ದೆಹಲಿ: 2020ರ ಈಶಾನ್ಯ ದೆಹಲಿ ಗಲಭೆಗೆ ಸಂಬಂಧಿಸಿದ ಬೃಹತ್ ಸಂಚು ಪ್ರಕರಣದಲ್ಲಿ ಜೆಎನ್‌ಯು ಮಾಜಿ ಸಂಶೋಧಕ ಉಮರ್ ಖಾಲಿದ್ ಮತ್ತು ಹೋರಾಟಗಾರ ಶರ್ಜಿಲ್ ಇಮಾಮ್ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಸೆಪ್ಟೆಂಬರ್ 30ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್ ಮತ್ತು ದಿನೇಶ್ ಭಟ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಸೋಮವಾರ ಈ ಅರ್ಜಿಗಳು ವಿಚಾರಣೆಗೆ ಬಂದಿದ್ದವು. ಆದರೆ, ಸರ್ಕಾರದ ಪರವಾಗಿ ವಾದ ಮಂಡಿಸಬೇಕಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರ ಆರೋಗ್ಯ ಹದಗೆಟ್ಟಿರುವ ಕಾರಣ ವಿಚಾರಣೆಯನ್ನು ಮುಂದೂಡುವಂತೆ ವಿಶೇಷ ಸರ್ಕಾರಿ ಅಭಿಯೋಜಕರು ಮನವಿ ಮಾಡಿದರು. ಪ್ರಾಸಿಕ್ಯೂಷನ್ ಕೋರಿಕೆಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.
ತಮ್ಮ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿ ಜುಲೈ 4ರಂದು ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಯ್ದೆಯ ಸೆಕ್ಷನ್ 21ರ ಅಡಿಯಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಖಾಲಿದ್ ಸಲ್ಲಿಸಿರುವ ಮೂರನೇ ಜಾಮೀನು ಅರ್ಜಿ ಇದಾಗಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಇವರಿಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದ ಕಾರಣ, ತಾನು ಆ ತೀರ್ಪಿಗೆ ಬದ್ಧವಾಗಿರುವುದಾಗಿ ಹೇಳಿ ವಿಚಾರಣಾ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ರಕ್ಷಿತ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ನಂತರ ಅಥವಾ ಆದೇಶ ಬಂದ ಒಂದು ವರ್ಷದ ಬಳಿಕ ಶರ್ಜಿಲ್ ಇಮಾಮ್ ಜಾಮೀನಿಗೆ ಮರು ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ತಿಳಿಸಿತ್ತು.
ಜನವರಿ 5ರಂದು ಇದೇ ಪ್ರಕರಣದಲ್ಲಿ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್‌ಗೆ ಜಾಮೀನು ನಿರಾಕರಿಸಿತ್ತು. ನಂತರ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ನೇತೃತ್ವದ ಸುಪ್ರೀಂ ಕೋರ್ಟ್‌ನ ಮತ್ತೊಂದು ವಿಭಾಗೀಯ ಪೀಠವು, ಯುಎಪಿಎ ಪ್ರಕರಣಗಳಲ್ಲಿ ವಿಚಾರಣೆಯ ವಿಳಂಬವನ್ನು ಜಾಮೀನು ನೀಡಲು ಪ್ರಮುಖ ಅಂಶವಾಗಿ ಪರಿಗಣಿಸಬೇಕೆಂಬ ‘ಯೂನಿಯನ್ ಆಫ್ ಇಂಡಿಯಾ ವಿರುದ್ಧ ಕೆ.ಎ. ನಜೀಬ್’ ಪ್ರಕರಣದ ತೀರ್ಪನ್ನು ಈ ಹಿಂದಿನ ಆದೇಶದಲ್ಲಿ ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ಬಳಿಕ ಮೇ ತಿಂಗಳಲ್ಲಿ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಪೀಠವು ಕೆ.ಎ. ನಜೀಬ್ ತೀರ್ಪಿನ ವ್ಯಾಖ್ಯಾನಕ್ಕೆ ಸಂಬಂಧಿಸಿದ ಭಿನ್ನ ನಿಲುವುಗಳನ್ನು ಗಮನಿಸಿ, ಈ ವಿಷಯವನ್ನು ವಿಸ್ತೃತ ಪೀಠಕ್ಕೆ ಉಲ್ಲೇಖಿಸಿದೆ.
ದೆಹಲಿ ಪೊಲೀಸರ ವಿಶೇಷ ತನಿಖಾ ದಳವು (ಸ್ಪೆಷಲ್ ಸೆಲ್) ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಐಪಿಸಿ ಮತ್ತು ಯುಎಪಿಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಅವರ ಜಾಮೀನು ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ನವೆಂಬರ್ 4ಕ್ಕೆ ವಿಚಾರಣೆಗೆ ನಿಗದಿಪಡಿಸಿದೆ.
