ನಮ್ಮ ಕುಟುಂಬದ ಫೋನ್ ನಂಬರ್‌ಗಳಿಗೆ ಬೆದರಿಕೆ ಸಂದೇಶಗಳು ಬರುತ್ತಿವೆ, ಬ್ಯಾಂಕ್‌ ಖಾತೆಯನ್ನು ಫ್ರೀಝ್‌ ಮಾಡಿದ್ದಾರೆ: ದಲಿತ ಬಾಲಕಿ ನಿಶು ಆಜಾದ್ ಆರೋಪ

ಹದಿನಾಲ್ಕು ವರ್ಷದ ದಲಿತ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಆಕೆಯ ಕುಟುಂಬದ ಮೇಲೆ ಆನ್‌ಲೈನ್ ಕಿರುಕುಳ, ಬೆದರಿಕೆ ಹಾಗೂ ಸಾಮಾಜಿಕ ಒತ್ತಡಗಳು ಮುಂದುವರಿದಿವೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ನಿಶು ಅವರ ತಂದೆ ಸಂಜಯ್ ಕುಮಾರ್ ಅವರು ತಮ್ಮ ಕುಟುಂಬದ ಸದಸ್ಯರ ಮೊಬೈಲ್ ಸಂಖ್ಯೆಗಳಿಗೆ ನಿರಂತರವಾಗಿ ಅವಾಚ್ಯ ಶಬ್ದಗಳಿಂದ ಕೂಡಿದ ಸಂದೇಶಗಳು ಮತ್ತು ಬೆದರಿಕೆ ಕರೆಗಳು ಬರುತ್ತಿವೆ ಎಂದು ದೂರಿದ್ದಾರೆ. ಅಪ್ರಾಪ್ತೆಯಾಗಿರುವ ನಿಶು ಸೇರಿದಂತೆ ಇಡೀ ಕುಟುಂಬವನ್ನೇ ಗುರಿಯಾಗಿಸಲಾಗಿದ್ದು, ಈ ಕಿರುಕುಳ ಕೇವಲ ಸಾಮಾಜಿಕ ಜಾಲತಾಣಗಳ ಟ್ರೋಲಿಂಗ್‌ಗೆ ಸೀಮಿತವಾಗದೆ ಆರ್ಥಿಕ ಸಂಕಷ್ಟವನ್ನೂ ತಂದೊಡ್ಡಿದೆ ಎಂದು ಅವರು ಹೇಳಿದ್ದಾರೆ.

ಬೆದರಿಕೆ ಬಂದಿರುವ ಮೊಬೈಲ್ ಸಂಖ್ಯೆಗಳು, ಕರೆ ದಾಖಲೆಗಳು ಮತ್ತು ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಡಿಜಿಟಲ್ ಪುರಾವೆಯಾಗಿ ಸಂರಕ್ಷಿಸಿಡಲಾಗಿದೆ ಎಂದು ತಿಳಿಸಿರುವ ಸಂಜಯ್ ಕುಮಾರ್, ದೆಹಲಿ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

‘ದಿ ಮೂಕನಾಯಕ್’ (The Mooknayak) ಜತೆ ಮಾತನಾಡಿದ ನಿಶು ಆಜಾದ್, “ಫೋನ್ ಕರೆಗಳು ಮತ್ತು ಸಂದೇಶಗಳಲ್ಲೇ ಇಷ್ಟೊಂದು ಅಶ್ಲೀಲ ಹಾಗೂ ಆಕ್ಷೇಪಾರ್ಹ ಭಾಷೆ ಬಳಸುವ ಜನರು ನಾಳೆ ನೇರವಾಗಿ ಎದುರಾದರೆ ನನ್ನ ಮತ್ತು ನನ್ನ ಒಡಹುಟ್ಟಿದವರ ಸುರಕ್ಷತೆಯ ಗತಿ ಏನು ಎಂಬ ಭಯ ಕಾಡುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಿರುಕುಳದ ನಡುವೆಯೇ ತಮ್ಮ ಕುಟುಂಬ ಬಳಸುತ್ತಿದ್ದ ಎಸ್‌ಬಿಐ (SBI) ಬ್ಯಾಂಕ್ ಖಾತೆಯನ್ನು ಸೈಬರ್ ಕ್ರೈಂ ದೂರಿನ ನೆಪವೊಡ್ಡಿ ಸ್ಥಗಿತಗೊಳಿಸಲಾಗಿದೆ (ಫ್ರೀಜ್) ಎಂದು ನಿಶು ಆರೋಪಿಸಿದ್ದಾರೆ. ಬೆಂಬಲಿಗರು ಕಳುಹಿಸುತ್ತಿದ್ದ ಆರ್ಥಿಕ ನೆರವಿಗೆ ತಡೆಯೊಡ್ಡಿ, ಕುಟುಂಬವನ್ನು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹೈರಾಣಾಗಿಸಲು ಈ ಹುನ್ನಾರ ನಡೆಸಲಾಗಿದೆ ಎಂದು ದೂರಿದ್ದಾರೆ.

ಆದರೆ ಈ ಕುರಿತು ಬ್ಯಾಂಕ್ ಅಥವಾ ಸೈಬರ್ ಕ್ರೈಂ ಅಧಿಕಾರಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಮತ್ತೊಂದೆಡೆ, ತಮ್ಮ ಮನೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂಬ ದೂರಿಗೆ ಸಂಬಂಧಿಸಿದಂತೆ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಮರುಪರಿಶೀಲಿಸಿ ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ನಿಶು ಆಗ್ರಹಿಸಿದ್ದಾರೆ. ಪೊಲೀಸರು ಸಿಸಿಟಿವಿ ಪರಿಶೀಲಿಸಿದ್ದರೂ ಆ ದೃಶ್ಯಗಳನ್ನು ಕುಟುಂಬಕ್ಕೆ ತೋರಿಸಿಲ್ಲದಿರುವುದು ಸುಳ್ಳು ಆರೋಪಗಳ ಅಪವಾದ ಹೊರಲು ಕಾರಣವಾಗಿದೆ ಎಂದು ಆಕೆ ಹೇಳಿದ್ದಾರೆ.

ಮಾಧ್ಯಮಗಳು ತಮ್ಮ ಅಪಾರ್ಟ್‌ಮೆಂಟ್ ಸಂಕೀರ್ಣಕ್ಕೆ ಬಂದು ಮನೆಯ ವಿವರಗಳನ್ನು ಪ್ರಸಾರ ಮಾಡುತ್ತಿರುವುದು ತಮ್ಮ ಸುರಕ್ಷತೆಗೆ ಮತ್ತಷ್ಟು ಧಕ್ಕೆ ತಂದಿದೆ ಎಂದು ನಿಶು ಕಳವಳ ವ್ಯಕ್ತಪಡಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಸಂಜಯ್ ಕುಮಾರ್ ಅವರ ಮೇಲೆ ನಡೆದ ಹಲ್ಲೆಯಿಂದ ಆರಂಭವಾದ ಈ ವಿವಾದವು, ಈಗ ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಬೆದರಿಕೆ, ಕಲ್ಲು ತೂರಾಟ, ಬ್ಯಾಂಕ್ ಖಾತೆ ಸ್ಥಗಿತ ಹಾಗೂ ಬಾಡಿಗೆ ಮನೆಯನ್ನು ಖಾಲಿ ಮಾಡುವಂತೆ ಒತ್ತಡ ಹೇರುವ ಹಂತಕ್ಕೆ ತಲುಪಿದೆ.

Related Articles

ಇತ್ತೀಚಿನ ಸುದ್ದಿಗಳು