ಮಧ್ಯಪ್ರದೇಶದಲ್ಲಿ ಮಕ್ಕಳ ಸಾವು ವರದಿ ಮಾಡಲು ತೆರಳಿದ್ದ ನಮ್ಮನ್ನು ಪೊಲೀಸರು ನಮ್ಮನ್ನು ವಸತಿಗೃಹದಿಂದ ಹೊರದಬ್ಬಿದರು: ಪತ್ರಕರ್ತೆ ಕಾವ್ಯಾ ಕರ್ನಾಟಿಕ್ ಆರೋಪ

ಭೋಪಾಲ್: ಮಧ್ಯಪ್ರದೇಶದಲ್ಲಿ ಸಂಭವಿಸಿದ ಬುಡಕಟ್ಟು ಸಮುದಾಯದ ಮಕ್ಕಳ ಸಾವು ಹಾಗೂ ಆರೋಗ್ಯ ವ್ಯವಸ್ಥೆಯ ದುಸ್ಥಿತಿಯ ಬಗ್ಗೆ ವರದಿ ಮಾಡಲು ತೆರಳಿದ್ದ ತಮ್ಮನ್ನು ಮತ್ತು ತಮ್ಮ ತಂಡವನ್ನು ಪೊಲೀಸರು ಹೋಟೆಲ್‌ಗಳಿಂದ ಬಲವಂತವಾಗಿ ಹೊರಹಾಕಿದ್ದಾರೆ ಎಂದು ಜನಪ್ರಿಯ ಡಿಜಿಟಲ್ ಕಂಟೆಂಟ್ ಕ್ರಿಯೇಟರ್, ಸ್ವತಂತ್ರ ಪತ್ರಕರ್ತೆ ಹಾಗೂ ‘ಕೆಕೆ ಕ್ರಿಯೇಟ್’ ಸಂಸ್ಥಾಪಕಿ ಕಾವ್ಯಾ ಕರ್ನಾಟಿಕ್ ಆರೋಪಿಸಿದ್ದಾರೆ.

ಈ ಕುರಿತು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ದೆಹಲಿಯಿಂದ ಬಂದ ವರದಿಗಾರರನ್ನು ಗುರಿಯಾಗಿಸಿಕೊಂಡು ಪೊಲೀಸರು ಹೋಟೆಲ್ ದಾಖಲೆಗಳನ್ನು ಪರಿಶೀಲಿಸಿ ಅವರನ್ನು ಹೊರಹಾಕುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ವಾಸ್ತವವನ್ನು ಸಮಾಜಕ್ಕೆ ತೋರಿಸಲು ಮುಂದಾಗಿದ್ದಕ್ಕಾಗಿ ತಮ್ಮನ್ನು ಹೋಟೆಲ್‌ನಿಂದ ಹೊರದಬ್ಬಲಾಯಿತು ಎಂದು ಅವರು ಹೇಳಿದ್ದಾರೆ.

ವರದಿಯ ಚಿತ್ರೀಕರಣಕ್ಕಾಗಿ ತಮ್ಮ ತಂಡದೊಂದಿಗೆ ಮೂರು ದಿನಗಳ ಕಾಲ ಹೋಟೆಲ್ ಬುಕ್ ಮಾಡಲಾಗಿತ್ತು ಎಂದು ಕಾವ್ಯಾ ತಿಳಿಸಿದ್ದಾರೆ. ಆದರೆ, ಕೌಟುಂಬಿಕ ಕಾರ್ಯಕ್ರಮವಿದೆ ಎಂಬ ಕಾರಣ ನೀಡಿ ಮರುದಿನವೇ ಹೋಟೆಲ್ ಖಾಲಿ ಮಾಡುವಂತೆ ಆಡಳಿತ ಮಂಡಳಿ ಸೂಚಿಸಿತು. ಆ ವಿವರಣೆಯ ಬಗ್ಗೆ ಅನುಮಾನವಿದ್ದರೂ, ತಂಡವು ಅಲ್ಲಿಂದ ಹೊರಟು ಮತ್ತೊಂದು ಹೋಟೆಲ್‌ಗೆ ತೆರಳಿತು. ಆದರೆ ಅಲ್ಲಿಯೂ ಒಂದೇ ರಾತ್ರಿಯಲ್ಲಿ ಹೋಟೆಲ್ ಖಾಲಿ ಮಾಡುವಂತೆ ಒತ್ತಾಯಿಸಲಾಯಿತು. ನಂತರ ವಿಚಾರಿಸಿದಾಗ, ಪೊಲೀಸರು ಹೋಟೆಲ್‌ಗಳ ದಾಖಲೆಗಳನ್ನು ಪರಿಶೀಲಿಸಿ ದೆಹಲಿಯಿಂದ ಬಂದಿದ್ದ ಪ್ರತಿಯೊಬ್ಬ ಪತ್ರಕರ್ತರನ್ನು ಅಲ್ಲಿಂದ ತೆರವುಗೊಳಿಸುತ್ತಿರುವುದು ಬೆಳಕಿಗೆ ಬಂತು ಎಂದು ಅವರು ದೂರಿದ್ದಾರೆ.

ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ವಿವಿಧ ಕಾಯಿಲೆಗಳಿಂದ 30ಕ್ಕೂ ಹೆಚ್ಚು ಬುಡಕಟ್ಟು ಮಕ್ಕಳು ಸಾವನ್ನಪ್ಪಿರುವ ಘಟನೆ ಬಿಜೆಪಿ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಈ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ್ದ ಮಧ್ಯಪ್ರದೇಶ ಹೈಕೋರ್ಟ್, ಕಳೆದ ವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿತ್ತು. 50 ಹಾಸಿಗೆಗಳ ಸಾಮರ್ಥ್ಯವಿರುವ ಆಸ್ಪತ್ರೆಯಲ್ಲಿ ಸುಮಾರು 400 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಮರ್ಪಕ ಚಿಕಿತ್ಸಾ ಸೌಲಭ್ಯಗಳಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ಉತ್ತಮ ಆರೋಗ್ಯ ಸೌಲಭ್ಯಗಳು ಮತ್ತು ಹೊಣೆಗಾರಿಕೆಯುಳ್ಳ ಆಡಳಿತಕ್ಕಾಗಿ ಸ್ಥಳೀಯ ಜನರು ಬೀದಿಗಿಳಿದು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಭಾರತದ ಈ ನೈಜ ಮುಖವನ್ನೂ ಜಗತ್ತಿಗೆ ತೋರಿಸುವುದು ಅತ್ಯಗತ್ಯ ಎಂಬ ಉದ್ದೇಶದಿಂದ ತಾವು ಅಲ್ಲಿಗೆ ತೆರಳಿದ್ದಾಗಿ ಕಾವ್ಯಾ ಕರ್ನಾಟಿಕ್ ಸ್ಪಷ್ಟಪಡಿಸಿದ್ದಾರೆ.

ಈ ಬೆಳವಣಿಗೆಗಳು ತಮಗೆ ತೀವ್ರ ಭೀತಿ ಹುಟ್ಟಿಸಿದ್ದವು ಎಂದು ತಿಳಿಸಿದ ಅವರು, ತಮ್ಮ ಮೇಲೆ ಸದಾ ನಿಗಾ ಇರಿಸಲಾಗಿತ್ತು ಹಾಗೂ ಪೊಲೀಸರು ತಮ್ಮ ಆಧಾರ್ ವಿವರಗಳನ್ನು ಸಂಗ್ರಹಿಸಿದ್ದರು ಎಂದು ಆರೋಪಿಸಿದ್ದಾರೆ. ಹೋಟೆಲ್‌ನಲ್ಲಿದ್ದ ತಮ್ಮ ವಸ್ತುಗಳ ಸುರಕ್ಷತೆಯ ಬಗ್ಗೆಯೂ ಆತಂಕ ಎದುರಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಪತ್ರಕರ್ತರನ್ನು ನಿಯಂತ್ರಿಸಲು ಮತ್ತು ವಾಸ್ತವವನ್ನು ಮುಚ್ಚಿಹಾಕಲು ತೋರಿಸುತ್ತಿರುವ ಇಷ್ಟೊಂದು ಆತುರ ಮತ್ತು ಸಂಪನ್ಮೂಲಗಳನ್ನು ಹಳ್ಳಿಗರ ಆರೋಗ್ಯ ಸುಧಾರಣೆಗೆ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬಳಸಬೇಕಿತ್ತು ಎಂದು ಅವರು ಪ್ರಶ್ನಿಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ವಾಸ್ತವವನ್ನು ಸರಿಪಡಿಸುವುದಕ್ಕಿಂತ ಹೆಚ್ಚಾಗಿ ಅದನ್ನು ಮುಚ್ಚಿಡುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು