ಅಕ್ರಮವಾಗಿ ಮನೆ ಕೆಡವುವುದು ‘ಬ್ರಹ್ಮಹತ್ಯೆ’ಗೆ ಸಮಾನ: ಸಂತ್ರಸ್ತರಿಗೆ 5.5 ಲಕ್ಷ ರೂ. ಮಧ್ಯಂತರ ಪರಿಹಾರ ನೀಡುವಂತೆ ಪಟ್ನಾ ಹೈಕೋರ್ಟ್ ಆದೇಶ

ಪಾಟ್ನಾ: ವ್ಯಕ್ತಿಯೊಬ್ಬರು ವಾಸಿಸುತ್ತಿರುವ ಮನೆಯನ್ನು ಅಕ್ರಮವಾಗಿ ನೆಲಸಮ ಮಾಡುವುದು ‘ಬ್ರಹ್ಮಹತ್ಯೆ’ಯಂತಹ ಮಹಾಪಾಪಕ್ಕೆ ಸಮಾನ ಎಂದು ಕಟುವಾಗಿ ಹೇಳಿರುವ ಪಟ್ನಾ ಹೈಕೋರ್ಟ್, 2017ರಲ್ಲಿ ಅಕ್ರಮವಾಗಿ ಮನೆ ಕಳೆದುಕೊಂಡ ಮೂವರು ಸಂತ್ರಸ್ತರಿಗೆ ಒಟ್ಟು 5.5 ಲಕ್ಷ ರೂಪಾಯಿ ಮಧ್ಯಂತರ ಪರಿಹಾರ ನೀಡುವಂತೆ ಪೂರ್ವ ಚಂಪಾರಣ್ ಜಿಲ್ಲಾಡಳಿತಕ್ಕೆ ಮಹತ್ವದ ನಿರ್ದೇಶನ ನೀಡಿದೆ.

ಅಧಿಕಾರಿಗಳ ಸಮ್ಮುಖದಲ್ಲೇ ಯಾವುದೇ ಅಧಿಕೃತ ಆದೇಶವಿಲ್ಲದೆ ಮನೆ ಮತ್ತು ಕಾಂಪೌಂಡ್ ಗೋಡೆಯನ್ನು ಕೆಡವಲಾಗಿದ್ದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಮೂರ್ತಿ ರಾಜ್ ಕುಮಾರ್ ಅವರಿದ್ದ ಏಕಸದಸ್ಯ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ವ್ಯಕ್ತಿಯೊಬ್ಬರು ಬದುಕುತ್ತಿರುವ ಮನೆಯನ್ನು ನೆಲಸಮಗೊಳಿಸುವುದು ಬ್ರಹ್ಮಹತ್ಯೆಗೆ ಸಮಾನ. ಇಂತಹ ಸಂದರ್ಭದಲ್ಲಿ ಆರ್ಥಿಕ ಪರಿಹಾರವು ಕೇವಲ ಮನೆಯ ಪುನರ್ನಿರ್ಮಾಣಕ್ಕೆ ಅಥವಾ ಸಂತ್ರಸ್ತರು ಹೊಸ ಆರಂಭ ಪಡೆಯಲು ಮಾತ್ರ ನೆರವಾಗಬಹುದೇ ಹೊರತು, ಆ ಕುಟುಂಬ ಅನುಭವಿಸಿದ ತೀವ್ರ ಆಘಾತ ಮತ್ತು ನೋವನ್ನು ಎಂದಿಗೂ ತುಂಬಿಕೊಡಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯ ಹೇಳಿದೆ. ಒತ್ತುವರಿ ತೆರವು ಪ್ರಕ್ರಿಯೆ ಬಾಕಿ ಇರುವಾಗಲೇ ಗುಂಪೊಂದು ಬಂದು ಮನೆ ಕೆಡವಿದ ಮಾತ್ರಕ್ಕೆ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸಂತ್ರಸ್ತರು ನೋಂದಾಯಿತ ಕ್ರಯಪತ್ರಗಳ (ರಿಜಿಸ್ಟರ್ಡ್ ಸೇಲ್ ಡೀಡ್) ಮೂಲಕ ಜಮೀನು ಖರೀದಿಸಿ ಮನೆ ನಿರ್ಮಿಸಿಕೊಂಡಿದ್ದರು. 2016-17ರಲ್ಲಿ ಅವರ ವಿರುದ್ಧ ಒತ್ತುವರಿ ತೆರವು ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ ಯಾವುದೇ ಸಕ್ಷಮ ಪ್ರಾಧಿಕಾರದಿಂದ ತೆರವು ಆದೇಶ ಬರುವ ಮೊದಲೇ, ಜೆಸಿಬಿ ಯಂತ್ರಗಳೊಂದಿಗೆ ಬಂದ ಗುಂಪು ಮನೆಗಳನ್ನು ಕೆಡವಿಹಾಕಿತ್ತು. ಸಂತ್ರಸ್ತರಿಗೆ ತಮ್ಮ ವಾದ ಮಂಡಿಸಲು ಅವಕಾಶವನ್ನೂ ನೀಡಿರಲಿಲ್ಲ ಹಾಗೂ ಕಾನೂನುಬದ್ಧ ಪ್ರಕ್ರಿಯೆಯನ್ನು ಪಾಲಿಸಿರಲಿಲ್ಲ. ರಾಜ್ಯ ಸರ್ಕಾರವು ಸ್ಥಳದಲ್ಲಿದ್ದ ಗುಂಪೇ ಮನೆ ಹಾನಿ ಮಾಡಿದೆ ಎಂದು ವಾದಿಸಿದರೂ, ಅಧಿಕಾರಿಗಳು ಮೂಕಪ್ರೇಕ್ಷಕರಾಗಿದ್ದುದನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ಸಂವಿಧಾನದ 21ನೇ ವಿಧಿಯಡಿ ಆಶ್ರಯ ಪಡೆಯುವ ಹಕ್ಕು ನಾಗರಿಕರ ಮೂಲಭೂತ ಹಕ್ಕಾಗಿದೆ ಎಂದು ಒತ್ತಿಹೇಳಿದ ಪೀಠ, ಪ್ರಜೆಯೊಬ್ಬರಿಗೆ ಸಂವಿಧಾನ ನೀಡಿದ ಆಶ್ರಯದ ಹಕ್ಕನ್ನು ಕಸಿದುಕೊಳ್ಳುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಮಾತ್ರವಲ್ಲ, ಆ ಕುಟುಂಬಕ್ಕೆ ನೀಡುವ ಭರಿಸಲಾಗದ ಅನ್ಯಾಯವಾಗಿದೆ ಎಂದಿದೆ. “ಮನೆ ಎಂಬುದು ಕೇವಲ ನಾಲ್ಕು ಗೋಡೆಗಳು ಮತ್ತು ಸಿಮೆಂಟ್ ಗಾರೆಗಳಿಂದ ಕಟ್ಟಿದ ಕಟ್ಟಡವಲ್ಲ; ಅದು ಅದರಲ್ಲಿ ವಾಸಿಸುವ ಕುಟುಂಬದ ಭಾವನಾತ್ಮಕ ಬೆಸುಗೆಯ ಪ್ರತೀಕ. ಮನೆಯನ್ನು ಕೆಡವುವುದು ವ್ಯಕ್ತಿಯ ಅಸ್ಮಿತೆಯ ಬೇರುಗಳ ಮೇಲೆಯೇ ಪ್ರಹಾರ ಮಾಡಿದಂತೆ,” ಎಂದು ನ್ಯಾಯಾಲಯ ಮಾರ್ಮಿಕವಾಗಿ ನುಡಿದಿದೆ.

ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ಬದಲು ಸಂತ್ರಸ್ತರ ಜಮಾಬಂದಿ ರದ್ದುಗೊಳಿಸಲು ಮುಂದಾದ ಅಧಿಕಾರಿಗಳ ನಡವಳಿಕೆಯನ್ನು ನ್ಯಾಯಾಲಯ ಖಂಡಿಸಿದೆ. ತೀರ್ಪಿನ ಪ್ರಕಾರ, ಇಬ್ಬರು ಸಂತ್ರಸ್ತರಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಇನ್ನೊಬ್ಬ ಸಂತ್ರಸ್ತರಿಗೆ 1.5 ಲಕ್ಷ ರೂಪಾಯಿ ಮಧ್ಯಂತರ ಪರಿಹಾರವನ್ನು ಎರಡು ತಿಂಗಳೊಳಗೆ ಪಾವತಿಸಲು ಪೂರ್ವ ಚಂಪಾರಣ್ ಆಯುಕ್ತರಿಗೆ ಆದೇಶಿಸಲಾಗಿದೆ. ಅಲ್ಲದೆ, ಸಂತ್ರಸ್ತರಿಗೆ ಉಂಟಾದ ನಷ್ಟದ ಬಗ್ಗೆ ಸಮಗ್ರ ತನಿಖೆ ನಡೆಸಿ, ಮುಂದಿನ ಮೂರು ತಿಂಗಳೊಳಗೆ ಅಂತಿಮ ಪರಿಹಾರದ ಮೊತ್ತವನ್ನು ನಿರ್ಧರಿಸುವಂತೆ ನ್ಯಾಯಾಲಯ ಸೂಚಿಸಿದೆ.

Related Articles

ಇತ್ತೀಚಿನ ಸುದ್ದಿಗಳು