ಬರ ಪಟ್ಟಿಯಲ್ಲೂ ನಿರಾಸೆ, ಎರಡನೇ ಪಟ್ಟಿಯಲ್ಲೂ ತಾಲೂಕುಗಳ ಹೆಸರು ನಾಪತ್ತೆ- ರೈತರಲ್ಲಿ ಆಕ್ರೋಶ

ಬೆಳಗಾವಿ : ರಾಜ್ಯ ಸರ್ಕಾರದ ಬರಪೀಡಿತ ತಾಲೂಕುಗಳ ಘೋಷಣಾ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ಹಾಗೂ ಸವದತ್ತಿ ತಾಲೂಕುಗಳಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಸರ್ಕಾರ ಪ್ರಕಟಿಸಿರುವ ಬರಪೀಡಿತ ತಾಲೂಕುಗಳ ಎರಡನೇ ಪಟ್ಟಿಯಲ್ಲೂ ಈ ಎರಡೂ ತಾಲೂಕುಗಳ ಹೆಸರು ಸೇರ್ಪಡೆಯಾಗದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಎರಡನೇ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ರಾಯಬಾಗ, ಕಿತ್ತೂರು, ನಿಪ್ಪಾಣಿ, ಮೂಡಲಗಿ ಹಾಗೂ ಯರಗಟ್ಟಿ ತಾಲೂಕುಗಳನ್ನು ನೂತನವಾಗಿ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲಾಗಿದೆ. ಆದರೆ ತೀವ್ರ ಮಳೆ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿತದಿಂದ ಸಂಕಷ್ಟದಲ್ಲಿರುವ ರಾಮದುರ್ಗ ಮತ್ತು ಸವದತ್ತಿಯನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ಸಚಿವರ ಪರಿಶೀಲನೆಯ ಬಳಿಕವೂ ಸೇರ್ಪಡೆಯಿಲ್ಲ

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ರಾಮದುರ್ಗ ಮತ್ತು ಸವದತ್ತಿ ತಾಲೂಕುಗಳಿಗೆ ಖುದ್ದು ಭೇಟಿ ನೀಡಿ ಬರ ಪರಿಸ್ಥಿತಿ ಹಾಗೂ ಒಣಗಿದ ಬೆಳೆಗಳನ್ನು ಪರಿಶೀಲಿಸಿದ್ದರು. ಈ ಹಿನ್ನೆಲೆಯಲ್ಲಿ ಎರಡೂ ತಾಲೂಕುಗಳು ಬರ ಪಟ್ಟಿಗೆ ಸೇರ್ಪಡೆಯಾಗುವ ನಿರೀಕ್ಷೆ ರೈತರಲ್ಲಿತ್ತು.ಆದರೆ ಎರಡನೇ ಪಟ್ಟಿಯಲ್ಲೂ ಹೆಸರು ಕಾಣಿಸಿಕೊಳ್ಳದಿರುವುದು ಸ್ಥಳೀಯ ರೈತರಿಗೆ ತೀವ್ರ ನಿರಾಸೆ ಮೂಡಿಸಿದೆ.

ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರು

ಬರ ಪರಿಹಾರ, ಬೆಳೆ ವಿಮೆ ಹಾಗೂ ಕುಡಿಯುವ ನೀರಿನ ನೆರವಿನ ನಿರೀಕ್ಷೆಯಲ್ಲಿದ್ದ ರಾಮದುರ್ಗ ಮತ್ತು ಸವದತ್ತಿ ತಾಲೂಕಿನ ರೈತರಿಗೆ ಸರ್ಕಾರದ ನಿರ್ಧಾರದಿಂದ ಹಿನ್ನಡೆಯಾಗಿದೆ. ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ರೈತ ಸಂಘಟನೆಗಳು ಹಾಗೂ ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದು, ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು