ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ (ಅಮಾರೀಯ ತನಿಖಾ ನಿರ್ದೇಶನಾಲಯ) ದಾಳಿಯನ್ನು ಖಂಡಿಸಿ, ಕೇಂದ್ರ ಸರ್ಕಾರ ಹಾಗೂ ಬಿಜೆಪಿ/ಆರ್ಎಸ್ಎಸ್ ನಡೆಗೆ ‘ಸಾಮಾಜಿಕ ನ್ಯಾಯಕ್ಕಾಗಿ ST ಯೂತ್’ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೇಂದ್ರದ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಕೈಗೊಂಬೆಯಂತೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ನಾಯಕ ಸಮುದಾಯದ ಯುವಜನರು, ಕೇಂದ್ರ ಸರ್ಕಾರ ಹಾಗೂ ಇಡಿ ತನಿಖಾ ಸಂಸ್ಥೆಗೆ ಪ್ರಮುಖ 4 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ:
- ಆಧಾರವಿಲ್ಲದೆ ಬಂಧನ ಏಕೆ?: ಸಿಐಡಿ ತನಿಖೆಯಲ್ಲಿ ಯಾವುದೇ ಕನಿಷ್ಠ ಪುರಾವೆ ಇಲ್ಲದೆ ಹೊರಬಂದ ನಾಯಕ ಸಮುದಾಯದ ಮುಖಂಡ ಬಿ. ನಾಗೇಂದ್ರ ಅವರನ್ನು ಇಡಿ ಬಂಧಿಸಿದ್ದು ಯಾವ ಉದ್ದೇಶಕ್ಕೆ?
- ಉದ್ದಿಮೆದಾರ ಸತೀಶ್ ಜಾರಕಿಹೊಳಿ ಅವರನ್ನೇ ಗುರಿ ಮಾಡಿದ್ದೇಕೆ?: ದಶಕಗಳಿಂದ ಯಶಸ್ವಿ ಉದ್ದಿಮೆದಾರ ಹಾಗೂ ಜನಪ್ರಿಯ ರಾಜಕಾರಣಿಯಾಗಿರುವ ಸತೀಶ್ ಜಾರಕಿಹೊಳಿ ಅವರ ಮೇಲೆಯೇ ಇಡಿ ದಾಳಿ ನಡೆಸಿರುವುದರ ಹಿಂದಿನ ರಹಸ್ಯವೇನು?
- ಬಿಜೆಪಿ ನಾಯಕರ ಮೇಲೆ ದಾಳಿ ಇಲ್ಲವೇಕೆ?: ಕಳೆದ 12 ವರ್ಷಗಳಿಂದ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ಬಿಜೆಪಿ ನಾಯಕನ ವಿರುದ್ಧವೂ ಇಡಿ ದಾಳಿ ನಡೆಯದಿರಲು ಕಾರಣವೇನು?
- ಶೋಷಿತ ಸಮುದಾಯಗಳೇ ಗುರಿಯೇ?: ಕೇಂದ್ರ ತನಿಖಾ ಸಂಸ್ಥೆಗಳಿಗೆ ಕೇವಲ ಶೋಷಿತ ಮತ್ತು ಹಿಂದುಳಿದ ಸಮುದಾಯದ ನಾಯಕರೇ ಏಕೆ ಸದಾ ಗುರಿಯಾಗುತ್ತಿದ್ದಾರೆ?
ನಾವು ಯಾವುದೇ ರೀತಿಯ ಕಾನೂನುಬದ್ಧ ತನಿಖೆಯನ್ನು ಸ್ವಾಗತಿಸುತ್ತೇವೆ. ಆದರೆ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ಹಾಗೂ ಶೋಷಿತ ಸಮುದಾಯದ ನಾಯಕರನ್ನು ಹತ್ತಿಕ್ಕಲು ಬಳಸಿಕೊಳ್ಳುವುದನ್ನು ಸಹಿಸುವುದಿಲ್ಲ ಎಂದು ಸಂಘಟನೆಯ ಪದಾಧಿಕಾರಿಗಳಾದ ಮಾಡಾಳ್ ಶಿವಕುಮಾರ್, ಅನಿಲ್ ಕುಮಾರ್ ಚಿಕ್ಕದಾಳವಟ್ಟ ಸೇರಿದಂತೆ ವೆಂಕಟೇಶ್ ಎಚ್ ಆರ್, ನಾಗರಾಜ್ ಎಚ್, ಮದನ ಮೋಹನ ನಾಯಕ್ ಹಾಗೂ ನಾಯಕ ಸಮುದಾಯದ ಯುವ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ಜಂಟಿಯಾಗಿ ಒತ್ತಾಯಿಸಿದ್ದಾರೆ. ಮಾಧ್ಯಮಗಳು ಈ ಪ್ರಶ್ನೆಗಳನ್ನು ಮುನ್ನೆಲೆಗೆ ತಂದು, ಶೋಷಿತ ಸಮುದಾಯಗಳ ಧ್ವನಿಯಾಗಬೇಕು ಎಂದು ಯುವ ಸಮುದಾಯ ಮನವಿ ಮಾಡಿದೆ.
