ಮಾನನಷ್ಟ ಮೊಕದ್ದಮೆ: ಜೈಲಿನಲ್ಲೇ ಉಳಿದ ಪತ್ರಕರ್ತ ರವಿ ನಾಯರ್‌, ಅದಾನಿ ಸಂಸ್ಥೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದ ಗುಜರಾತ್ ಹೈಕೋರ್ಟ್

ಅಹಮದಾಬಾದ್: ಅದಾನಿ ಎಂಟರ್‌ಪ್ರೈಸಸ್ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಸ್ವತಂತ್ರ ಪತ್ರಕರ್ತ ರವಿ ನಾಯರ್ ಅವರಿಗೆ ಸದ್ಯಕ್ಕೆ ಯಾವುದೇ ಮಧ್ಯಂತರ ರಿಲೀಫ್ ಸಿಕ್ಕಿಲ್ಲ. ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಅದಾನಿ ಸಂಸ್ಥೆಗೆ ಕಾಲಾವಕಾಶ ನೀಡಿರುವ ಗುಜರಾತ್ ಹೈಕೋರ್ಟ್, ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿದೆ.

ನ್ಯಾಯಮೂರ್ತಿ ಎಂ.ಕೆ. ಠಕ್ಕರ್ ಅವರಿದ್ದ ಪೀಠದ ಮುಂದೆ ಈ ಅರ್ಜಿಯ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಅದಾನಿ ಎಂಟರ್‌ಪ್ರೈಸಸ್ ಪರ ವಕೀಲರು ಪ್ರಕರಣಕ್ಕೆ ಸಂಬಂಧಿಸಿದ ಕಾನೂನಾತ್ಮಕ ಮತ್ತು ವಾಸ್ತವಾಂಶದ ದಾಖಲೆಗಳನ್ನು ನ್ಯಾಯಾಲಯದ ಮುಂದಿಡಲು ಕಾಲಾವಕಾಶ ಕೋರಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರವಿ ನಾಯರ್ ಪರ ವಕೀಲ ಅಭಿಕ್ ಚಿಮನಿ, ಪ್ರಕರಣ ಈಗಾಗಲೇ ಮೇಲ್ಮನವಿ ಹಂತದಲ್ಲಿದ್ದು, ಖಾಸಗಿ ದೂರುದಾರ ಸಂಸ್ಥೆಯು ಪದೇಪದೆ ವಿಚಾರಣೆ ಮುಂದೂಡಿಕೆ ಕೋರಲು ಅವಕಾಶ ನೀಡಬಾರದು ಎಂದು ವಾದಿಸಿದರು.

ತಮ್ಮ ಕಕ್ಷಿದಾರರು ಒಂದೇ ಒಂದು ದಿನವೂ ಜೈಲಿನಲ್ಲಿ ಇರಬಾರದು ಎಂದು ಹೇಳಿ ಮಧ್ಯಂತರ ಜಾಮೀನು ನೀಡುವಂತೆ ಮನವಿ ಮಾಡಿದರು. ಆದರೆ, ನೋಟಿಸ್ ಜಾರಿಯಾದ ಬಳಿಕ ದೂರುದಾರರಿಗೆ ತಮ್ಮ ವಾದ ಮಂಡಿಸಲು ನ್ಯಾಯಯುತ ಅವಕಾಶ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅದಾನಿ ಸಂಸ್ಥೆಗೆ ಇದು ಕೊನೆಯ ಅವಕಾಶವಾಗಿದ್ದು, ಮುಂದಿನ ವಿಚಾರಣೆಯಲ್ಲಿ ಯಾವುದೇ ಕಾರಣಕ್ಕೂ ಮುಂದೂಡಿಕೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಗಾಂಧಿನಗರದ ಮನ್ಸಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು 2026ರ ಫೆಬ್ರವರಿ 10ರಂದು ರವಿ ನಾಯರ್ ಅವರನ್ನು ಅಪರಾಧಿ ಎಂದು ತೀರ್ಮಾನಿಸಿ ಒಂದು ವರ್ಷದ ಸಾದಾ ಜೈಲು ಶಿಕ್ಷೆ ಹಾಗೂ 5,000 ರೂಪಾಯಿ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಗಾಂಧಿನಗರ ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮಾರ್ಚ್ 9ರಂದು ಸೆಷನ್ಸ್ ನ್ಯಾಯಾಲಯವು ಅವರ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು, ಪ್ರತಿ ವಿಚಾರಣೆಗೆ ಹಾಜರಾಗಬೇಕೆಂಬ ಷರತ್ತಿನೊಂದಿಗೆ ಜಾಮೀನು ಮಂಜೂರು ಮಾಡಿತ್ತು.

ಆದರೆ, ಸೆಪ್ಟೆಂಬರ್ 3ರ ವಿಚಾರಣೆಗೆ ರವಿ ನಾಯರ್ ಖುದ್ದು ಗೈರಾಗಿದ್ದ ಕಾರಣ, ಅವರು ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಪರಿಗಣಿಸಿದ ಸೆಷನ್ಸ್ ನ್ಯಾಯಾಲಯ ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಹೊರಡಿಸಿತ್ತು. ಬಳಿಕ ಸೆಪ್ಟೆಂಬರ್ 17ರಂದು ವಾರಂಟ್ ರದ್ದುಪಡಿಸುವಂತೆ ಕೋರಿ ನಾಯರ್ ನ್ಯಾಯಾಲಯಕ್ಕೆ ಹಾಜರಾದಾಗ, ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿ ತಕ್ಷಣವೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಕೇರಳದ ನಿವಾಸಿಯಾಗಿರುವ ರವಿ ನಾಯರ್, ಪ್ರತಿಯೊಂದು ವಿಚಾರಣೆಗೂ ಗಾಂಧಿನಗರಕ್ಕೆ ಪ್ರಯಾಣಿಸುವುದು ಭಾರಿ ಆರ್ಥಿಕ ಹೊರೆ ಮತ್ತು ತೊಂದರೆ ಉಂಟುಮಾಡುತ್ತದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ. ತಮ್ಮ ಪರ ವಕೀಲರು ಪ್ರತಿಯೊಂದು ವಿಚಾರಣೆಯಲ್ಲೂ ಹಾಜರಿದ್ದು, ಪ್ರಕರಣಕ್ಕೆ ಯಾವುದೇ ಅಡ್ಡಿಪಡಿಸಿಲ್ಲ ಎಂದು ವಾದಿಸಿರುವ ಅವರು, ಸೆಷನ್ಸ್ ನ್ಯಾಯಾಲಯದ ಆದೇಶಗಳನ್ನು ರದ್ದುಪಡಿಸಿ ತಮಗೆ ನೀಡಲಾಗಿದ್ದ ಜಾಮೀನನ್ನು ಮರುಸ್ಥಾಪಿಸುವಂತೆ ಕೋರಿದ್ದಾರೆ.

ಅದಾನಿ-ಹಿಂಡನ್‌ಬರ್ಗ್ ವಿವಾದ, ಕಾರ್ಪೊರೇಟ್ ಏಕಸ್ವಾಮ್ಯ ಹಾಗೂ ಅಕ್ರಮಗಳ ಕುರಿತು ಸತತ ತನಿಖಾ ವರದಿಗಳನ್ನು ಪ್ರಕಟಿಸಿದ್ದ ರವಿ ನಾಯರ್ ವಿರುದ್ಧ, ಎಕ್ಸ್‌ ಖಾತೆಯ ಪೋಸ್ಟ್‌ಗಳು ಹಾಗೂ ‘ಅದಾನಿ ವಾಚ್’ ವೆಬ್‌ಸೈಟ್ ಲೇಖನಗಳ ಮೂಲಕ ಸಂಸ್ಥೆಯ ಹೆಸರಿಗೆ ಕಳಂಕ ತಂದಿದ್ದಾರೆ ಎಂದು ಆರೋಪಿಸಿ ಅದಾನಿ ಎಂಟರ್‌ಪ್ರೈಸಸ್ 2021ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿತ್ತು.

Related Articles

ಇತ್ತೀಚಿನ ಸುದ್ದಿಗಳು