯರಹಿತ ವಾತಾವರಣ ಹಾಗೂ ಅಗತ್ಯವಿದ್ದಾಗ ತಜ್ಞರ ನೆರವು ದೊರೆಯುವ ವ್ಯವಸ್ಥೆ ಅತ್ಯಗತ್ಯ.

ಈ ಹಿನ್ನೆಲೆಯಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ಎಲ್ಲ ರಾಜ್ಯಗಳು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮಾನಸಿಕ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವ ನೀತಿಗಳನ್ನು ರೂಪಿಸಬೇಕೆಂದು ಹಾಗೂ ಮಾನಸಿಕ ಆರೋಗ್ಯ ಬೆಂಬಲ ಮತ್ತು ಸುರಕ್ಷಿತ ವಾತಾವರಣ ತಾರತಮ್ಯ ರಹಿತ ಶಿಕ್ಷಣ ನೀಡುವ ಕುರಿತು ನೀತಿಗಳನ್ನು ರೂಪಿಸಬೇಕೆಂದು ಆದೇಶಿಸಿದೆ.

ಅದರಂತೆ ನಮ್ಮ ರಾಜ್ಯದಲ್ಲಿಯೂ  ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದಲ್ಲಿ ಶಿಕ್ಷಣ, ಆರೋಗ್ಯ, ಮಕ್ಕಳ ರಕ್ಷಣಾ ಘಟಕ ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿಯನ್ನು ರಚಿಸುವ ಮೂಲಕ ಆತ್ಮಹತ್ಯೆ ತಡೆಗಟ್ಟುವ ಕಾರ್ಯತಂತ್ರಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ.

ಇದರಂತೆ ನಮ್ಮ ಜಿಲ್ಲೆಯಲ್ಲಿಯೂ ಸಹ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ವಿವಿಧ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡ ಆತ್ಮಹತ್ಯೆ ತಡೆ ಕಾರ್ಯಪಡೆಯನ್ನು ರಚಿಸಲಾಗಿದೆ.

ಆತ್ಮಹತ್ಯೆಯ ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸಿ
ಸಾವು ಅಥವಾ ಸಾಯುವ ಬಗ್ಗೆ ಪದೇಪದೇ ಮಾತನಾಡುವುದು, “ನಾನು ಬದುಕುವುದಕ್ಕೆ ಯಾವುದೇ ಕಾರಣವಿಲ್ಲ” ಎನ್ನುವುದು, ತಾನು ಕುಟುಂಬಕ್ಕೆ ಹೊರೆಯಾಗಿದ್ದೇನೆ ಎಂಬ ಭಾವನೆ, ತೀವ್ರ ನಿರಾಶೆ ಅಥವಾ ಒಂಟಿತನ, ಮದ್ಯಪಾನ ಅಥವಾ ಮಾದಕ ವಸ್ತುಗಳ ಬಳಕೆ ಹೆಚ್ಚಾಗುವುದು, ನಿದ್ರೆಯಲ್ಲಿ ಬದಲಾವಣೆ, ದಿನನಿತ್ಯದ ಕೆಲಸಗಳಲ್ಲಿ ನಿರಾಸಕ್ತಿ, ಎಲ್ಲರಿಂದಲೂ ದೂರವಾಗುವುದು ಹಾಗೂ ವರ್ತನೆಯಲ್ಲಿ ಹಠಾತ್ ಬದಲಾವಣೆಗಳು ಆತ್ಮಹತ್ಯೆಯ ಅಪಾಯದ ಸೂಚನೆಗಳಾಗಿರಬಹುದು.

ಇಂತಹ ಸೂಚನೆಗಳನ್ನು ಗಮನ ಸೆಳೆಯುವ ಪ್ರಯತ್ನ ಎಂದು ನಿರ್ಲಕ್ಷಿಸಬಾರದು. ವ್ಯಕ್ತಿಯ ಮಾತುಗಳನ್ನು ಗಂಭೀರವಾಗಿ ಆಲಿಸಿ, ಅವರನ್ನು ದೂಷಿಸದೆ, ಒಂಟಿಯಾಗಿ ಬಿಡದೆ, ಅಗತ್ಯವಿದ್ದಲ್ಲಿ ತಕ್ಷಣ ಮಾನಸಿಕ ಆರೋಗ್ಯ ವೃತ್ತಿಪರರ ನೆರವು ಪಡೆಯಲು ಸಹಾಯ ಮಾಡಬೇಕು.

ಆತ್ಮಹತ್ಯೆ ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ
ಆತ್ಮಹತ್ಯೆ ತಡೆಗಟ್ಟುವುದು ಆರೋಗ್ಯ ಇಲಾಖೆ ಅಥವಾ ಮಾನಸಿಕ ಆರೋಗ್ಯ ವೃತ್ತಿಪರರ ಜವಾಬ್ದಾರಿ ಮಾತ್ರವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು.

ಸಂಕಷ್ಟದಲ್ಲಿರುವ ವ್ಯಕ್ತಿಯ ಮಾತುಗಳನ್ನು ಯಾವುದೇ ಪೂರ್ವಗ್ರಹವಿಲ್ಲದೆ ಆಲಿಸುವುದು, ಆತ್ಮಹತ್ಯೆಯ ಆಲೋಚನೆಗಳನ್ನು ಗಂಭೀರವಾಗಿ ಪರಿಗಣಿಸುವುದು, ಅವರನ್ನು ಒಂಟಿಯಾಗಿ ಬಿಡದೆ ಸಾಮಾಜಿಕ ಬೆಂಬಲ ನೀಡುವುದು ಮತ್ತು ಸೂಕ್ತ ಚಿಕಿತ್ಸೆ ಪಡೆಯಲು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ.

ತೀರ್ಪು ನೀಡುವುದಕ್ಕಿಂತ ಆಲಿಸುವುದು, ದೂಷಿಸುವುದಕ್ಕಿಂತ ಅರ್ಥಮಾಡಿಕೊಳ್ಳುವುದು ಮತ್ತು ನಿರ್ಲಕ್ಷಿಸುವುದಕ್ಕಿಂತ ನೆರವಿನ ಹಸ್ತ ಚಾಚುವುದು—ಇವೇ ಆತ್ಮಹತ್ಯೆ ತಡೆಗಟ್ಟುವಿಕೆಯ ಪ್ರಮುಖ ಹೆಜ್ಜೆಗಳು.

ಮಾನಸಿಕ ಆರೋಗ್ಯ ಸೇವೆಗಳಿಗಾಗಿ ಟೆಲಿ ಮನಸ್ ಮಾನಸಿಕ ಆರೋಗ್ಯ ಸಹಾಯವಾಣಿ ಸಂಖ್ಯೆ 14416 ಕ್ಕೆ ಕರೆ ಮಾಡಿ.

ತೀವ್ರ ಮಾನಸಿಕ ಸಂಕಷ್ಟದಲ್ಲಿರುವವರು ಅಥವಾ ಆತ್ಮಹತ್ಯೆಯ ಆಲೋಚನೆ ಹೊಂದಿರುವವರು ತಡಮಾಡದೆ ಮಾನಸಿಕ ಆರೋಗ್ಯ ನೆರವು ಪಡೆಯಬೇಕು. ಭಾರತದಲ್ಲಿ ಟೆಲಿ-ಮನಸ್ 14416 ಮಾನಸಿಕ ಆರೋಗ್ಯ ಸಹಾಯವಾಣಿ ಮೂಲಕ ನೆರವು ಪಡೆಯಬಹುದು. 19 ಭಾಷೆಗಳಲ್ಲಿ ಕಾರ್ಯಕ್ರಮ ನಿರ್ವಹಿಸುವ ಈ ಸಹಾಯವಾಣಿ ದಿನದ 24 ಗಂಟೆಯೂ ಲಭ್ಯವಿರುತ್ತದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಮನೋವೈದ್ಯರು ಹಾಗೂ ಮಾನಸಿಕ ಆರೋಗ್ಯ ಸೇವೆಗಳು ಲಭ್ಯವಿರುತ್ತಾರೆ . ಎಲ್ಲ ಜಿಲ್ಲೆಗಳಲ್ಲೂ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಂಗಳವಾರ ಮನೋಚೈತನ್ಯ ಕ್ಲಿನಿಕ್‌ಗಳು – ಮಾನಸಿಕ ಆರೋಗ್ಯ ಶಿಬಿರಗಳು ನಡೆಸಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಮಾನಸಿಕ ಆರೋಗ್ಯ ಸೇವೆಗಳು ಲಭ್ಯವಿರುತ್ತದೆ.

ಆತ್ಮಹತ್ಯೆ ತಡೆಗಟ್ಟುವುದು ಸಾಧ್ಯ.
ಒಂದು ಜೀವ ಉಳಿಸುವ ಜವಾಬ್ದಾರಿ ನಮ್ಮೆಲ್ಲರದು.

Related Articles

ಇತ್ತೀಚಿನ ಸುದ್ದಿಗಳು