ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪ ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಮಂಗಳವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಬೆಂಗಳೂರು, ಮಂಡ್ಯ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೀದರ್, ಕೊಡಗು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರಿಗೆ ಸಂಬಂಧಿಸಿದ ನಿವಾಸ, ಕಚೇರಿ ಹಾಗೂ ಇತರ ಸ್ಥಳಗಳಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ.
ಲೋಕಾಯುಕ್ತ ಅಧಿಕಾರಿಗಳ ತಂಡಗಳು ಆಸ್ತಿ-ಪಾಸ್ತಿ, ಬ್ಯಾಂಕ್ ವ್ಯವಹಾರಗಳು, ಆದಾಯದ ಮೂಲಗಳು ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸುತ್ತಿವೆ. ಶೋಧ ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ವಶಪಡಿಸಿಕೊಂಡಿರುವ ದಾಖಲೆಗಳು ಅಥವಾ ಇತರ ವಸ್ತುಗಳ ಕುರಿತು ಅಧಿಕೃತ ಮಾಹಿತಿ ಹೊರಬರುವ ಸಾಧ್ಯತೆ ಇದೆ.
ಬೀದರ್‌ನಲ್ಲಿ ಮೂರು ಕಡೆ ಶೋಧ
ಬೀದರ್‌ನಲ್ಲಿ ಕೃಷಿ ಇಲಾಖೆಯ ನಿವೃತ್ತ ಆಡಳಿತಾಧಿಕಾರಿ ಮಾಣೀಕ್ ಶೆರಿಕಾರ್ ಅವರಿಗೆ ಸಂಬಂಧಿಸಿದ ಮೂರು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆದಿದೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಡಿವೈಎಸ್ಪಿ ಹನುಮಂತ ರೆಡ್ಡಿ ನೇತೃತ್ವದ ತಂಡವು ಬೀದರ್ ನಗರದ ಹಕ್ಕ್ ಕಾಲೋನಿಯಲ್ಲಿರುವ ನಿವಾಸ, ಹುಮ್ನಾಬಾದ್‌ನ ನಿವಾಸ ಹಾಗೂ ಚಿಟಗುಪ್ಪ ತಾಲ್ಲೂಕಿನ ಮುತ್ತಂಗಿ ಗ್ರಾಮದ ಸಮೀಪದ ಫಾರ್ಮ್‌ಹೌಸ್‌ನಲ್ಲಿ ಪರಿಶೀಲನೆ ನಡೆಸಿದೆ.
ಆಸ್ತಿ ಗಳಿಕೆ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಶೋಧದಲ್ಲಿ ನಗದು, ದಾಖಲೆಗಳು ಅಥವಾ ಇತರ ಆಸ್ತಿಗಳು ಪತ್ತೆಯಾಗಿರುವ ಕುರಿತು ಲೋಕಾಯುಕ್ತದಿಂದ ಅಧಿಕೃತ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.
ಕಲಬುರಗಿಯಲ್ಲಿ ಜೆಸ್ಕಾಂ ಎಇಇ ನಿವಾಸ, ಕಚೇರಿಯಲ್ಲಿ ತಪಾಸಣೆ
ಕಲಬುರಗಿಯಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ರಾಜೇಶ್ವರಿ ಅವರಿಗೆ ಸಂಬಂಧಿಸಿದ ಎರಡು ಮನೆಗಳು ಮತ್ತು ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ಪರಿಶೀಲನೆ ನಡೆಸಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನ ನಿವಾಸ, ಖಾದ್ರಿ ಚೌಕ್‌ನ ಮತ್ತೊಂದು ಮನೆ ಹಾಗೂ ಜೆಸ್ಕಾಂ ಕಚೇರಿಯಲ್ಲಿ ದಾಖಲೆಗಳು ಮತ್ತು ಆಸ್ತಿ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್ ನಿವಾಸ, ಕಚೇರಿಗಳ ಪರಿಶೀಲನೆ
ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಬಸವನಗುಡಿಯ ಡಿಸ್ಟ್ರಿಕ್ಟ್ ರಿಜಿಸ್ಟ್ರಾರ್ ಶ್ರೀದೇವಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಯಲಹಂಕದಲ್ಲಿರುವ ನಿವಾಸ, ಬಸವನಗುಡಿಯ ಕಚೇರಿ ಹಾಗೂ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ರಾಮನಗರದ ಕಚೇರಿ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಖಲೆಗಳು, ಆಸ್ತಿ-ಪಾಸ್ತಿ ಮತ್ತು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ.
ಮಡಿಕೇರಿ ನಗರಸಭೆ ಆಯುಕ್ತರ ಮನೆ, ಕಚೇರಿಯಲ್ಲೂ ಶೋಧ
ಮಡಿಕೇರಿ ನಗರಸಭೆ ಆಯುಕ್ತ ಹೆಚ್.ಆರ್. ರಮೇಶ್ ಅವರ ನಿವಾಸ ಮತ್ತು ಕಚೇರಿಯಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಸಾರ್ವಜನಿಕರಿಂದ ಬಂದ ದೂರುಗಳು ಹಾಗೂ ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದ್ದು, ಶೋಧ ಪೂರ್ಣಗೊಂಡ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಹೆಸ್ಕಾಂ ಎಇಇ ನಿವಾಸದಲ್ಲಿ ಚಿನ್ನಾಭರಣ, ನಗದು ಪರಿಶೀಲನೆ
ಹೆಸ್ಕಾಂ ಎಇಇ ಅವರಿಗೆ ಸೇರಿದ ನಿವಾಸದಲ್ಲೂ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಪತ್ತೆಯಾಗಿದೆ ಎನ್ನಲಾಗಿದ್ದು, ಅವುಗಳ ನಿಖರ ಪ್ರಮಾಣ ಮತ್ತು ಮೌಲ್ಯವನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಚಿನ್ನಾಭರಣದ ತೂಕ ಮತ್ತು ಮೌಲ್ಯ ನಿರ್ಧರಿಸಲು ಅಕ್ಕಸಾಲಿಗನನ್ನು ಸ್ಥಳಕ್ಕೆ ಕರೆಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಕುರಿತು ಲೋಕಾಯುಕ್ತದ ಅಧಿಕೃತ ಅಂತಿಮ ಮಾಹಿತಿ ಹೊರಬಂದ ಬಳಿಕವೇ ವಶಪಡಿಸಿಕೊಂಡಿರುವ ಆಸ್ತಿಯ ನಿಖರ ವಿವರ ಸ್ಪಷ್ಟವಾಗಲಿದೆ.
ಚಿತ್ರದುರ್ಗದಲ್ಲಿ ₹40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಎಫ್‌ಡಿಎ ಬಂಧನ
ಇದೇ ವೇಳೆ ಚಿತ್ರದುರ್ಗ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಎಫ್‌ಡಿಎ ಬಸವರಾಜು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೆಲ್ಲೋಡು ಗ್ರಾಮದ ಹನುಮಂತಪ್ಪ ಎಂಬುವವರ ಆರ್‌ಟಿಸಿ ತಿದ್ದುಪಡಿ ಮಾಡಿಕೊಡಲು ₹40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಕೇಳಿಬಂದಿದೆ. ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಸವರಾಜು ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಲೋಕಾಯುಕ್ತ ಎಸ್‌ಪಿ ಕವಲೇಪುರ ಹಾಗೂ ಡಿವೈಎಸ್ಪಿ ಕಲಾವತಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ ಎನ್ನಲಾಗಿದ್ದು, ಲಂಚದ ಹಣ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ರಾಜ್ಯದ ವಿವಿಧೆಡೆ ನಡೆಯುತ್ತಿರುವ ಈ ಶೋಧ ಮತ್ತು ಟ್ರ್ಯಾಪ್ ಕಾರ್ಯಾಚರಣೆಗಳ ಸಂಪೂರ್ಣ ವಿವರಗಳು ಅಧಿಕಾರಿಗಳ ತನಿಖೆ ಹಾಗೂ ಅಧಿಕೃತ ಹೇಳಿಕೆಗಳ ಬಳಿಕ ಇನ್ನಷ್ಟು ಸ್ಪಷ್ಟವಾಗುವ ನಿರೀಕ್ಷೆಯಿದೆ.
