‘ಟ್ರಂಪ್ ಆಜ್ಞಾಪಿಸುತ್ತಾರೆ, ನೀವು ತಲೆಬಾಗುತ್ತೀರಿ’: ಯುಪಿಐ, ಸುಂಕ ಬೆದರಿಕೆ ಕುರಿತು ಪ್ರಧಾನಿ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಅಮೆರಿಕದ ವ್ಯಾಪಾರ ನೀತಿ, ಸುಂಕ ಬೆದರಿಕೆ ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಯ ವಿಚಾರದಲ್ಲಿ ವಾಷಿಂಗ್ಟನ್ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಶರಣಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ಆಪ್ತ ಸ್ನೇಹಿತ ಡೊನಾಲ್ಡ್ ಟ್ರಂಪ್ ಆಜ್ಞಾಪಿಸುತ್ತಾರೆ, ನೀವು ಅದಕ್ಕೆ ಶರಣಾಗುತ್ತೀರಿ; ಆದರೆ ಅದರ ದುಷ್ಪರಿಣಾಮಗಳನ್ನು 140 ಕೋಟಿ ಭಾರತೀಯರು ಅನುಭವಿಸಬೇಕಾಗಿದೆ ಎಂದು ಖರ್ಗೆ ಕಿಡಿಕಾರಿದ್ದಾರೆ.

ಭಾರತೀಯ ರಫ್ತು ಸರಕುಗಳ ಮೇಲೆ ಶೇಕಡಾ 100ರಷ್ಟು ಸುಂಕ ವಿಧಿಸುವ ಅಮೆರಿಕದ ಬೆದರಿಕೆಯು ಕೇಂದ್ರ ಸರ್ಕಾರದ ವಿದೇಶಾಂಗ ಮತ್ತು ವ್ಯಾಪಾರ ನೀತಿಗಳ ಸಂಪೂರ್ಣ ವೈಫಲ್ಯವನ್ನು ತೋರಿಸುತ್ತದೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಖರ್ಗೆ ಟೀಕಿಸಿದ್ದಾರೆ. ಮೊದಲು ಶೇಕಡಾ 25, ನಂತರ 50 ಮತ್ತು ಇದೀಗ ಶೇಕಡಾ 100ರಷ್ಟು ಸುಂಕ ವಿಧಿಸುವ ಬೆದರಿಕೆ ಹಾಕಲಾಗುತ್ತಿದೆ. ಈ ತೀವ್ರ ಸುಂಕ ಆಘಾತದಿಂದಾಗಿ ಭಾರತದ ಔಷಧ, ಜವಳಿ, ಎಂಜಿನಿಯರಿಂಗ್ ಸರಕುಗಳು, ರಾಸಾಯನಿಕಗಳು, ವಾಹನ ಬಿಡಿಭಾಗಗಳು, ರತ್ನ-ಆಭರಣಗಳು ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಕ್ಷೇತ್ರಗಳು ತೀವ್ರ ನಷ್ಟ ಎದುರಿಸಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕೃಷಿ ಮಾರುಕಟ್ಟೆಯನ್ನು ಅಮೆರಿಕಕ್ಕೆ ಮುಕ್ತಗೊಳಿಸುವ ಮೂಲಕ ನಮ್ಮ ರೈತರ ಹಿತಾಸಕ್ತಿಯನ್ನು ಮೋದಿ ಸರ್ಕಾರ ಅಡವಿಟ್ಟಿದೆ ಎಂದು ಖರ್ಗೆ ಆರೋಪಿಸಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ 500 ಶತಕೋಟಿ ಡಾಲರ್ ಮೌಲ್ಯದ ಅಮೆರಿಕನ್ ವಸ್ತುಗಳನ್ನು ಭಾರತ ಖರೀದಿಸುವಂತೆ ಈ ವ್ಯಾಪಾರ ಒಪ್ಪಂದವು ಕಡ್ಡಾಯಗೊಳಿಸುತ್ತದೆ ಎಂದು ದೂರಿದ್ದಾರೆ.

ಇತ್ತೀಚೆಗೆ ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (ಎಂಡಿಆರ್) ಹೇರಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಸ್ತಾಪಿಸಿದ ಖರ್ಗೆ, ಇದು ಸರ್ಕಾರದ ಹೇಡಿತನಕ್ಕೆ ಮತ್ತೊಂದು ಸ್ಪಷ್ಟ ನಿದರ್ಶನ ಎಂದಿದ್ದಾರೆ. ಸುಂಕ, ವ್ಯಾಪಾರ, ಹೆಚ್-1ಬಿ ವಲಸೆ, ವೀಸಾ ನಿಯಮಗಳಿಂದ ಹಿಡಿದು ಡಿಜಿಟಲ್ ಪಾವತಿಗಳವರೆಗೆ ವಾಷಿಂಗ್ಟನ್‌ನಿಂದ ಒತ್ತಡ ನಿರಂತರವಾಗಿ ಹೆಚ್ಚುತ್ತಿದ್ದರೂ ‘ಹೌಡಿ ಮೋದಿ’ ಸರ್ಕಾರ ಮಾತ್ರ ಅಮೆರಿಕದ ಮುಂದೆ ಸತತವಾಗಿ ಶರಣಾಗುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು