ಬೆಂಗಳೂರಿನ ಆರ್ಚ್ಬಿಷಪ್ ಡಾ. ಪೀಟರ್ ಮಚಾದೋ ನೇತೃತ್ವದ ಉನ್ನತ ಮಟ್ಟದ ಕ್ರಿಶ್ಚಿಯನ್ ನಿಯೋಗವು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂದು ಅವರ ನಿವಾಸದಲ್ಲಿ ಭೇಟಿ ಮಾಡಿತು. ಈ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಕ್ರಿಶ್ಚಿಯನ್ ಸಮುದಾಯ ಎದುರಿಸುತ್ತಿರುವ ದೀರ್ಘಕಾಲದ ಸಮಸ್ಯೆಗಳನ್ನು ನಿಯೋಗವು ಪ್ರಸ್ತಾಪಿಸಿದ್ದು, ಸರ್ಕಾರದ ಸೂಕ್ತ ಹಂತಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಮಲ್ಲಿಕಾರ್ಜುನ ಖರ್ಗೆ ಅವರ ಮಧ್ಯಪ್ರವೇಶ ಮತ್ತು ಬೆಂಬಲವನ್ನು ಕೋರಿತು. ಸಮುದಾಯವು ಸಾಂವಿಧಾನಿಕ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಆಚರಣೆ ಮತ್ತು ಪ್ರಚಾರದ ಹಕ್ಕಿಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ‘ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ಮಸೂದೆ, 2021’ (ಮತಾಂತರ ನಿಷೇಧ ಕಾಯ್ದೆ) ಅನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ಒತ್ತಾಯಿಸಿತು.
ಶಾಸಕಾಂಗ ಪ್ರಕ್ರಿಯೆಯಲ್ಲಿ ಸಮುದಾಯಕ್ಕೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಕ್ರಿಶ್ಚಿಯನ್ ಪ್ರತಿನಿಧಿಯೊಬ್ಬರನ್ನು ನಾಮನಿರ್ದೇಶನ ಮಾಡಬೇಕು ಎಂದು ನಿಯೋಗ ಮನವಿ ಮಾಡಿದೆ. ಜೊತೆಗೆ, ಸಮುದಾಯದ ಕೆಲವು ವರ್ಗಗಳು ಎದುರಿಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಉಲ್ಲೇಖಿಸಿ, ಹಿಂದುಳಿದ ವರ್ಗಗಳ ಅಡಿಯಲ್ಲಿ ಶೇಕಡಾ 1 ರಷ್ಟು ಪ್ರತ್ಯೇಕ ಮೀಸಲಾತಿಯನ್ನು ನೀಡುವಂತೆ ಆಗ್ರಹಿಸಿದೆ. ಸಾರ್ವಜನಿಕ ಆಡಳಿತದಲ್ಲಿ ಸಮುದಾಯದ ನ್ಯಾಯಯುತ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ವಿವಿಧ ಮಂಡಳಿಗಳು, ನಿಗಮಗಳು ಮತ್ತು ಶಾಸನಬದ್ಧ ಸಂಸ್ಥೆಗಳಲ್ಲಿ ಕ್ರಿಶ್ಚಿಯನ್ ಸದಸ್ಯರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕೆಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.
ತಮ್ಮ ಅಹವಾಲುಗಳನ್ನು ಆಲಿಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಿಯೋಗವು ಕೃತಜ್ಞತೆ ಸಲ್ಲಿಸಿದ್ದು, ಈ ಬೇಡಿಕೆಗಳ ಕುರಿತು ಸರ್ಕಾರದಿಂದ ಸಕಾರಾತ್ಮಕ ಕ್ರಮ ಕೈಗೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದೆ.
ಈ ನಿಯೋಗದಲ್ಲಿ ಆರ್ಚ್ಬಿಷಪ್ ಪೀಟರ್ ಮಚಾದೋ, ಮಂಗಳೂರಿನ ಬಿಷಪ್ ಡಾ. ಪೀಟರ್ ಪಾಲ್, ಮೈಸೂರಿನ ಬಿಷಪ್ ಡಾ. ಫ್ರಾನ್ಸಿಸ್ ಸೆರಾವೊ, ‘ಆಶೀರ್ವಾದ್’ ಸಂಸ್ಥೆಯ ನಿರ್ದೇಶಕ ಫಾದರ್ ಅರುಣ್ ಲೂಯಿಸ್, ಪ್ರವೀಣ್ ಪೀಟರ್, ಆಂಥೋನಿ ವಿಕ್ರಮ್ ಮತ್ತು ಬೆಂಗಳೂರು ಆರ್ಚ್ಡಯಾಸಿಸ್ನ ವಕ್ತಾರ ಹಾಗೂ ಪಿಆರ್ಒ ಜೆ.ಎ. ಕಾಂತರಾಜ್ ಉಪಸ್ಥಿತರಿದ್ದರು.
