“..ಭಾರತೀಯ ಚುನಾವಣಾ ಆಯೋಗವು ತನ್ನ ಇತಿಹಾಸದಲ್ಲೇ ಅತ್ಯಂತ ಅಪಾಯಕಾರಿ ಸಾಂಸ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಅದರ ವಿಶ್ವಾಸಾರ್ಹತೆಯು ಪಾತಾಳಕ್ಕೆ ಇಳಿದಿದೆ..” ಚುನಾವಣಾ ಆಯೋಗದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿಶೇಷ ಲೇಖನ.. ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಭಾರತದ ಪ್ರಜಾಪ್ರಭುತ್ವದ ಬೆನ್ನೆಲುಬು ಮತ್ತು ನೈತಿಕ ದಿಕ್ಸೂಚಿಯಾಗಿರಬೇಕಿದ್ದ ಭಾರತೀಯ ಚುನಾವಣಾ ಆಯೋಗವು ತನ್ನ ಇತಿಹಾಸದಲ್ಲೇ ಅತ್ಯಂತ ಅಪಾಯಕಾರಿ ಸಾಂಸ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಅದರ ವಿಶ್ವಾಸಾರ್ಹತೆಯು ಪಾತಾಳಕ್ಕೆ ಇಳಿದಿದೆ. ಮೂವರೂ ಆಯುಕ್ತರು ಕೂಡಿ ನಿರ್ಧಾರ ಕೈಗೊಳ್ಳಬೇಕಾದ ಈ ಸಂವಿಧಾನಬದ್ಧ ಸಂಸ್ಥೆಯು, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ನಿರಂಕುಶ ಧೋರಣೆಯಿಂದಾಗಿ ಕೇವಲ ಒಬ್ಬರೇ ಆಡಳಿತ ನಡೆಸುವ ‘ಏಕವ್ಯಕ್ತಿ ಕಮಿಷನ್’ ಆಗಿ ಸಾಮೂಹಿಕ ಸಿಟ್ಟಿಗೆ ಕಾರಣವಾಗಿದೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಶೀಲನೆ (SIR – Special Intensive Revision) ಪ್ರಕ್ರಿಯೆಯಲ್ಲಾಗಿರುವ ಅಕ್ರಮಗಳು ಮತ್ತು ಆಯೋಗದ ಆಂತರಿಕ ಪ್ರಜಾಸತ್ತಾತ್ಮಕ ಚೌಕಟ್ಟನ್ನೇ ಧ್ವಂಸಗೊಳಿಸುತ್ತಿರುವ ಕಾರ್ಯಶೈಲಿಯು ದೇಶದ ಕೋಟ್ಯಂತರ ನಾಗರಿಕರ ಸಂವಿಧಾನಬದ್ಧ ಮತದಾನದ ಹಕ್ಕನ್ನೇ ಕಸಿದುಕೊಳ್ಳುತ್ತಿವೆ.
ಆಯೋಗದ ಸರ್ವಾನುಮತದ ನಿಯಮದ ಗಂಭೀರ ಉಲ್ಲಂಘನೆ
ಸಂವಿಧಾನದ ವಿಧಿ 324 ಮತ್ತು 2023ರ ಕಾಯ್ದೆಯ ನಿಯಮಗಳ ಪ್ರಕಾರ, ಆಯೋಗದ ಪ್ರತಿ ಪ್ರಮುಖ ತೀರ್ಮಾನವೂ ಸರ್ವಾನುಮತ ಅಥವಾ ಬಹುಮತದ ಆಧಾರದಲ್ಲಿಯೇ ಆಗಬೇಕು. ಆದರೆ, ಇತ್ತೀಚೆಗೆ ಹೊರಬಂದಿರುವ ತನಿಖಾ ವರದಿಗಳ ಪ್ರಕಾರ, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳುಗಳಲ್ಲಿ ಕನಿಷ್ಠ 14 ಬಾರಿಗೆ ಹೆಚ್ಚು ಆಯೋಗದ ನಿಯಮಾವಳಿ ಉಲ್ಲಂಘನೆ ಹಾಗೂ ಏಕಪಕ್ಷೀಯ ನಿರ್ಧಾರಗಳ ವಿರುದ್ಧ ಲಿಖಿತವಾಗಿ ತೀವ್ರ ಆಕ್ಷೇಪಣೆ (ಭಿನ್ನಮತದ ಟಿಪ್ಪಣಿಗಳು) ದಾಖಲಿಸಿದ್ದಾರೆ. ಇವುಗಳಲ್ಲಿ ಮುಖ್ಯವಾದವು ಕೆಳಗಿವೆ:
ಫಾರ್ಮ್ 6ರಲ್ಲಿ ಅನಧಿಕೃತ ತಿದ್ದುಪಡಿ: ಹೊಸ ಮತದಾರರ ಸೇರ್ಪಡೆಗಾಗಿ ಇರುವ ಫಾರ್ಮ್ 6ರಲ್ಲಿ ‘ಹಿಂದಿನ SIRನಲ್ಲಿ ನಿಮ್ಮ ಅಥವಾ ನಿಮ್ಮ ಪೋಷಕರ/ತಾತನ ಹೆಸರು ಇತ್ತೇ?’ ಎಂಬ ನಿಯಮಬಾಹಿರ ಪ್ರಶ್ನೆಯನ್ನು ಸೇರಿಸಲಾಗಿತ್ತು. ಇದನ್ನು ಆಯುಕ್ತ ಸಂಧು ಮತ್ತು ಜೋಶಿ ಅವರು ‘ಅಕ್ರಮ, ಅಧಿಕಾರ ಬಾಹಿರ ಮತ್ತು ನಿಯಮಕ್ಕೆ ವಿರುದ್ಧ’ ಎಂದು ಸ್ಪಷ್ಟವಾಗಿ ಆಕ್ಷೇಪಿಸಿದ್ದರೂ, ಈ ಆಕ್ಷೇಪಣೆಗಳನ್ನು ಸಂಪೂರ್ಣ ನೆಲಸಮಗೊಳಿಸಿ ಅದನ್ನು ಜಾರಿಗೆ ತರಲಾಗಿತ್ತು.
ಡೇಟಾ ಕೇಂದ್ರೀಕರಣ (ECINet): ಕಾನೂನುಬದ್ಧವಾಗಿ ಮತದಾರರ ಪಟ್ಟಿ ಸಿದ್ಧಪಡಿಸುವ ಸಂಪೂರ್ಣ ಅಧಿಕಾರ ಹೊಂದಿರುವ ಸ್ಥಳೀಯ ಚುನಾವಣಾ ನೋಂದಣಾಧಿಕಾರಿಗಳ (ERO) ಲಾಗಿನ್ ಅಧಿಕಾರಗಳನ್ನು ಕಿತ್ತುಕೊಂಡು, ದೆಹಲಿಯ ಕೇಂದ್ರೀಯ ಐಟಿ ನಿರ್ದೇಶನಾಲಯದ ಹಂತದಲ್ಲಿ ಡೇಟಾ ಕೇಂದ್ರೀಕರಣ ಮಾಡಿದ್ದಕ್ಕೆ ಇಬ್ಬರೂ ಆಯುಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಏನಾಗುತ್ತದೆ ಎಂದರೆ, ಸ್ಥಳೀಯ ಅಧಿಕಾರಿಗಳಿಗೆ ನೇರ ಪರಿಚಯ ಇರುವ ಮತದಾರರಿಗೂ ಸಣ್ಣಪುಟ್ಟ ತಪ್ಪುಗಳಿಗಾಗಿ ನೋಟೀಸು ಹೋಗುತ್ತದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಿನ್ನೆಲೆ
ಜ್ಞಾನೇಶ್ ಕುಮಾರ್ (1988ರ ಕೇರಳ ಕೇಡರ್ ಐಎಎಸ್ ಅಧಿಕಾರಿ) ಅವರ ನೇಮಕಾತಿ ಮತ್ತು ಹಿನ್ನೆಲೆಯು ಅವರು ಆಡಳಿತಾರೂಢ ವ್ಯವಸ್ಥೆಗೆ ಅತ್ಯಂತ ಆಪ್ತರು ಎಂಬ ತೀವ್ರ ವಿಮರ್ಶೆಗೆ ಗುರಿಯಾಗಿದೆ. ಅವರ ಆಡಳಿತಾತ್ಮಕ ಹಿನ್ನೆಲೆಯನ್ನು ಗಮನಿಸಿದರೆ ಈ ಅನುಮಾನಗಳಿಗೆ ಬಲವಾದ ಕಾರಣಗಳು ಸಿಗುತ್ತವೆ:
370ನೇ ವಿಧಿ ರದ್ದು ಮತ್ತು ರಾಮಮಂದಿರ ಟ್ರಸ್ಟ್: ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯಾಗಿದ್ದಾಗ ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದತಿಯ ಅಧಿಸೂಚನೆಯ ಕರಡು ಹಾಗೂ ‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ರಚನೆಯ ಪ್ರಮುಖ ಕಾರ್ಯಾಚರಣೆಯ ಹೊಣೆಗಾರಿಕೆಯನ್ನು ವಹಿಸಿದ್ದರು. ನಂತರ ಕೇಂದ್ರ ಸಹಕಾರ ಸಚಿವಾಲಯದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರನ್ನೇ ಹೊರಗಿಟ್ಟು ನೇಮಕ: ಸುಪ್ರೀಂ ಕೋರ್ಟ್ನ ಐತಿಹಾಸಿಕ ತೀರ್ಪನ್ನು ಬದಿಗೊತ್ತಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು (CJI) ಆಯ್ಕೆ ಸಮಿತಿಯಿಂದ ಹೊರಗಿಟ್ಟು ಜಾರಿಗೆ ತಂದ ‘2023ರ ಕಾಯ್ದೆ’ಯಡಿ ನೇಮಕಗೊಂಡ ಮೊದಲ ಸಿಇಸಿ ಈ ಜ್ಞಾನೇಶ್ ಕುಮಾರ್.
’ಸೆಕ್ಷನ್ 16′ ಮತ್ತು ಸಂಶಯಾಸ್ಪದ ಕಾನೂನು ರಕ್ಷಣೆ (ಇಮ್ಯೂನಿಟಿ)
ಸಿಇಸಿ ಜ್ಞಾನೇಶ್ ಕುಮಾರ್ ಮತ್ತು ಆಯುಕ್ತರಿಗೆ ಆಡಳಿತಾರೂಢ ವ್ಯವಸ್ಥೆಯು 2023ರ ಚುನಾವಣಾ ಆಯುಕ್ತರ ಕಾಯ್ದೆಯ ‘ಸೆಕ್ಷನ್ 16’ರ ಮೂಲಕ ನೀಡಿರುವ ಅಭೂತಪೂರ್ವ ಕಾನೂನು ರಕ್ಷಣೆ ಪ್ರಜಾಪ್ರಭುತ್ವಕ್ಕೆ ಒದಗಿರುವ ಅತಿ ದೊಡ್ಡ ಗಂಡಾಂತರವಾಗಿದೆ. ಅವುಗಳು ಏನೆಂಬುದನ್ನು ಈಗ ನೋಡೋಣ:
ಜೀವಮಾನದ ಕ್ರಿಮಿನಲ್ ವಿನಾಯಿತಿ: ತಮ್ಮ ಅಧಿಕಾರಾವಧಿಯಲ್ಲಿ ಅಥವಾ ಕರ್ತವ್ಯದ ನೆಪದಲ್ಲಿ ಆಯುಕ್ತರು ಕೈಗೊಳ್ಳುವ ಯಾವುದೇ ನಿರ್ಧಾರ, ಮಾಡಿದ ಅಕ್ರಮ ಅಥವಾ ಹೇಳಿಕೆಗಳ ವಿರುದ್ಧ ಯಾವುದೇ ದೇಶದ ಸಿವಿಲ್ ಅಥವಾ ಕ್ರಿಮಿನಲ್ ನ್ಯಾಯಾಲಯಗಳು ವಿಚಾರಣೆ ನಡೆಸುವಂತಿಲ್ಲ ಎಂದು ಈ ಸೆಕ್ಷನ್ ಹೇಳುತ್ತದೆ.
ಸಂವಿಧಾನಬಾಹಿರ ಕವಚ: ದೇಶದ ರಾಷ್ಟ್ರಪತಿ, ರಾಜ್ಯಪಾಲರು ಮುಂತಾದವರಿಗೆ ಮಾತ್ರವೇ ಇರುವಂತ ಸಂಪೂರ್ಣ, ನಿರಂಕುಶ, ಜೀವಮಾನದ ವಿನಾಯಿತಿಯನ್ನು ಚುನಾವಣಾ ಆಯುಕ್ತರಿಗೆ ವಿಶೇಷವಾಗಿ ನೀಡುವ ಮೂಲಕ, “ಚುನಾವಣಾ ಆಯೋಗಕ್ಕೆ ಕಾನೂನಿನ ಭಯವೇ ಇಲ್ಲದೆ ಚುನಾವಣೆಗಳನ್ನು ಏರುಪೇರು ಮಾಡಲು ಅನುವು ಮಾಡಿಕೊಡಲಾಗಿದೆ” ಎಂಬ ಗಂಭೀರ ಆರೋಪದ ಮೇಲೆ ಇದನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದೆ. ಇಲ್ಲಿರುವ ಮೂಲ ಪ್ರಶ್ನೆ ಎಂದರೆ, ನಿಷ್ಪಕ್ಷಪಾತ ಚುನಾವಣೆ ನಡೆಸಬೇಕಾದ ಚುನಾವಣಾ ಆಯುಕ್ತರಿಗೆ ಪೂರ್ವಭಾವಿಯಾಗಿ ಇಂತಾ ರಕ್ಷಣೆ ಏಕೆ ಬೇಕು ಎಂಬುದು! ಕಾನೂನುಬಾಹಿರ ಅಕ್ರಮಗಳನ್ನು ಎಸಗಲೆಂದೇ ಈ ರಕ್ಷಣೆ ನೀಡಲಾಗಿದೆ ಎಂಬ ವಿರೋಧಿಗಳ ಸಂಶಯಕ್ಕೆ ಈಗ ಆಧಾರಗಳು ಸ್ಪಷ್ಟವಾಗುತ್ತಿವೆ.
ಪ್ರತಿಪಕ್ಷಗಳ ತೀವ್ರ ವಾಗ್ದಾಳಿ ಮತ್ತು ಆಕ್ರೋಶ
ಆಯೋಗದ ಒಳಗಿನ ಆಂತರಿಕ ಕಾದಾಟ ಮತ್ತು 14ಕ್ಕೂ ಹೆಚ್ಚು ಭಿನ್ನಾಭಿಪ್ರಾಯದ ಟಿಪ್ಪಣಿಗಳು ಬಹಿರಂಗವಾಗುತ್ತಿದ್ದಂತೆಯೇ ವಿರೋಧ ಪಕ್ಷಗಳು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆ ಹಾಗೂ ಮಹಾಭಿಯೋಗಕ್ಕೆ (Impeachment) ತಕ್ಷಣವೇ ಪಟ್ಟು ಹಿಡಿದಿವೆ.
”ಮತ ಕಳವು (ವೋಟ್ ಚೋರಿ) ಎಂಬುದು ಭಾರತದ ಜನರ ವಿರುದ್ಧ ಎಸಗಿದ ಗಂಭೀರ ಅಪರಾಧ ಮತ್ತು ಸಂವಿಧಾನದ ಮೇಲಿನ ನೇರ ದಾಳಿ. ಆಯೋಗದ ಆಂತರಿಕ ಭಿನ್ನಾಭಿಪ್ರಾಯವೇ ಈ ಅಕ್ರಮಗಳನ್ನು ಸಾಬೀತುಪಡಿಸಿದ್ದು, ಇವರ ಕಾರ್ಯ ದೇಶದ್ರೋಹಕ್ಕೆ ಸಮನಾಗಿದೆ ” ಎಂದು ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
“ಜ್ಞಾನೇಶ್ ಕುಮಾರ್ ಚುನಾವಣಾ ಆಯೋಗವನ್ನು ತಮ್ಮ ಸ್ವಂತ ಆಸ್ತಿಯಂತೆ ಏಕಪಕ್ಷೀಯವಾಗಿ ನಡೆಸುತ್ತಿದ್ದಾರೆ. ಇದು ಇಡೀ ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆಯನ್ನು ಆಡಳಿತ ಪಕ್ಷದ ಪರವಾಗಿ ಹೈಜಾಕ್ ಮಾಡುವ ತಂತ್ರ” ಎಂದು ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
“ಅಕ್ರಮ ಮತದಾರರ ಪಟ್ಟಿಯ ಆಧಾರದ ಮೇಲೆ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗಿದೆ. ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಬಂಧಿಸಬೇಕು ಮತ್ತು ಪ್ರಕ್ರಿಯೆಗಳ ಮರುಪರಿಶೀಲನೆ ನಡೆಸಬೇಕು” ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ಸಮಾಜವಾದಿ ಪಾರ್ಟಿ, ಶಿವಸೇನೆ (UBT) ಹಾಗೂ ಇತರ ನಾಯಕರು- ಇಬ್ಬರು ಆಯುಕ್ತರ ಲಿಖಿತ ದಾಖಲೆಗಳೇ ಸಾಕ್ಷಿಯಾಗಿರುವುದರಿಂದ, ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತಕ್ಷಣವೇ ತನಿಖೆ ನಡೆದು, ಜ್ಞಾನೇಶ್ ಕುಮಾರ್ ಅವರ ಮೇಲೆ ಕ್ರಮವಾಗಬೇಕು ಎಂದು ಆಗ್ರಹಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆ ಮತ್ತು ಮತದಾನ ವಂಚಿತರ ಭಾರಿ ಪ್ರಮಾಣ
ವಿಶೇಷ ತೀವ್ರ ಪರಿಶೀಲನೆ (ಎಸ್ಐಆರ್) ಹೆಸರಿನಲ್ಲಿ ದೇಶಾದ್ಯಂತ ನಡೆಸಲಾದ ಪ್ರಕ್ರಿಯೆಯಲ್ಲಿ ಬರೋಬ್ಬರಿ 13 ಕೋಟಿಗೂ ಹೆಚ್ಚು ನೈಜ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕಿತ್ತೆಸೆಯಲಾಗಿದೆ! ಶೋಷಿತ ಸಮುದಾಯಗಳನ್ನೇ ಗುರಿಯಾಗಿಸಿ ಕುತಂತ್ರ ನಡೆಸಲಾಗಿರುವುದು ಕಣ್ಣಿಗೆ ರಾಚುವಂತೆ ಎದ್ದು ಕಾಣುತ್ತಿದೆ. ಏಕೆಂದರೆ, ಪಟ್ಟಿಯಿಂದ ರದ್ದುಗೊಳಿಸಲಾದವರಲ್ಲಿ ಶೇಕಡಾ 70ಕ್ಕಿಂತಲೂ ಹೆಚ್ಚು ಜನರು ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳು.
ಇದಕ್ಕೆ ಕೆಲವು ವಾಸ್ತವಿಕ ಉದಾಹರಣೆಗಳು: ಮಹಾರಾಷ್ಟ್ರ ಮತ್ತು ಬಿಹಾರ ಒಂದರಲ್ಲೇ ಗರಿಷ್ಠ ಪ್ರಮಾಣದ ಹೆಸರುಗಳನ್ನು ರದ್ದುಗೊಳಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಮತದಾರರ ಹೆಸರುಗಳನ್ನು ರದ್ದುಗೊಳಿಸಲಾಗಿದ್ದು, ನ್ಯಾಯಾಂಗ ಅಧಿಕಾರಿಗಳು ಮತ್ತೆ ಸೇರಿಸಿದ್ದ ನೈಜ ಮತದಾರರ ವಿರುದ್ಧವೇ 16 ಲಕ್ಷಕ್ಕೂ ಹೆಚ್ಚು ಅಪೀಲುಗಳನ್ನು ಸಲ್ಲಿಕೆ ಮಾಡಿ ಹೆಸರುಗಳನ್ನು ಶಾಶ್ವತವಾಗಿ ಕಿತ್ತುಹಾಕಲು ಆಯೋಗದ ತಳಮಟ್ಟದ ಅಧಿಕಾರಿಗಳು ಯತ್ನಿಸಿದ್ದಾರೆ. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ‘ನಕಲಿ ವಿಳಾಸ’ ಹಾಗೂ ತಾಂತ್ರಿಕ ನೆಪವೊಡ್ಡಿ ಸಾವಿರಾರು ದಲಿತ ಮತ್ತು ಶೋಷಿತ ಜನಾಂಗಗಳ ಮತಗಳನ್ನು ಪಟ್ಟಿಯಿಂದ ಹೊರಹಾಕಿದ ಆಘಾತಕಾರಿ ಪ್ರಕರಣಗಳು ಸಾಬೀತಾಗಿವೆ. ಇಂತವು ನೂರಾರು ಸಂಖ್ಯೆಯಲ್ಲಿ ಇವೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುವ, ಕೆಳಹಂತದ ಸರಕಾರಿ ನೌಕರರೇ ಆದ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಓ) ಮತದಾರರ ಕಿತ್ತುಹಾಕುವಿಕೆಗೆ ಸಂಬಂಧಿಸಿದಂತೆ ಎದುರಿಸಿದ, ಎದುರಿಸುತ್ತಿರುವ ಸವಾಲುಗಳು ಮತ್ತು ಅವರ ಮೇಲೆ ಹೇರಲಾಗಿರುವ ಆಡಳಿತಾರೂಢ ಪಕ್ಷಗಳ ಪರ ರಾಜಕೀಯ ಒತ್ತಡವನ್ನೂ ಇಲ್ಲಿ ಗಮನಿಸಬೇಕು.
ಎಸ್ಐಆರ್ ಪ್ರಕಾರ ನೋಟೀಸು ಪಡೆದಿರುವ ಕೆಲವು ಖ್ಯಾತನಾಮರ ಹೆಸರುಗಳನ್ನೇ ಒಮ್ಮೆ ನೋಡಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಭಾರತೀಯ ಭೂಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ, ಸಿಬಿಐ ನಿರ್ದೇಶಕ ಪ್ರವೀಣ್ ಸೂದ್, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮದನ್ ಬಿ. ಲೋಕೂರ್, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಹಾಗೂ ಮಾಜಿ ಉಪಪ್ರಧಾನಿ ಎಲ್. ಕೆ. ಅಡ್ವಾಣಿ…. ಇಂತವೇ ಸಾವಿರಾರು ಹೆಸರುಗಳಿವೆ ಎಂದರೆ, ಇಡೀ ವ್ಯವಸ್ಥೆಯೇ ಎಷ್ಟೊಂದು ಕೊಳಕಾಗಿ ನಾರುತ್ತಿದೆ!?
ಖ್ಯಾತನಾಮರನ್ನು ಮುಖಭಂಗಕ್ಕೆ ಒಳಗಾದ ಆಯೋಗವು ತಕ್ಷಣವೇ ಸೇರಿಸಿಕೊಳ್ಳಬಹುದು. ಆದರೆ, ಕೋಟ್ಯಂತರ ಜನಸಾಮಾನ್ಯರ ಪಾಡೇನು? ಏಕೆಂದರೆ , ಅನ್ಯಾಯವಾಗಿ ಹೆಸರು ಕಳೆದುಕೊಂಡ ಮತದಾರರು ಆಯೋಗ ಮತ್ತು ಟ್ರಿಬ್ಯೂನಲ್ಗಳಿಗೆ ಸಲ್ಲಿಸುವ ಮೇಲ್ಮನವಿಗಳ ವಿಚಾರಣೆ ಮುಗಿಯಲು 10ರಿಂದ 15 ವರ್ಷಗಳು ಬೇಕಾಗುತ್ತವೆ! ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯಲ್ಲಿ ಮತ ಹಾಕಲು ಒಬ್ಬ ಬಡ ನಾಗರಿಕ ದಶಕಗಳ ಕಾಲ ಕೋರ್ಟ್ ಅಲೆಯಬೇಕೆಂದರೆ ಆ ಸಂವಿಧಾನಬದ್ಧ ಹಕ್ಕಿಗೆ ಅರ್ಥವಾದರೂ ಎಲ್ಲಿದೆ?
ಮತದಾರರನ್ನು ಅನರ್ಹಗೊಳಿಸಿ ನಡೆಸಿದ ಚುನಾವಣೆಗಳ ಸಿಂಧುತ್ವವೇನು?
ಸಮಾಜದ ಬಹುದೊಡ್ಡ ಭಾಗವನ್ನು, ಅದರಲ್ಲೂ ವಿಶೇಷವಾಗಿ ವಿರೋಧ ಪಕ್ಷಗಳನ್ನು ಬೆಂಬಲಿಸುವ ಶೋಷಿತ, ಆದಿವಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯದ ನೈಜ ಮತದಾರರನ್ನು ಯೋಜಿತವಾಗಿ ಅನರ್ಹಗೊಳಿಸಿ, ಪಟ್ಟಿಯಿಂದ ಹೊರಗಿಟ್ಟು ನಡೆಸಲಾಗಿರುವ ನಡೆಸುವ ಚುನಾವಣೆಗಳನ್ನು “ಮುಕ್ತ ಮತ್ತು ನ್ಯಾಯಸಮ್ಮತ” ಎಂದು ಕರೆಯಲು ಸಾಧ್ಯವೇ? ಕೋಟ್ಯಂತರ ಜನರನ್ನು ಮತದಾನ ಪ್ರಕ್ರಿಯೆಯಿಂದಲೇ ಹೊರಗಿಟ್ಟು ಪಡೆಯುವ ಯಾವುದೇ ‘ಜನಾದೇಶ’ಕ್ಕೆ ಸಾಂವಿಧಾನಿಕವಾಗಿರಲಿ ಅಥವಾ ನೈತಿಕವಾಗಿರಲಿ ಯಾವುದೇ ಸಿಂಧುತ್ವ ಇರುವುದಿಲ್ಲ. ‘ಸೆಕ್ಷನ್ 16’ ಎಂಬ ಅಸಾಂವಿಧಾನಿಕ ಕವಚದ ಹಿಂದೆ ಅಡಗಿ, ಸಂವಿಧಾನದ ಆಶಯಗಳನ್ನೇ ಬುಡಮೇಲು ಮಾಡುತ್ತಿರುವ ವ್ಯವಸ್ಥೆಯ ವಿರುದ್ಧ ಸುಪ್ರೀಂ ಕೋರ್ಟ್ ತಕ್ಷಣವೇ ಮಧ್ಯಪ್ರವೇಶಿಸಿ, ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸ್ವತಂತ್ರ ತನಿಖಾ ಸಮಿತಿ ರಚಿಸಿ, ಮತದಾರರ ಪಟ್ಟಿಯ ಆಡಿಟ್ ನಡೆಸಬೇಕು. ಅದಕ್ಕೂ ಮೊದಲು ಅಸಾಂವಿಧಾನಿಕತೆಯ ಆಧಾರದಲ್ಲಿ ಸೆಕ್ಷನ್ 16ನ್ನೇ ರದ್ದುಗೊಳಿಸಬೇಕು. ಇಲ್ಲವಾದರೆ, ಭಾರತದ ಪ್ರಜಾಪ್ರಭುತ್ವವು ವ್ಯವಸ್ಥಿತ ಸಂಚಿನ ಸರ್ವಾಧಿಕಾರದ ಕತ್ತಲಲ್ಲಿ ಸಂಪೂರ್ಣವಾಗಿ ನಾಶವಾಗಲಿದೆ.
