ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಆಕ್ಷೇಪಾರ್ಹ ಹಾಗೂ ಜಾಹೀರಾತು – ವರದಿ ನೀಡಲು ಸೂಚನೆ

ನವದೆಹಲಿ : ಇನ್ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ (CSEAAM) ಆಕ್ಷೇಪಾರ್ಹ ವಿಷಯಗಳು ಹಾಗೂ ಜಾಹೀರಾತುಗಳು ಪ್ರದರ್ಶನಗೊಳ್ಳುತ್ತಿವೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ತನಿಖೆಯನ್ನು ತೀವ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮೆಟಾ ಇಂಡಿಯಾ (Meta India) ಮುಖ್ಯಸ್ಥ ಅರುಣ್ ಶ್ರೀನಿವಾಸ್ ಸೇರಿದಂತೆ ಸಂಸ್ಥೆಯ ಉನ್ನತ ಅಧಿಕಾರಿಗಳು ಬುಧವಾರ ಎನ್‌ಸಿಪಿಸಿಆರ್ ಆಯೋಗದ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಒಂದೇ ವಾರದಲ್ಲಿ ಮೆಟಾ ಅಧಿಕಾರಿಗಳು ಆಯೋಗದ ಮುಂದೆ ಹಾಜರಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ.

ವಿಚಾರಣೆ ವೇಳೆ ಮೆಟಾ ಸಂಸ್ಥೆಯ ಅಧಿಕಾರಿಗಳು ತಮ್ಮಿಂದ ನಡೆದ ತಪ್ಪನ್ನು ಒಪ್ಪಿಕೊಂಡಿದ್ದು, ಇನ್ಮುಂದೆ ಇಂತಹ ಯಾವುದೇ ಆಕ್ಷೇಪಾರ್ಹ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯಗಳನ್ನು ಅಮೆರಿಕದ ಸಂಸ್ಥೆಯ ಬದಲಾಗಿ ನೇರವಾಗಿ ಭಾರತೀಯ ಕಾನೂನು ಜಾರಿ ಸಂಸ್ಥೆಗಳಿಗೆ ವರದಿ ಮಾಡಲು ಸಂಪೂರ್ಣ ಸಮ್ಮತಿ ಸೂಚಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ತೀವ್ರಗೊಂಡ ಆಯೋಗದ ವಿಚಾರಣೆ

ಕಳೆದ ಸೆಪ್ಟೆಂಬರ್ 9 ರಂದು ಮೆಟಾದ ಹಿರಿಯ ಅಧಿಕಾರಿಗಳು ಎನ್‌ಸಿಪಿಸಿಆರ್ ಮುಂದೆ ಮೊದಲ ಬಾರಿ ಹಾಜರಾಗಿದ್ದರು. ತದನಂತರ ಆಯೋಗವು ಮೆಟಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯಸ್ಥರನ್ನು ಮತ್ತೆ ಸ್ವತಃ ವಿಚಾರಣೆಗೆ ಕರೆಸಿತ್ತು. ಬುಧವಾರದ ಸಭೆಯ ನಂತರ ಆಯೋಗದ ಕಚೇರಿಯಿಂದ ಹೊರಬಂದ ಮೆಟಾ ಭಾರತದ ಮುಖ್ಯಸ್ಥ ಅರುಣ್ ಶ್ರೀನಿವಾಸ್ ಅವರು ಮಾಧ್ಯಮಗಳ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ತೆರಳಿದರು.

ಆದರೆ ಈ ಕುರಿತು ಪ್ರಕಟಣೆ ನೀಡಿರುವ ಮೆಟಾ ವಕ್ತಾರರು, ತಮ್ಮ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಸಂಸ್ಥೆಯ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ. “ಮಕ್ಕಳ ಮೇಲಿನ ಅಪರಾಧಗಳನ್ನು ತಡೆಯಲು ಹಾಗೂ ಇಂತಹ ಕೃತ್ಯ ಎಸಗುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ಭಾರತ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ. ಈ ರೀತಿಯ ಹಾನಿಕಾರಕ ವಿಷಯಗಳ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸಲು, ಮೆಟಾ ಇನ್ಮುಂದೆ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಪ್ರಕರಣಗಳನ್ನು ಕೇಂದ್ರ ಗೃಹ ಸಚಿವಾಲಯದ ‘ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್’ (I4C) ನಿರ್ವಹಿಸುವ ಸೈಬರ್ ಅಪರಾಧ ಪೋರ್ಟಲ್‌ಗೆ ನೇರವಾಗಿ ದೂರು ನೀಡಲಿದೆ” ಎಂದು ಮೆಟಾ ಸಂಸ್ಥೆ ತಿಳಿಸಿದೆ.

ಬಿಬಿಸಿ ವರದಿಯೇ ವಿಚಾರಣೆಗೆ ಕಾರಣ

ಮೆಟಾ ಸಂಸ್ಥೆಯು ಈ ಮಟ್ಟದ ಕಠಿಣ ವಿಚಾರಣೆ ಎದುರಿಸಲು ಬ್ರಿಟನ್‌ನ ‘ಬಿಬಿಸಿ ಐ’ (BBC Eye) ಜುಲೈ ತಿಂಗಳಿನಲ್ಲಿ ಪ್ರಕಟಿಸಿದ್ದ ತನಿಖಾ ವರದಿಯೇ ಮುಖ್ಯ ಕಾರಣವಾಗಿದೆ. ಇನ್ಸ್ಟಾಗ್ರಾಮ್‌ನಲ್ಲಿ ಬಾಲ ಲೈಂಗಿಕ ಶೋಷಣೆಗೆ ಪ್ರೇರೇಪಿಸುವ ಹಾಗೂ ಅಂತಹ ಆಕ್ಷೇಪಾರ್ಹ ವಿಷಯಗಳನ್ನು ಹೊಂದಿರುವ ಟೆಲಿಗ್ರಾಮ್ ಚಾನೆಲ್‌ಗಳಿಗೆ ಬಳಕೆದಾರರನ್ನು ಕರೆದೊಯ್ಯುವ ಪ್ರಾಯೋಜಿತ ಜಾಹೀರಾತುಗಳು ಪ್ರದರ್ಶನಗೊಳ್ಳುತ್ತಿವೆ ಎಂದು ಬಿಬಿಸಿ ತನ್ನ ವರದಿಯಲ್ಲಿ ಆರೋಪಿಸಿತ್ತು. ಅಷ್ಟೇ ಅಲ್ಲದೆ, ಇನ್ಸ್ಟಾಗ್ರಾಮ್‌ನ ಅಲ್ಗಾರಿದಮ್ ಮತ್ತು ಆಟೋಮ್ಯಾಟಿಕ್ ರೆಕಮೆಂಡೇಶನ್ ವ್ಯವಸ್ಥೆಯು ಇಂತಹ ಕಂಟೆಂಟ್‌ಗಳನ್ನು ಹೆಚ್ಚಿನ ಜನರಿಗೆ ತಲುಪಿಸಲು ನೆರವಾಗುತ್ತಿದೆ ಎಂಬ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು.

ಈ ವರದಿ ಪ್ರಕಟವಾಗುತ್ತಿದ್ದಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಇನ್ಸ್ಟಾಗ್ರಾಮ್‌ಗೆ ತಕ್ಷಣವೇ ಇಂತಹ ಜಾಹೀರಾತುಗಳನ್ನು ತಡೆಹಿಡಿಯುವಂತೆ ಸೂಚನೆ ನೀಡಿ, ಮೆಟಾದಿಂದ ವಿವರಣೆ ಕೇಳಿತ್ತು. ಮತ್ತೊಂದೆಡೆ ಎನ್‌ಸಿಪಿಸಿಆರ್ ಆಯೋಗವು ಜುಲೈ 3 ರಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಿತ್ತು. ಮೆಟಾ ನೀಡಿದ ಉತ್ತರದ ಆಧಾರದ ಮೇಲೆ ಆಯೋಗವು ಸಮಗ್ರ ವಿಚಾರಣೆಗೆ ಆದೇಶಿಸಿತ್ತು.

ಹಳೆಯ ನಿಯಮ ಬದಲಾವಣೆ: ಭಾರತದ ಏಜೆನ್ಸಿಗಳಿಗೆ ನೇರ ದೂರು

ಇಲ್ಲಿಯವರೆಗೆ ಮೆಟಾ ಸಂಸ್ಥೆಯು ತನ್ನ ವೇದಿಕೆಗಳಲ್ಲಿ ಕಂಡುಬರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯಗಳನ್ನು ಅಮೆರಿಕ ಮೂಲದ ‘ನ್ಯಾಷನಲ್ ಸೆಂಟರ್ ಫಾರ್ ಮಿಸ್ಸಿಂಗ್ ಅಂಡ್ ಎಕ್ಸ್‌ಪ್ಲಾಯ್ಟೆಡ್ ಚಿಲ್ಡ್ರನ್’ (NCMEC) ಸಂಸ್ಥೆಗೆ ವರದಿ ಮಾಡುತ್ತಿತ್ತು. ಅಲ್ಲಿಂದ ಮಾಹಿತಿ ಭಾರತೀಯ ತನಿಖಾ ಸಂಸ್ಥೆಗಳಿಗೆ ತಲುಪಲು ಕಾಲಾವಕಾಶ ಹಿಡಿಯುತ್ತಿತ್ತು. ಆದರೆ ಈಗ ಜಾರಿಯಾಗಲಿರುವ ಹೊಸ ವ್ಯವಸ್ಥೆಯಂತೆ, ಭಾರತದಲ್ಲಿ ಕಂಡುಬರುವ ಪ್ರತಿಯೊಂದು ಪ್ರಕರಣವನ್ನು ಗೃಹ ಸಚಿವಾಲಯದ ಆಡಳಿತಕ್ಕೊಳಪಟ್ಟ I4C ರಾಷ್ಟ್ರೀಯ ಸೈಬರ್ ಕ್ರೈಮ್ ಪೋರ್ಟಲ್‌ಗೆ ನೇರವಾಗಿ ವರದಿ ಮಾಡಲಾಗುತ್ತದೆ.

ಆನ್‌ಲೈನ್‌ನಲ್ಲಿ ಮಕ್ಕಳ ಸುರಕ್ಷತೆಯು ಮೂಲಭೂತ ಮತ್ತು ರಾಜಿ ಮಾಡಿಕೊಳ್ಳಲಾಗದ ವಿಚಾರವಾಗಿದೆ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ. ಕೇವಲ ಮಾಹಿತಿ ವಿನಿಮಯ ಮಾಡುವ ಮಧ್ಯವರ್ತಿಯಾಗಿ ಮಾತ್ರವಲ್ಲದೆ, ತಂತ್ರಜ್ಞಾನದ ಮೂಲಕ ಆಕ್ಷೇಪಾರ್ಹ ವಿಷಯಗಳನ್ನು ಹರಡುವಲ್ಲಿ ತನ್ನ ಅಲ್ಗಾರಿದಮ್‌ಗಳ ಪಾತ್ರವೇನು ಎಂಬುದಕ್ಕೂ ಮೆಟಾ ಉತ್ತರಿಸಬೇಕಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಕೂಡ ಈ ವಿಷಯದಲ್ಲಿ ದೆಹಲಿ ಪೊಲೀಸರಿಗೆ ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ನೋಟಿಸ್ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು