ಎಲ್‌ಐಸಿ ವಂಚನೆ ಅನಿಲ್ ಅಂಬಾನಿ ವಿರುದ್ಧ ಸಿಬಿಐ ಎಫ್‌ಐಆರ್ – ತನಿಖೆ ಆರಂಭ

ಮುಂಬೈ : ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ನೀಡಿದ ದೂರಿನ ಮೇರೆಗೆ ಭಾರತೀಯ ಕೇಂದ್ರೀಯ ತನಿಖಾ ದಳ (CBI) ಉದ್ಯಮಿ ಅನಿಲ್ ಅಂಬಾನಿ (Anil Ambani), ಅವರ ರಿಲಯನ್ಸ್ ಕ್ಯಾಪಿಟಲ್ ಲಿಮಿಟೆಡ್ (RCAP) ಸಂಸ್ಥೆ ಮತ್ತು ಕಂಪನಿಯ ಮಾಜಿ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಸೇಥ್ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದೆ.ಎಲ್‌ಐಸಿಗೆ ಸುಮಾರು 2,684.57 ಕೋಟಿ ರೂಪಾಯಿಗಳಷ್ಟು ಹಣಕಾಸಿನ ನಷ್ಟ ಉಂಟುಮಾಡಿದ್ದಾರೆ ಎಂಬ ಗಂಭೀರ ಆರೋಪ ಇವರ ಮೇಲಿದೆ. ವರದಿಯ ಪ್ರಕಾರ, 2012ರ ಏಪ್ರಿಲ್ 12ರಿಂದ 2018ರ ಮಾರ್ಚ್ 9ರ ನಡುವಿನ ಅವಧಿಯಲ್ಲಿ ರಿಲಯನ್ಸ್ ಕ್ಯಾಪಿಟಲ್ ಸಂಸ್ಥೆಯು ಜಾರಿಗೊಳಿಸಿದ್ದ ಐದು ‘ನಾನ್-ಕನ್ವರ್ಟಿಬಲ್ ಡಿಬೆಂಚರ್’ಗಳಲ್ಲಿ (NCD) ಎಲ್‌ಐಸಿ ಒಟ್ಟು 3,900 ಕೋಟಿ ರೂಪಾಯಿ ಹೂಡಿಕೆ ಮಾಡಿತ್ತು. ಕಂಪನಿಯ ಸಾಲ ತೀರಿಸಲು ಮತ್ತು ದಿನನಿತ್ಯದ ವ್ಯವಹಾರಿಕ ಕಾರ್ಯಗಳಿಗಾಗಿ ಈ ಹಣವನ್ನು ಬಳಸಲಾಗುವುದು ಎಂದು ನಂಬಿಸಿ, ಸುಳ್ಳು ಮಾಹಿತಿ ನೀಡಿ ಎಲ್‌ಐಸಿಯಿಂದ ಹೂಡಿಕೆ ಮಾಡಿಸಲಾಗಿತ್ತು.

ಆದರೆ, ಆರೋಪಿಗಳು ಕ್ರಿಮಿನಲ್ ಸಂಚು ನಡೆಸಿ, ಹಣಕಾಸಿನ ಖಾತೆಗಳನ್ನು ತಿದ್ದುಪಡಿ ಮಾಡಿ, ಹೂಡಿಕೆಯಾದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಎಲ್‌ಐಸಿ ಆರೋಪಿಸಿದೆ. ಈ ಮೂಲಕ ಹೂಡಿಕೆ ಮಾಡಿದ ಹಣವನ್ನು ಬೇರೆಡೆಗೆ ವರ್ಗಾಯಿಸಿ ಎಲ್‌ಐಸಿಗೆ ಭಾರಿ ನಷ್ಟ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಪ್ರಸ್ತುತ ಸಿಬಿಐ ಈ ಹಣ ಎಲ್ಲಿಗೆ ವರ್ಗಾವಣೆಯಾಗಿದೆ ಮತ್ತು ಇದರಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ಪಾತ್ರವೇನು ಎಂಬುದರ ಕುರಿತು ವಿಸ್ತೃತ ತನಿಖೆ ಕೈಗೆತ್ತಿಕೊಂಡಿದೆ. ಈ ಹಿಂದೆ ಬ್ಯಾಂಕ್‌ಗಳು ಮತ್ತು ಇಪಿಎಫ್‌ಒ ನೀಡಿದ ದೂರುಗಳ ಆಧಾರದ ಮೇಲೆಯೂ ಅನಿಲ್ ಅಂಬಾನಿ ಒಡೆತನದ ವಿವಿಧ ಕಂಪನಿಗಳ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿದ್ದು, ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯುತ್ತಿದೆ.

ಇನ್ನೊಂದೆಡೆ, ಅನಿಲ್ ಅಂಬಾನಿ ಅವರ ವಕ್ತಾರರು ಈ ಎಲ್ಲ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ರಿಲಯನ್ಸ್ ಕ್ಯಾಪಿಟಲ್ ಮಂಡಳಿಯನ್ನು ರಿಸರ್ವ್ ಬ್ಯಾಂಕ್ (RBI) ರದ್ದುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಿಸುವವರೆಗೆ ಅನಿಲ್ ಅಂಬಾನಿ ನಿರ್ದೇಶಕರಾಗಿದ್ದರು, ಅವರು ಯಾವುದೇ ತಪ್ಪು ಎಸಗಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು