ದೆಹಲಿ: ದೆಹಲಿಯ ಜನಕ್ಪುರಿಯಲ್ಲಿರುವ ಹಯಾತ್ ಸೆಂಟ್ರಿಕ್ ಹೋಟೆಲ್ನಲ್ಲಿ ಭಾನುವಾರ (ಸೆಪ್ಟೆಂಬರ್ 20) ಆಯೋಜಿಸಲಾಗಿದ್ದ ಕ್ರಿಶ್ಚಿಯನ್ ಪ್ರಾರ್ಥನಾ ಸಭೆಗೆ ಗುಂಪೊಂದು ನುಗ್ಗಿ, ಹಿಂದೂಗಳನ್ನು ಸಾಮೂಹಿಕವಾಗಿ ಮತಾಂತರಿಸಲಾಗುತ್ತಿದೆ ಎಂದು ಆರೋಪಿಸಿ ಗದ್ದಲ ಸೃಷ್ಟಿಸಿದೆ. ಆದರೆ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ ದೆಹಲಿ ಪೊಲೀಸರು ಮತಾಂತರ ಆರೋಪವನ್ನು ತಳ್ಳಿಹಾಕಿದ್ದು, ಯಾವುದೇ ಪುರಾವೆಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವರದಿಗಳ ಪ್ರಕಾರ, ಹೋಟೆಲ್ ಸಭಾಂಗಣಕ್ಕೆ ನುಗ್ಗಿದ ಕೆಲ ವ್ಯಕ್ತಿಗಳು, ಆಯೋಜಕರು ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿದ್ದಾರೆ ಎಂದು ಆರೋಪಿಸಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸಭೆಯಲ್ಲಿದ್ದ ಮಕ್ಕಳು ಹಿಂದೂಗಳಾಗಿದ್ದು, ಹಣದ ಆಮಿಷವೊಡ್ಡಿ ಸುಮಾರು 500 ಹಿಂದೂಗಳನ್ನು ಮತಾಂತರಿಸಲಾಗುತ್ತಿದೆ ಹಾಗೂ ಇದನ್ನು ವಿರೋಧಿಸಿದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವಿಡಿಯೋದಲ್ಲಿ ಆ ವ್ಯಕ್ತಿಗಳು ದೂಷಿಸಿದ್ದರು. ಅಲ್ಲದೆ ಅಲ್ಲಿ ವಿತರಿಸಲಾಗುತ್ತಿದ್ದ ಅರ್ಜಿ ನಮೂನೆಗಳನ್ನು ಪ್ರದರ್ಶಿಸಿ ಅವು ಮತಾಂತರದ ಫಾರ್ಮ್ಗಳು ಎಂದು ಬಿಂಬಿಸಲಾಗಿತ್ತು.
ಆದರೆ ಈ ಆರೋಪಗಳನ್ನು ಪಶ್ಚಿಮ ದೆಹಲಿ ಉಪ ಪೊಲೀಸ್ ಆಯುಕ್ತ (ಡಿಸಿಪಿ) ವಿಚಿತ್ರ ವೀರ್ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಸ್ಥಳೀಯ ಕ್ರಿಶ್ಚಿಯನ್ ಸಮುದಾಯದ ಸದಸ್ಯರು ತಮ್ಮ ವಾಡಿಕೆಯ ಭಾನುವಾರದ ಪ್ರಾರ್ಥನೆಗಾಗಿ ಹೋಟೆಲ್ನಲ್ಲಿ ಒಗ್ಗೂಡಿದ್ದರು ಎಂದು ಅವರು ತಿಳಿಸಿದ್ದಾರೆ. “ಪ್ರಾಥಮಿಕ ವಿಚಾರಣೆ ಮತ್ತು ಪರಿಶೀಲನೆಯ ವೇಳೆ ಯಾವುದೇ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಸಂಗತಿಗಳು ಕಂಡುಬಂದಿಲ್ಲ. ಸುಮಾರು 500 ಜನರನ್ನು ಮತಾಂತರಿಸಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರು ಇಂತಹ ವದಂತಿಗಳನ್ನು ನಂಬಬಾರದು,” ಎಂದು ಡಿಸಿಪಿ ಎಕ್ಸ್ (ಟ್ವಿಟರ್) ಮೂಲಕ ಸ್ಪಷ್ಟನೆ ನೀಡಿದ್ದಾರೆ.
ವಿಡಿಯೋಗಳಲ್ಲಿ ತೋರಿಸಲಾದ ನಮೂನೆಗಳು ‘ಗ್ಲೋಬಲ್ ರಾಯಲ್ ಪ್ರೀಸ್ಟ್ಹುಡ್ ಚರ್ಚ್’ಗೆ ಸಂಬಂಧಿಸಿದ ಪ್ರಾರ್ಥನಾ ವಿನಂತಿ ಹಾಗೂ ಚರ್ಚ್ ಚಟುವಟಿಕೆಗಳ ಅರ್ಜಿಗಳಾಗಿದ್ದವು ಎಂಬುದು ಸ್ಪಷ್ಟವಾಗಿದೆ. ಪ್ರಾರ್ಥನಾ ನಮೂನೆಯಲ್ಲಿ ಪಾಸ್ಟರ್ಗೆ ಸಲ್ಲಿಸಬೇಕಾದ ವೈಯಕ್ತಿಕ ಪ್ರಾರ್ಥನಾ ವಿನಂತಿ ವಿವರಗಳಿದ್ದರೆ, ಮತ್ತೊಂದು ನಮೂನೆಯು ಚರ್ಚ್ನ ವಿವಿಧ ಜವಾಬ್ದಾರಿಗಳಲ್ಲಿ ಆಸಕ್ತಿ ಹೊಂದಿರುವವರ ವಿವರಗಳನ್ನು ಸಂಗ್ರಹಿಸುವ ಸಾಂಸ್ಥಿಕ ಫಾರ್ಮ್ ಆಗಿತ್ತು.
ಗ್ಲೋಬಲ್ ರಾಯಲ್ ಪ್ರೀಸ್ಟ್ಹುಡ್ ಚರ್ಚ್ ನಿಯಮಿತವಾಗಿ ಈ ಹೋಟೆಲ್ನಲ್ಲಿ ಭಾನುವಾರದ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಾ ಬಂದಿದೆ. ಸೆಪ್ಟೆಂಬರ್ 20ರ ಸಭೆಗೂ ಮುನ್ನ ಚರ್ಚ್ನ ಹಿರಿಯ ಪಾಸ್ಟರ್ ಇನ್ಸ್ಟಾಗ್ರಾಮ್ನಲ್ಲಿ ಆಹ್ವಾನ ಪತ್ರಿಕೆ ಹಂಚಿಕೊಂಡಿದ್ದರು. ಪ್ರಾರ್ಥನಾ ಕೂಟದಲ್ಲಿ ಯಾವುದೇ ಮತಾಂತರ ಚಟುವಟಿಕೆ ನಡೆದಿರುವುದಕ್ಕೆ ಪುರಾವೆಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
