ಮಂಗಳೂರು : ಕರಾವಳಿ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ ಜನಕೇಂದ್ರಿತ ಅಭಿವೃದ್ಧಿ ನೀತಿಯನ್ನು ರೂಪಿಸಬೇಕು ಹಾಗೂ ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಪೊರೇಟ್ ಪರವಾದ ಪಿಪಿಪಿ ಮಾದರಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಗೆ ಮೆರವಣಿಗೆ ನಡೆಸಲು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನಿರ್ಧರಿಸಿದೆ.
ಸೆ.18ರಂದು ಬೆಳಿಗ್ಗೆ 9.30ಕ್ಕೆ ನಾಗುರಿ ಜಂಕ್ಷನ್‌ನಿಂದ ಪಡೀಲ್‌ನಲ್ಲಿರುವ ಪ್ರಜಾಸೌಧದವರೆಗೆ ಮೆರವಣಿಗೆ ನಡೆಸಿ, ಕರಾವಳಿ ಜಿಲ್ಲೆಯ ಜನರ ಪ್ರಮುಖ ಬೇಡಿಕೆಗಳನ್ನು ಒಳಗೊಂಡ ಆಗ್ರಹ ಪತ್ರವನ್ನು ಸಚಿವ ಸಂಪುಟ ಸಭೆಗೆ ಸಲ್ಲಿಸಲಾಗುವುದು ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಮಂಗಳೂರಿನಲ್ಲಿ ಮೊದಲ ಬಾರಿಗೆ ವಿಶೇಷ ಸಚಿವ ಸಂಪುಟ ಸಭೆ ನಡೆಸುತ್ತಿರುವುದರಿಂದ ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ. ಆದರೆ ಸರ್ಕಾರದ ಪ್ರವಾಸೋದ್ಯಮ ಹಾಗೂ ಬಂಡವಾಳ ಹೂಡಿಕೆ ನೀತಿಗಳ ಕುರಿತು ಹೊರಬರುತ್ತಿರುವ ಮಾಹಿತಿಗಳು ಸ್ಥಳೀಯ ಜನರಿಗೆ ಅನುಕೂಲವಾಗುವ ಅಭಿವೃದ್ಧಿಯ ಬದಲು ದೊಡ್ಡ ಕಾರ್ಪೊರೇಟ್ ಬಂಡವಾಳಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವ ಆತಂಕ ಮೂಡಿಸಿವೆ ಎಂದು ಅವರು ಹೇಳಿದರು.
ಕರಾವಳಿಯ ಅಭಿವೃದ್ಧಿಯ ಫಲ ಎಲ್ಲ ಸಮುದಾಯಗಳಿಗೂ ತಲುಪಬೇಕು. ಸ್ಥಳೀಯ ಯುವಜನರಿಗೆ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳು ಹಾಗೂ ಕೃಷಿ ಮತ್ತು ಮೀನುಗಾರಿಕೆ ಆಧಾರಿತ ಉದ್ಯಮಗಳಿಗೆ ಆದ್ಯತೆ ನೀಡಬೇಕು. ಇಲ್ಲವಾದರೆ ವಿಶೇಷ ಸಚಿವ ಸಂಪುಟ ಸಭೆ ಕೆಲ ಘೋಷಣೆಗಳಿಗೆ ಸೀಮಿತವಾಗಿ, ಕರಾವಳಿಯ ಮೂಲಭೂತ ಸಮಸ್ಯೆಗಳು ಹಾಗೆಯೇ ಉಳಿಯುವ ಸಾಧ್ಯತೆ ಇದೆ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ.
ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು
ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ನಿಮ್ಹಾನ್ಸ್ ನರರೋಗ ಆಸ್ಪತ್ರೆಗಳ ಘಟಕಗಳನ್ನು ಸ್ಥಾಪಿಸಬೇಕು. ಹೊಸ ತಾಲೂಕುಗಳಿಗೆ ನಿಯಮಾನುಸಾರ ತಾಲೂಕು ಆಸ್ಪತ್ರೆಗಳನ್ನು ಮಂಜೂರು ಮಾಡಬೇಕು. ಪುತ್ತೂರಿನಲ್ಲಿ ಘೋಷಿಸಿರುವ ಸರ್ಕಾರಿ ವೈದ್ಯಕೀಯ ಕಾಲೇಜನ್ನು ತಕ್ಷಣ ಕಾರ್ಯಗತಗೊಳಿಸುವುದರೊಂದಿಗೆ ಉಡುಪಿ ಜಿಲ್ಲೆಗೂ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಸರ್ಕಾರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಬೇಕು ಎಂದು ಪಕ್ಷ ಆಗ್ರಹಿಸಿದೆ.
ಸ್ಥಳೀಯರಿಗೆ ಉದ್ಯೋಗ, ಪ್ರವಾಸೋದ್ಯಮದಲ್ಲಿ ಬದಲಾವಣೆ
ಕರಾವಳಿ ಪ್ರವಾಸೋದ್ಯಮ ನೀತಿಯಲ್ಲಿ ದೊಡ್ಡ ಉದ್ಯಮಿಗಳಿಗೆ ಮಾತ್ರ ಅನುಕೂಲವಾಗುವ ಪಿಪಿಪಿ ವ್ಯವಸ್ಥೆಯನ್ನು ಕೈಬಿಟ್ಟು ಸ್ಥಳೀಯರು ಪಾಲುದಾರರಾಗುವ ಮಾದರಿಯನ್ನು ರೂಪಿಸಬೇಕು. ಪರಿಸರ ಮತ್ತು ಸ್ಥಳೀಯ ಸಂಸ್ಕೃತಿಗೆ ಹಾನಿಯಾಗದ ರೀತಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಿ ಯುವಜನರಿಗೆ ಉದ್ಯೋಗ ದೊರಕುವಂತೆ ಮಾಡಬೇಕು. ಕ್ಯಾಸಿನೊ ಮತ್ತು ಜೂಜಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಗಿದೆ.
ಅಡಿಕೆ, ತೆಂಗು ಹಾಗೂ ರಬ್ಬರ್ ಆಧಾರಿತ ಕೈಗಾರಿಕೆಗಳಿಗೆ ಉತ್ತೇಜನ ನೀಡುವುದರೊಂದಿಗೆ ಮೀನುಗಾರಿಕೆ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ಮಂಗಳೂರು ಮೀನುಗಾರಿಕಾ ಬಂದರನ್ನು ವಿಸ್ತರಿಸುವುದು, ಮಂಗಳೂರು ದಕ್ಕೆ, ಮಲ್ಪೆ ಸೇರಿದಂತೆ ಕರಾವಳಿಯ ಮೀನುಗಾರಿಕಾ ಬಂದರುಗಳನ್ನು ಆಧುನೀಕರಿಸುವುದು, ಮಂಗಳೂರು ಅಳಿವೆ ಬಾಗಿಲಿನಲ್ಲಿ ಹೂಳೆತ್ತಿ ಅಪಘಾತಗಳನ್ನು ತಪ್ಪಿಸುವುದು ಹಾಗೂ ನಾಡದೋಣಿ ಮೀನುಗಾರರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಪಕ್ಷ ಹೇಳಿದೆ.
ಮೀನುಗಾರಿಕಾ ಉತ್ಪನ್ನಗಳ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಬೇಕು ಮತ್ತು ಫಿಶ್‌ಮಿಲ್‌ಗಳಿಗೆ ಪ್ರತ್ಯೇಕ ಕೈಗಾರಿಕಾ ವಲಯ ರೂಪಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.
ವಲಸೆ, ನಿರುದ್ಯೋಗದ ಬಗ್ಗೆ ಕಳವಳ
ಕರಾವಳಿ ಜಿಲ್ಲೆಗಳಲ್ಲಿ ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶಗಳ ಕೊರತೆ ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಸಾವಿರಾರು ಯುವಜನರು ಉದ್ಯೋಗಕ್ಕಾಗಿ ಹೊರಬರುತ್ತಿದ್ದರೂ ಅರ್ಹತೆಗೆ ತಕ್ಕ ಉದ್ಯೋಗ ಸಿಗುತ್ತಿಲ್ಲ. ಹೀಗಾಗಿ ಸ್ಥಳೀಯ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಆದ್ಯತೆ ನೀಡಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದ ಕೈಗಾರಿಕೆ, ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವುದನ್ನು ಕಡ್ಡಾಯಗೊಳಿಸಬೇಕು. ಸರೋಜಿನಿ ಮಹಿಷಿ ವರದಿಯನ್ನು ಅಗತ್ಯ ಮಾರ್ಪಾಡುಗಳೊಂದಿಗೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.
ಉತ್ತರ ಭಾರತದಿಂದ ಕರಾವಳಿ ಜಿಲ್ಲೆಗಳಿಗೆ ನಡೆಯುತ್ತಿರುವ ವಲಸೆ ಹಾಗೂ ಕರಾವಳಿಯ ಯುವಜನರು ಉದ್ಯೋಗಕ್ಕಾಗಿ ಬೆಂಗಳೂರು, ದೇಶದ ಇತರ ನಗರಗಳು ಮತ್ತು ವಿದೇಶಗಳಿಗೆ ತೆರಳುತ್ತಿರುವ ವಿದ್ಯಮಾನ ಕುರಿತು ಸರ್ಕಾರ ಸಮಗ್ರ ಅಧ್ಯಯನ ನಡೆಸಬೇಕು. ವಲಸೆ ಕಾರ್ಮಿಕರ ಶೋಷಣೆ ಮತ್ತು ದೌರ್ಜನ್ಯ ತಡೆಯಲು ಸೂಕ್ತ ನಿಯಮಗಳನ್ನು ರೂಪಿಸಬೇಕು ಎಂದು ಪಕ್ಷ ತಿಳಿಸಿದೆ.
ವಿದೇಶಗಳಲ್ಲಿ ದುಡಿಯುತ್ತಿರುವ ಕರಾವಳಿಯ ಅನಿವಾಸಿ ಕನ್ನಡಿಗರಿಗಾಗಿ ಕೇರಳ ಮಾದರಿಯಲ್ಲಿ ಪ್ರತ್ಯೇಕ ಕಲ್ಯಾಣ ಯೋಜನೆ ಜಾರಿಗೊಳಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಗಿದೆ.
ಮನೆ, ಶಿಕ್ಷಣ, ಮರಳು ದರದ ಸಮಸ್ಯೆ
ಕರಾವಳಿಯಲ್ಲಿ ಮರಳು ಮತ್ತು ಕೆಂಪುಕಲ್ಲು ಲಭ್ಯವಿದ್ದರೂ ಸ್ಪಷ್ಟ ಗಣಿಗಾರಿಕೆ ನೀತಿಯ ಕೊರತೆಯಿಂದ ಅವುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನರ ಮನೆ ನಿರ್ಮಾಣ ಹಾಗೂ ನಿರ್ಮಾಣ ವಲಯಕ್ಕೆ ತೊಂದರೆಯಾಗಿದೆ. ಸರಳೀಕೃತ ಗಣಿಗಾರಿಕೆ ನೀತಿ ರೂಪಿಸಿ ಜಿಲ್ಲಾಡಳಿತವೇ ದರ ನಿಗದಿಪಡಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ.
ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ವಸತಿ ಯೋಜನೆಗಳು ವಿಳಂಬವಾಗಿದ್ದು, ನಿವೇಶನ ಮತ್ತು ಮನೆಗಾಗಿ ಕಾಯುತ್ತಿರುವ ಫಲಾನುಭವಿಗಳಿಗೆ ತ್ವರಿತವಾಗಿ ಸೌಲಭ್ಯ ಒದಗಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕದ ಒತ್ತಡ ಕಡಿಮೆ ಮಾಡಲು ಹೆಚ್ಚಿನ ಸರ್ಕಾರಿ ಪಿಯು, ಪದವಿ ಮತ್ತು ವೃತ್ತಿಪರ ಕಾಲೇಜುಗಳನ್ನು ಸ್ಥಾಪಿಸಬೇಕು. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ತಾಲೂಕು ಮಟ್ಟದಲ್ಲಿ ಪಾಲಿಟೆಕ್ನಿಕ್ ಕಾಲೇಜುಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಲಾಗಿದೆ.
ತುಳು ಮಾನ್ಯತೆ, ಕಸ್ತೂರಿ ರಂಗನ್ ವರದಿ ಸೇರಿದಂತೆ ಹಲವು ಬೇಡಿಕೆ
ತುಳು ಭಾಷೆಗೆ ಮಾನ್ಯತೆ ನೀಡುವ ಬೇಡಿಕೆಯನ್ನು ಈಡೇರಿಸುವುದು, ಹೆದ್ದಾರಿಗಳಲ್ಲಿ ಅತಿಯಾದ ಟೋಲ್‌ಗೇಟ್‌ಗಳ ಸ್ಥಾಪನೆಗೆ ಕಡಿವಾಣ ಹಾಕುವುದು, ಕೊರಗ, ಮಲೆಕುಡಿಯ, ಕುಡುಬಿ ಸೇರಿದಂತೆ ಸಣ್ಣ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವುದು ಹಾಗೂ ಡಾ. ಮುಹಮ್ಮದ್ ಪೀರ್ ವರದಿ ಮತ್ತು ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಪಕ್ಷ ಒತ್ತಾಯಿಸಿದೆ.
ದಲಿತ ಸಮುದಾಯಗಳ ಡಿಸಿ ಮನ್ನಾ ಭೂಮಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕು. ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಕರಾವಳಿ ಮತ್ತು ಮಲೆನಾಡಿನ ಜನರಲ್ಲಿ ಇರುವ ಆತಂಕಕ್ಕೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಲಾಗಿದೆ.
ಮಂಗಳೂರು ನಗರ ಹಾಗೂ ಹೊರವಲಯದ ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆ, ರಸ್ತೆ ಅಗಲೀಕರಣ, ರಿಂಗ್‌ರೋಡ್ ಹಾಗೂ ಮೆಟ್ರೊ ರೈಲು ಯೋಜನೆಗಳಿಗೆ ಒತ್ತು ನೀಡಬೇಕು. ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ, ಕೋಮು ಸೌಹಾರ್ದತೆ ಮತ್ತು ಸಹಬಾಳ್ವೆಗಾಗಿ ವಿಶೇಷ ಕಾರ್ಯಯೋಜನೆ ರೂಪಿಸಬೇಕು ಎಂಬ ಬೇಡಿಕೆಗಳನ್ನೂ ಪಕ್ಷ ಮುಂದಿಟ್ಟಿದೆ.
ಕರಾವಳಿಯ ನದಿಗಳು ಮತ್ತು ಸಮುದ್ರವನ್ನು ಕೈಗಾರಿಕಾ ಮಾಲಿನ್ಯದಿಂದ ರಕ್ಷಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಂಸ್ಕರಿಸದ ತ್ಯಾಜ್ಯ ನೀರು ನದಿಗೆ ಅಥವಾ ಸಮುದ್ರಕ್ಕೆ ಹರಿಸುವ ಕೈಗಾರಿಕೆಗಳ ವಿರುದ್ಧ ಕ್ರಮ ಜರುಗಿಸಬೇಕು. ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ಅಗತ್ಯ ಪ್ರಮಾಣದ ತ್ಯಾಜ್ಯ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್, ಯಾದವ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಜಯಂತಿ ಬಿ.ಶೆಟ್ಟಿ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಪ್ರಮೀಳಾ ಕೆ., ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು.
