ಪಕ್ಷದಲ್ಲಿ ಕಾರ್ಯಕರ್ತರಿಗೆ ಗೌರವವಿಲ್ಲ, ‘ಅಪ್ಪ-ಮಕ್ಕಳ’ ರಾಜಕೀಯ ಹೆಚ್ಚಾಗಿದೆ ಎಂದು ಆರೋಪ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮತ್ತೆ ಪಕ್ಷಾಂತರದ ಚಟುವಟಿಕೆಗಳು ಚುರುಕುಗೊಂಡಿದ್ದು, ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ರಾಜ್ಯ ಹಿಂದುಳಿದ ವರ್ಗಗಳ (ಒಬಿಸಿ) ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ತಮ್ಮ ಮಾತೃಪಕ್ಷ ಕಾಂಗ್ರೆಸ್ಗೆ ಮರಳುವುದಾಗಿ ಅವರು ಘೋಷಿಸಿದ್ದಾರೆ.
ರಾಜಾಜಿನಗರ ಮತ್ತು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಗಳಲ್ಲಿ ಸಕ್ರಿಯ ರಾಜಕೀಯ ಚಟುವಟಿಕೆ ನಡೆಸಿರುವ ನರೇಂದ್ರ ಬಾಬು, ಬಿಜೆಪಿಯಲ್ಲಿ ದೀರ್ಘಕಾಲದಿಂದ ದುಡಿದ ಕಾರ್ಯಕರ್ತರು ಹಾಗೂ ನಾಯಕರಿಗೆ ಸೂಕ್ತ ಗೌರವ ಮತ್ತು ಸ್ಥಾನಮಾನ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಅವಕಾಶವಾದಿ ರಾಜಕಾರಣಿಯಲ್ಲ. ಕಳೆದ ಹತ್ತು ವರ್ಷಗಳಿಂದ ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಪಕ್ಷದ ಸಂಘಟನೆ ಹಾಗೂ ಬೆಳವಣಿಗೆಗೆ ಶ್ರಮಿಸಿದ್ದರೂ ತಮ್ಮನ್ನು ಮತ್ತು ತಮ್ಮ ಬೆಂಬಲಿಗರನ್ನು ಸೂಕ್ತವಾಗಿ ಗುರುತಿಸಲಾಗಿಲ್ಲ ಎಂದು ದೂರಿದರು. ಪ್ರಮುಖ ನಾಯಕರನ್ನು ಭೇಟಿಯಾಗಲು ಹಾಗೂ ಪಕ್ಷದಲ್ಲಿ ತಮ್ಮ ಸ್ಥಾನಮಾನಕ್ಕಾಗಿ ನಿರಂತರವಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದುಳಿದ ತಿಗಳ ಸಮುದಾಯದ ಪ್ರಮುಖ ನಾಯಕರಾಗಿರುವ ನರೇಂದ್ರ ಬಾಬು, ರಾಜಾಜಿನಗರ ಮತ್ತು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಗಳಲ್ಲಿ ತಮ್ಮನ್ನು ಹಾಗೂ ತಮ್ಮ ಬೆಂಬಲಿಗರನ್ನು ಬಿಜೆಪಿ ನಾಯಕತ್ವ ಕಡೆಗಣಿಸಿದೆ ಎಂದು ಆರೋಪಿಸಿದರು.
2019ರ ‘ಆಪರೇಷನ್ ಕಮಲ’ದ ಸಂದರ್ಭವನ್ನು ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ನ 17 ಶಾಸಕರು ಬಿಜೆಪಿ ಸೇರ್ಪಡೆಯಾದ ಸಂದರ್ಭದಲ್ಲಿ ಪಕ್ಷದ ಹಿತದೃಷ್ಟಿಯಿಂದ ತಾವು ತಮ್ಮದೇ ಕ್ಷೇತ್ರವನ್ನು ತ್ಯಾಗ ಮಾಡಿದ್ದಾಗಿ ಹೇಳಿದರು. ಆದರೆ, ಆ ತ್ಯಾಗಕ್ಕೆ ಪಕ್ಷದ ನಾಯಕತ್ವದಿಂದ ಸೂಕ್ತ ಮಾನ್ಯತೆ ದೊರೆಯಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಬಿಜೆಪಿಯ ಪ್ರಸ್ತುತ ರಾಜಕೀಯ ಕಾರ್ಯವೈಖರಿಯನ್ನೂ ಟೀಕಿಸಿದ ಅವರು, ಪಕ್ಷದಲ್ಲಿ ‘ಅಪ್ಪ-ಮಕ್ಕಳ’ ರಾಜಕೀಯ ಹೆಚ್ಚಾಗಿದೆ ಎಂದು ಆರೋಪಿಸಿದರು. ರಾಜ್ಯ ನಾಯಕತ್ವಕ್ಕೆ ಆಪ್ತರಾಗಿರುವವರಿಗೆ ಮಾತ್ರ ಅವಕಾಶಗಳು ಸಿಗುತ್ತಿದ್ದು, ಪಕ್ಷಕ್ಕಾಗಿ ವರ್ಷಗಳಿಂದ ದುಡಿದ ನಿಷ್ಠಾವಂತ ಕಾರ್ಯಕರ್ತರು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಜ್ವಲಂತ ಸಮಸ್ಯೆಗಳು ಹಾಗೂ ಜನರ ಹಿತಾಸಕ್ತಿಗಳ ವಿಚಾರದಲ್ಲಿ ಬಿಜೆಪಿ ಸಂಸದರು ಮತ್ತು ರಾಜ್ಯ ಮಟ್ಟದ ನಾಯಕರು ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂಬ ಆರೋಪವನ್ನೂ ಅವರು ಮಾಡಿದರು. ಪಕ್ಷದ ಪ್ರಮುಖ ನಿರ್ಧಾರಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪ್ರಭಾವ ಹೆಚ್ಚಾಗಿದೆ ಎಂದು ನರೇಂದ್ರ ಬಾಬು ಟೀಕಿಸಿದರು.
ಮೂರು ಬಾರಿ ಬಿಬಿಎಂಪಿ ಸದಸ್ಯರಾಗಿ ಹಾಗೂ ಎರಡು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿರುವ ನರೇಂದ್ರ ಬಾಬು, ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಶೀಘ್ರದಲ್ಲೇ ಅವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
