ಬೊಗಸೆಗೆ ದಕ್ಕಿದ್ದು-94 : ಪ್ರಜಾಪ್ರಭುತ್ವದ ಕುರಿ ಚರ್ಮದಲ್ಲಿ ಅಡಗಿದೆಯೇ ಸರ್ವಾಧಿಕಾರದ ತೋಳ?

“..ಬಂಡವಾಳಶಾಹಿಯೇ ಸಾಧ್ಯವಾದಲ್ಲಿ ನೇರ ಸರ್ವಾಧಿಕಾರ ಮತ್ತು ಬೇರೆ ಕಡೆಗಳಲ್ಲಿ ಪರೋಕ್ಷವಾದ ಪ್ರಜಾಪ್ರಭುತ್ವದ ಸೋಗಿನ ಮೃದು ಸರ್ವಾಧಿಕಾರಗಳನ್ನು ಬೆಳೆಸಿ ಪೋಷಿಸುತ್ತಿದೆ ಎಂಬುದು ಸ್ಪಷ್ಟ, ಇದಕ್ಕೆ ಭಾರತವೂ ಹೊರತಾಗಿಲ್ಲ..” ಚಿಂತಕರಾದ ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಹಲವಾರು ದೇಶಗಳಲ್ಲಿ ಹಲವಾರು ಕಾಲಘಟ್ಟಗಳಲ್ಲಿ ಸರ್ವಾಧಿಕಾರಿ ಆಡಳಿತಗಳು ಜನರನ್ನು ಹಿಂಡಿ ಹಿಪ್ಪೆ ಮಾಡಿರುವುದನ್ನು ನಾವು ನೋಡಿದ್ದೇವೆ. ಆದರೆ, ಆ ಕುರಿತು ಪ್ರಜಾಪ್ರಭುತ್ವದ ವಕ್ತಾರರಂತೆ ವರ್ತಿಸುವ ಬಂಡವಾಳಶಾಹಿ ಸಿರಿವಂತ ರಾಷ್ಟ್ರಗಳು ಕೆಲವು ಕಡೆ ಕುರುಡುಗಣ್ಣು ಬೀರಿದರೆ, ಕೆಲವು ದೇಶಗಳಲ್ಲಿ ಮಿಲಿಟರಿ ಮಧ್ಯ ಪ್ರವೇಶ ಮಾಡಿ ಕೈಗೊಂಬೆ ಸರಕಾರಗಳನ್ನು ಸ್ಥಾಪಿಸಿದೆ. ಇಲ್ಲವೇ, ಅವುಗಳಲ್ಲಿ ಅರಾಜಕತೆಯನ್ನು ಪೋಷಿಸಿವೆ. ಮಾತ್ರವಲ್ಲದೇ ನೇರವಾಗಿ ಸರ್ವಾಧಿಕಾರವನ್ನೇ ಬೆಂಬಲಿಸಿವೆ. ಇದಕ್ಕೆ ಇರುವ ಮಾನದಂಡವೇನು?

ಸೋವಿಯತ್‌ ಒಕ್ಕೂಟವು ಪ್ರಬಲವಾಗಿದ್ದಾಗ ಇದ್ದ ಮಾನದಂಡ ಒಂದೇ! ಅದೆಂದರೆ, ಕಮ್ಯೂನಿಸ್ಟ್‌ ಸರಕಾರಗಳು, ಎಡ ಚಿಂತನೆಯ ಸರಕಾರಗಳು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು. ಇದ್ದಲ್ಲಿ ಅವುಗಳನ್ನು ಉರುಳಿಸಲು ಪ್ರಚೋದನೆ ಮತ್ತು ಬೆಂಬಲ ನೀಡುವುದು. ಸಂಪತ್ತಿನ ನಿಯಂತ್ರಣಕ್ಕಾಗಿ ಮತ್ತು ಸ್ವಹಿತಾಕ್ತಿಯ ರಕ್ಷಣೆಗಾಗಿ ನೇರ ಮಿಲಿಟರಿ ಕಾರ್ಯಾಚರಣೆ ನಡೆಸುವ ಬಂಡವಾಳಶಾಹಿ ತನಗೆ ಲಾಭವಿಲ್ಲದ ಕಡೆಗಳಲ್ಲಿ ಎಂತಹ ದಮನಕಾರಿ ಸರಕಾರಗಳಿದ್ದರೂ ಕಣ್ಣುಮುಚ್ಚಿ ಕುಳಿತಿದೆ. ಯುಎಸ್ಎಯಂತಹಾ ದೇಶ ಮತ್ತು ದೊಡ್ಡಣ್ಣನ ತಮ್ಮಂದಿರಂತೆ ವರ್ತಿಸುವ ನ್ಯಾಟೋ ದೇಶಗಳು ಮಧ್ಯ ಪ್ರವೇಶ ಮಾಡದ ದೇಶಗಳೇ ಬಹುತೇಕ ಇಲ್ಲ ಎನ್ನಬಹುದು.

ಸುಮ್ಮನೇ ಪ್ರಪಂಚದ ಕೆಲವು ದೇಶಗಳನ್ನು ಹೆಸರಿಸಿದರೂ ಸಾಕು ಅಲ್ಲಿ ದೊಡ್ಡಣ್ಣನ ನೇರ ಮಧ್ಯಪ್ರವೇಶ ನಡೆದಿದೆ; ಸರ್ವಾಧಿಕಾರಗಳಿಗೆ ಪ್ರಜಾಪ್ರಭುತ್ವದ ರಕ್ಷಕರೆನ್ನುವ ರಾಷ್ಟ್ರಗಳು ಬೆಂಬಲ ನೀಡಿವೆ. ಉದಾಹರಣೆಗೆ ಮಧ್ಯ ಅಮೇರಿಕಾದ ನಿಕರಾಗುವ, ಹೊಂಡುರಾಸ್, ಪನಾಮಾ, ಗ್ವಾಟೆಮಾಲಾ, ಮೆಕ್ಸಿಕೋ, ಎಲ್ ಸಾಲ್ವದೋರ್, ಲ್ಯಾಟಿನ್ ಅಮೇರಿಕಾದ ಚಿಲಿ, ಅರ್ಜೆಂಟೀನಾ, ಕ್ಯೂಬಾ, ಗ್ರೆನೆಡಾ, ಪೆರು, ಬೊಲಿವಿಯಾ, ವೆನಿಜ್ಯುವೆಲಾ… ಆಫ್ರಿಕಾ ಅಂಗೋಲ, ಕಾಂಗೋ, ನಮೀಬಿಯಾ, ಮೊಜಾಂಬಿಕ್, ಈಜಿಪ್ಟ್‌, ಲಿಬಿಯಾ… ಏಷ್ಯಾದ ವಿಯೆಟ್ನಾಂ, ಕಾಂಬೋಡಿಯ, ಫಿಲಿಪೈನ್ಸ್, ಫಿಜಿ, ಸಿರಿಯಾ, ಯೆಮೆನ್, ಇರಾನ್, ಇರಾಕ್‌, ಅಫ್ಘಾನಿಸ್ತಾನ… ಯುರೋಪಿನ ಯುಗೋಸ್ಲಾವಿಯಾ, ಜೆಕೋಸ್ಲಾವಾಕಿಯಾ…. ಹೀಗೆ ಯಾವುದೇ ದೇಶದ ಮಟ್ಟಿಗೆ ನೋಡಿದರೂ ಈ ಮಾತು ಸತ್ಯ.

ತನಗೆ ಲಾಭವಿಲ್ಲದ ದೇಶಗಳಲ್ಲಿ ನಡೆದ ರಕ್ತಪಾತಗಳಿಗೆ ಕುರುಡು ಕಿವುಡಾಗಿರುವುದಕ್ಕೆ ಉದಾಹರಣೆಯಾಗಿ ಉಗಾಂಡದ ಇದಿ ಅಮೀನನಂತಹ ನರರಾಕ್ಷಸನನ್ನು ಸಹಿಸಿಕೊಂಡು ಕುಳಿತದ್ದನ್ನು ನೆನಪಿಸಬಹುದು. ನಂತರದ ಉದಾಹರಣೆ ಬೇಕೆಂದರೆ ರುವಾಂಡದ ಹುಟು-ತುತ್ಸಿ ಬುಡಕಟ್ಟುಗಳ ಸಂಘರ್ಷದಲ್ಲಿ ಯುಎಸ್ಎ ಮತ್ತು ನ್ಯಾಟೋ ದೇಶಗಳ ಪಾತ್ರವನ್ನು ನೋಡಬಹುದು. ಹಿಂದೆ ಅಲ್ಲಿ ಅಲ್ಪಸಂಖ್ಯಾತ ತುತ್ಸಿಗಳ ಆಡಳಿತವಿತ್ತು. ನಂತರ ಹಲವಾರು ವರ್ಷಗಳ ಸಂಘರ್ಷದ ಬಳಿಕ ಬಹುಸಂಖ್ಯಾತ ಹುಟುಗಳ ಕೈಮೇಲಾಯಿತು. ವಿಶ್ವಸಂಸ್ಥೆ ಒಂದು ಶಾಂತಿಪಾಲನಾ ಪಡೆ ಕಳಿಸಿತು. ಬಡದೇಶವಾದ ರುವಾಂಡದಲ್ಲಿ ಏನೇ ನಡೆದರೂ ಶ್ರೀಮಂತ ರಾಷ್ಟ್ರಗಳಿಗೆ ದೊಡ್ಡ ಆಸಕ್ತಿ ಇರಲಿಲ್ಲ. ತೊಂಬತ್ತರ ದಶಕದ ಮಧ್ಯ ಭಾಗದಲ್ಲಿ (1994) ಹುಟುಗಳು ಯೋಜಿತ ರೀತಿಯಲ್ಲಿ ತುತ್ಸಿಗಳ ಹತ್ಯಾಕಾಂಡ ನಡೆಸಿದರು. ಸುಮಾರು 100 ದಿನಗಳಲ್ಲಿ ಹೆಂಗಸರು ಮಕ್ಕಳೆನ್ನದೆ ಸುಮಾರು ಎಂಟು ಲಕ್ಷದಷ್ಟು ತುತ್ಸಿಗಳನ್ನು ಕೊಚ್ಚಿ ಕೊಲ್ಲಲಾಯಿತು. ಈ ಹತ್ಯಾಕಾಂಡದ ಸುಳಿವು ಇದ್ದರೂ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಾಗಲಿ, ಜಾಗತಿಕ ದೊಡ್ಡಣ್ಣಂದಿರಾಗಲಿ ಸೂಕ್ತ ಕ್ರಮ ಕೈಗೊಳ್ಳದೆ ಮೂಕಪ್ರೇಕ್ಷಕರಂತೆ ಕುಳಿತರು ಎಂಬ ಆರೋಪಗಳಿವೆ… ಯಾವ ಪ್ರಜಾಪ್ರಭುತ್ವದ ಆತ್ಮಸಾಕ್ಷಿಯೂ ಕಲಕಲಿಲ್ಲ! ನಾಝಿಗಳ ಬಳಿಕ ಇಷ್ಟು ದೊಡ್ಡ ಹತ್ಯಾಕಾಂಡ ಬೇರೆ ನಡೆದಿರಲಿಲ್ಲ! ಈ ಘಟನೆ ಹೆಚ್ಚಿನ ಪ್ರಚಾರಕ್ಕೂ ಬರಲಿಲ್ಲ. ನಾವು ಭಾರತದಲ್ಲಿ ಓದಿದ್ದು ನಾಲ್ಕಾರು ಪ್ಯಾರಾಗಳ ಸುದ್ದಿಗಳನ್ನು ಮಾತ್ರ. ‘ಹೊಟೇಲ್ ರುವಾಂಡ’ ಎಂಬ ಚಿತ್ರದಲ್ಲಿ ಇದರ ಒಂದು ಕ್ರೂರ ಚಿತ್ರಣ ಸಿಗುತ್ತದೆ. ಅದರಂತೆ ವಜ್ರಗಳಿಗಾಗಿ ಸಿಯರಾ ಲಿಯೋನ್‌ನಲ್ಲಿ ನಡೆಯುತ್ತಿರುವ ಕ್ರೌರ್ಯವನ್ನು ಲಿಯೊನಾರ್ಡೊ ಡಿ ಕ್ಯಾಪ್ರಿಯೋ ನಟಿಸಿರುವ ‘ಬ್ಲಡ್ ಡೈಮಂಡ್’ ಚಿತ್ರದಲ್ಲಿ ನೋಡಬಹುದು.

ಅದರೆ, ತಮಗೆ ಲಾಭ ಇರುವ ಕಡೆ ಬಂಡವಾಳಶಾಹಿಗಳು ಹೇಗೆ ಮಧ್ಯಪ್ರವೇಶ ಮಾಡುತ್ತಾರೆ ಎಂಬುದನ್ನು ತೈಲಸಂಪನ್ನ ರಾಷ್ಟ್ರಗಳಲ್ಲಿ ನೋಡಬಹುದು. ದಶಕಗಳ ಹಿಂದೆ ಇರಾನಿನ ಲೋಲುಪ ಸರ್ವಾಧಿಕಾರಿ ಶಾನನ್ನು ಪಾಶ್ಚಾತ್ಯರು ತೈಲಕ್ಕಾಗಿ ಬೆಂಬಲಿಸಿದ್ದರು. ಆಗ ಪ್ರಜಾಪ್ರಭುತ್ವ ಅವರಿಗೆ ಮುಖ್ಯವೆನಿಸಲಿಲ್ಲ. ನಂತರ ಅಯಾತೊಲ್ಲಾ ಖೊಮೇನಿ ನೇತೃತ್ವದಲ್ಲಿ ಇಸ್ಲಾಮಿಕ್ ಕ್ರಾಂತಿ ನಡೆದಾಗ ಮಾತ್ರ ಅದು ನೆನಪಿಗೆ ಬಂತು. ಇದು ಮುಂದೆ ಇರಾಕ್, ಲಿಬಿಯಾ, ಈಜಿಪ್ಟ್‌, ಯೆಮೆನ್, ಆಫಘಾನಿಸ್ತಾನ ಮುಂತಾದ ದೇಶಗಳಲ್ಲಿ ಮರುಕಳಿಸಿತು. ಇರಾನ್- ಇರಾಕ್ ಯುದ್ಧದಲ್ಲಿ ಯುಎಸ್‌ಎಯ ಪಾತ್ರವೇನು ಎಂಬುದು ಎಲ್ಲರಿಗೂ ಗೊತ್ತು. ಕಾರಣ ಅಥವಾ ನೆಪ ಪ್ರಜಾಪ್ರಭುತ್ವವೂ ಅಲ್ಲ ಸರ್ವಾಧಿಕಾರವೂ ಅಲ್ಲ. ಬದಲಾಗಿ ತೈಲ ಸಂಪತ್ತು. ಈಗಿನ ಯುಎಸ್ಎ, ಇರಾನ್, ಇಸ್ರೇಲ್ ಮತ್ತು ಇತರ ಕೊಲ್ಲಿ ರಾಷ್ಟ್ರಗಳನ್ನು ಒಳಗೊಂಡಿರುವ ಇತ್ತೀಚಿನ, ವಿಶ್ವಕ್ಕೆ ಆತಂಕಕಾರಿಯಾದ ಯುದ್ಧ ಮತ್ತು ಬಿಕ್ಕಟ್ಟನ್ನು ಇದೇ ನಿಟ್ಟಿನಲ್ಲಿ ನೋಡಬಹುದು. ಪ್ರಸ್ತುತ ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಸರಣಿ ದಾಳಿಗಳು, ಲಕ್ಷಾಂತರ ನಾಗರಿಕರ ಸಾವು ಮತ್ತು ಅದಕ್ಕೆ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳು ನೀಡುತ್ತಿರುವ ಸಶಸ್ತ್ರ ಬೆಂಬಲವು – ಬಂಡವಾಳಶಾಹಿ ದೇಶಗಳ ಮಾನವ ಹಕ್ಕುಗಳ ಕುರಿತ ಇಬ್ಬಗೆ ನಿಲುವನ್ನು ಎತ್ತಿ ತೋರಿಸುತ್ತದೆ. ಸೂಕ್ಷ್ಮವಾಗಿ ನೋಡಿದರೆ, ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವುದೂ, ಪಾಶ್ಚಿಮಾತ್ಯ ರಾಷ್ಟ್ರಗಳ ಹಿನ್ನೆಲೆಯ ಬೆಂಬಲ ಮತ್ತು ಯುರೋಪ್‌ನ ಅನಿಲ/ತೈಲ ಮಾರುಕಟ್ಟೆಯ ಮೇಲಿನ ನಿಯಂತ್ರಣಕ್ಕಾಗಿ ನಡೆಯುತ್ತಿರುವ ಪರೋಕ್ಷ ಯುದ್ಧವೇ ಆಗಿದೆ.

ಈ ರೀತಿಯಾಗಿ ದೊಡ್ಡಣ್ಣನ ಮೂಗು ತೂರಿಸುವ ಕೆಲಸವೇ ಜಾಗತಿಕ ಭಯೋತ್ಪಾದನೆಗೆ ಮೂಲ ಕಾರಣ ಎಂದು ಎಲ್ಲರಿಗೂ ಗೊತ್ತು. ಈಗ ಶ್ರೀಮಂತ ದೇಶವಾಗಿರುವ ಸೌದಿ ಅರೇಬಿಯಾದಲ್ಲಿ ತೈಲ ಪತ್ತೆಯಾಗುವ ತನಕ ಅದು ಬಡ ರಾಷ್ಟ್ರವೇ ಆಗಿತ್ತು. ಯುಎಇ ಕತೆಯೂ ಅಷ್ಟೇ. ಆಗ ಲಾಭಕ್ಕಾಗಿ ತನ್ನ ತಂತ್ರಜ್ಞಾನದ ಬಲ ಉಪಯೋಗಿಸಿದ ಯುಎಸ್ಎ ಅಲ್ಲಿ ಬಹುರಾಷ್ಟ್ರೀಯ ಕಂಪೆನಿ ‘ಅರ್ಮಾಕೋ’ವನ್ನು ಸ್ಥಾಪಿಸಿತು. ಇಂತಹಾ ವ್ಯಾಪಾರಿ ಹಿತಾಸಕ್ತಿಗಳೇ ಪ್ರಜಾಪ್ರಭುತ್ವ ಇರಲಿ, ಸರ್ವಾಧಿಕಾರ ಇರಲಿ, ರಾಜಸತ್ತೆಯೇ ಇರಲಿ ಎಲ್ಲಾ ಪ್ರಭುತ್ವಗಳನ್ನು ಬಂಡವಾಳಶಾಹಿಯೇ ನಿಯಂತ್ರಿಸುತ್ತಾ ಬಂದಿದೆ. ಇದೇ ಸ್ವಯಂಘೋಷಿತ ಪ್ರಜಾಪ್ರಭುತ್ವದ ಕಾವಲುನಾಯಿಗಳು ಕೊಲ್ಲಿ ರಾಷ್ಟ್ರಗಳಲ್ಲಿ ರಾಜಸತ್ತೆಗಳನ್ನು ಬೆಂಬಲಿಸುತ್ತಾ ಬಂದಿಲ್ಲವೇ? ಇಂತಹ ಸಂಘರ್ಷಗಳ ಕಾರಣದಿಂದಲೇ ಸೌದಿ ಸಂಜಾತ ಒಸಾಮಾ ಬಿನ್ ಲಾದೆನ್‌ನಂತಹ ಮತಾಂಧ ಸರ್ವಾಧಿಕಾರಿ ಭಯೋತ್ಪಾದಕನ ಹುಟ್ಟಿಗೆ ಕಾರಣವಾಯಿತು ಎಂಬುದು ಸತ್ಯವಲ್ಲವೇ?

ಲಿಬಿಯಾದ ಸರ್ವಾಧಿಕಾರಿ ಮುಹಮ್ಮದ್ ಗದ್ದಾಫಿ, ಇರಾಕಿನ ಸರ್ವಾಧಿಕಾರಿ ಸದ್ದಾಂ ಹುಸೇನ್ ಇವರನ್ನು ಅಷ್ಟೇ ಏಕೆ, ವೆನೆಜುವೆಲಾದಂತಹ ತೈಲ ಸಂಪನ್ನ ರಾಷ್ಟ್ರವನ್ನೇ ಕೊಂದವರು ಯಾರು? ಪ್ತಾಲೆಸ್ತೀನ್ ಸಮಸ್ಯೆಗಳಿಗೆ ಕಾರಣರು ಯಾರು? ಇಸ್ರೇಲಿನಂತಹ ದೇಶಗಳನ್ನು ಬೆಂಬಲಿಸುತ್ತಾ ಬಂದಿರುವವರು ಯಾರು? ಇಸ್ರೇಲಿನಂತೆಯೇ ಕಾಶ್ಮೀರದ ಸಮಸ್ಯೆಯನ್ನು ಸೃಷ್ಟಿಸಿದವರು ಯಾರು? ತಾವೇ ಭಯೋತ್ಪಾದಕ ಎಂದು ಕರೆದ ಪ್ಯಾಲೆಸ್ತೀನ್ ಲಿಬರೇಷನ್ ಆರ್ಗನೈಸೇಶನ್ ನಾಯಕ ಯಾಸರ್ ಅರಾಫತ್ ಅವರಿಗೆ ಮತ್ತು ಇಸ್ರೇಲ್ ವಿದೇಶ ಮಂತ್ರಿಯಾಗಿದ್ದ ಇಸಾಕ್ ರಬಿನ್ ಅವರಿಗೆ ನೋಬೆಲ್ ಪ್ರಶಸ್ತಿ ಕೊಟ್ಟವರು ಯಾರು? ಯಾಕಾಗಿ ಕೊಟ್ಟರು? ಇಂತಾ ಸಾವಿರಾರು ಪ್ರಶ್ನೆಗಳು ನಮ್ಮಂತ ಜನಸಾಮಾನ್ಯರಲ್ಲಿ ಹುಟ್ಟುತ್ತವೆ.

ಕರಿಯರ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಅಧಿಕಾರ ಸ್ಥಾಪಿಸಿದ ಬಿಳಿಯ ಡಚ್ಚರ ವಿರುದ್ದ ಬಿಳಿಯ ಬ್ರಿಟಿಷರೇ ಯುದ್ಧ ನಡೆಸಿದ್ದೇಕೆ? ಆಂಗ್ಲೋ- ಬೋಯೆರ್ ವಾರ್ ಎಂದು ಕುಖ್ಯಾತವಾದ ಯುದ್ಧ ಏಕೆ ನಡೆಯಿತು? ಅಲ್ಲಿಯ ಮೂಲ ನಿವಾಸಿಗಳನ್ನೇ ಏಕೆ ಗುಲಾಮರನ್ನಾಗಿ, ಎರಡನೇ ದರ್ಜೆ ಪ್ರಜೆಗಳಾಗಿ ವರ್ಣಭೇದ ನೀತಿಯನ್ನು ಅನುಸರಿಸುತ್ತಿದ್ದವರನ್ನು ಬೆಂಬಲಿಸುತ್ತಾ, ಸಹಿಸುತ್ತಾ ಪೋಷಿಸುತ್ತಾ ಬಂದವರ್ಯಾರು? ನೆಲ್ಸನ್ ಮಂಡೇಲಾರನ್ನು ಅಷ್ಟು ವರ್ಷ ಜೈಲಿಗೆ ತಳ್ಳಿದವರ್ಯಾರು? ಅದೇ ರೀತಿ, ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾರ ಜೊತೆಗೆ ವರ್ಣಭೇದ ಸರ್ಕಾರದ ಕೊನೆಯ ಅಧ್ಯಕ್ಷ ಎಫ್.ಡಬ್ಲ್ಯೂ. ಡಿ ಕ್ಲರ್ಕ್ ಅವರಿಗೆ ಜಂಟಿಯಾಗಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು. ಇತ್ತೀಚೆಗೆ ನೊಬೆಲ್ ಪ್ರಶಸ್ತಿಯ ವಿಶ್ವಾಸಾರ್ಹತೆಯೇ ತೃತೀಯ ರಾಷ್ಟ್ರಗಳಲ್ಲಿ ಪ್ರಶ್ನಾರ್ಹವಾಗುತ್ತಿದೆ- ತನಗೇ ಪ್ರಶಸ್ತಿ ನೀಡಬೇಕೆಂದ ಡೊನಾಲ್ಡ್ ಟ್ರಂಪ್‌ನ ನಾಚಿಕೆಗೇಡು ಹಪಾಹಪಿಯಲ್ಲಿ! ಬಂಡವಾಳಶಾಹಿಯೇ ಸಾಧ್ಯವಾದಲ್ಲಿ ನೇರ ಸರ್ವಾಧಿಕಾರ ಮತ್ತು ಬೇರೆ ಕಡೆಗಳಲ್ಲಿ ಪರೋಕ್ಷವಾದ ಪ್ರಜಾಪ್ರಭುತ್ವದ ಸೋಗಿನ ಮೃದು ಸರ್ವಾಧಿಕಾರಗಳನ್ನು ಬೆಳೆಸಿ ಪೋಷಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಇಂದಿನ ‘ಸೈಲೆಂಟ್ ಸರ್ವಾಧಿಕಾರ’ ಕೇವಲ ಶಸ್ತ್ರಾಸ್ತ್ರಗಳಿಂದ ಬರುತ್ತಿಲ್ಲ; ಅದು ಬಂಡವಾಳಶಾಹಿ ಬಿಗ್-ಟೆಕ್ ಕಂಪನಿಗಳ ಅಲ್ಗೋರಿಥಂಗಳು, ಎಐ ಕಣ್ಗಾವಲು, ಡೇಟಾ ಮೈನಿಂಗ್ ಮೂಲಕ ಪ್ರಜೆಗಳ ಡಿಜಿಟಲ್ ಚಲನವಲನಗಳನ್ನು ನಿಯಂತ್ರಿಸುವ ಹಂತಕ್ಕೆ ತಲುಪಿದೆ.

ಸರ್ವಾಧಿಕಾರಗಳು ಎಲ್ಲಾ ರೀತಿಯ ನಾಟಕಗಳನ್ನು ನಡೆಸಿಕೊಂಡು ಬೇರೆಬೇರೆ ಸ್ಥಳಗಳಲ್ಲಿ, ಬೇರೆಬೇರೆ ಕಾಲಘಟ್ಟಗಳಲ್ಲಿ ತಮ್ಮನ್ನು ತಾವು ಪ್ರತಿಷ್ಟಾಪಿಸಿವೆ. ಎಲ್ಲವುಗಳ ಹಿಂದೆ ಇರುವ ಪರೋಕ್ಷ ಶಕ್ತಿಗಳು ಯಾವುವು ಎಂಬುದನ್ನು ನಾವು ಗಮನಿಸಬೇಕು. ಇಷ್ಟೆಲ್ಲಾ ಒಂದು ಪೀಠಿಕೆ ಮಾತ್ರ. ಪ್ರಜಾಪ್ರಭುತ್ವದ ವೇಷದಲ್ಲೂ ಸರ್ವಾಧಿಕಾರ ಬರಬಹುದು. ಹಿಟ್ಲರ್ ಕೂಡಾ ಚುನಾವಣೆಯಲ್ಲಿ ಆಯ್ಕೆಯಾಗಿ ಬಂದವನೆಂಬುದು ನಮಗೆ ನೆನಪಿರಲಿ. ಎಲ್ಲಾ ಸರ್ವಾಧಿಕಾರಿಗಳು ಜಾತಿ, ಧರ್ಮ, ಜನಾಂಗೀಯ ದ್ವೇಷವನ್ನು ಪ್ರಚೋದಿಸಿ, ಬೆಳೆಸಿ, ಬೆಳೆದರೆಂಬುದನ್ನು ನಾವು ಗಮನಿಸಬೇಕು. ನಮ್ಮಲ್ಲಿ, ನಮ್ಮ ಭಾರತದಲ್ಲಿ ಅಂತದ್ದು ನಡೆಯುತ್ತಿದೆಯೇ? ಏನಾದರೂ ಸಾಮ್ಯವಿದೆಯೇ? ನಾವೇನಾದರೂ ಎಚ್ಚರಿಕೆ ವಹಿಸಬೇಕೆ? ವ್ಯವಸ್ಥಿತ ಸಂಚಿಗೆ ವ್ಯವಸ್ಥಿತ ಪ್ರತಿಹೋರಾಟ ಅಗತ್ಯವಿದೆಯೇ?

ಅಡಾಲ್ಫ್ ಹಿಟ್ಲರ್‌ನ ನಾಝಿ ಜರ್ಮನಿಯ ಭಯಾನಕ ಸರ್ವಾಧಿಕಾರವು ಎಲ್ಲಾ ಸರ್ವಾಧಿಕಾರದ ವ್ಯಕ್ತಿಗತ ಮತ್ತು ಸಾಂಸ್ಥಿಕ ಆಕಾಂಕ್ಷಿಗಳಿಗೆ ಪಠ್ಯಪುಸ್ತಕದಂತಿದೆ. ಅದೇ ಪಠ್ಯಪುಸ್ತಕದ ಕೆಲವು ಹಾಳೆಗಳನ್ನು ಹರಿದು ನಮ್ಮದೇ ದೇಶದಲ್ಲಿ ಅನುಷ್ಟಾಗೊಳಿಸುವ ಪ್ರಯತ್ನಗಳು ಆಗುತ್ತಿವೆಯೆ ಎಂಬುದು ಚಿಂತೆಯ ವಿಷಯ. ಏಕೆಂದರೆ, ಜರ್ಮನಿಯ ಸರ್ವಾಧಿಕಾರವು ಏಕಾಏಕಿಯಾಗಿ ಬೆಳೆದುಬರಲಿಲ್ಲ. ಅದು ಮೊದಲನೇ ಮಹಾಯುದ್ಧದ ಬಳಿಕ ಜರ್ಮನಿಯು ಎದುರಿಸುತ್ತಿದ್ದ ಐತಿಹಾಸಿಕ, ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಮತ್ತು ಆಗಿದ್ದ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಚಾಣಾಕ್ಷತನದಿಂದ ಬಳಸಿಕೊಂಡು ಬೆಳೆಯಿತು. ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಅದರ ಆಕ್ಟೋಪಸ್ ಬಾಹುಗಳು ನೆರೆಯ ದೇಶಗಳನ್ನು ಆಕ್ರಮಿಸಿದ್ದು, ಮಾತ್ರವಲ್ಲ; ಎರಡನೇ ಮಹಾಯುದ್ಧಕ್ಕೆ ಕಾರಣವಾಯಿತು.

ಲಕ್ಷಾಂತರ ಜನರು ಸಾವಿಗೀಡಾದ ಮಾನವೀಯ ದುರಂತದಲ್ಲಿ ಸತ್ತವರ, ಚಿತ್ರಹಿಂಸೆಗೆ ಗುರಿಯಾದವರ, ಅತ್ಯಾಚಾರಕ್ಕೆ ಒಳಗಾದವರ ನಿಖರ ಲೆಕ್ಕ ಇಟ್ಟವರೇ ಇಲ್ಲ. ವ್ಯವಸ್ಥಿತವಾದ ರೀತಿಯಲ್ಲಿ ಕಮ್ಯುನಿಸ್ಟರು, ಬುದ್ಧಿಜೀವಿಗಳು, ಯಹೂದಿಗಳು, ಪೋಲೆಂಡ್ ಸೇರಿದಂತೆ ವಿದೇಶಿ ಮೂಲದವರು, ಶತಮಾನಗಳಿಂದ ಇಡೀ ಯುರೋಪಿನಲ್ಲಿ ಗಡಿಯ ಹಂಗಿಲ್ಲದೇ, ಆಸ್ತಿಪಾಸ್ತಿಗಳ ಕಲ್ಪನೆಯೇ ಇಲ್ಲದೆ ತಿರುಗಾಡಿ ಬದುಕುತ್ತಿದ್ದ ಅಲೆಮಾರಿ ಜಿಪ್ಸಿಗಳು, ಸೇರಿದಂತೆ ಲಕ್ಷಾಂತರ ಜನರನ್ನು ಯಾತನಾಶಿಬಿರಗಳಿಗೆ ತಳ್ಳಿ, ಅನ್ನಾಹಾರ ನೀಡದೆ, ಪಶುಗಳಂತೆ ದುಡಿಸಿ, ದುರ್ಬಲರನ್ನು ಗುಂಡಿಕ್ಕಿ, ವಿಷಾನಿಲದ ಮೂಲಕ ಕೊಂದು ಸಾಮೂಹಿಕವಾಗಿ ಹೂಳಲಾಯಿತು. ಅಷ್ಟೇ ಏಕೆ? ಜರ್ಮನ್ ಅಂಗವಿಕಲರನ್ನು ನಿಷ್ಪ್ರಯೋಜಕರೆಂದು ಕೊಲ್ಲಲಾಯಿತು. ನಾಝಿಗಳ ಆಣತಿ ಮೀರಿದ ನಿಜವಾದ ದೇಶಪ್ರೇಮಿ ಸೈನಿಕರನ್ನೂ ಬಿಡಲಿಲ್ಲ. ಕೊಲ್ಲುವ ಕೆಲಸ ಸುಲಭವಾಗಲೆಂದು ವಿಷಾನಿಲ ಚೇಂಬರ್‌ಗಳನ್ನು ಬಳಸಲಾಯಿತು.

ಇದು ಎಷ್ಟು ವ್ಯವಸ್ಥಿತವಾಗಿ ನಡೆಯಿತೆಂದರೆ, ವಿರೋಧಿಗಳ ಹತ್ಯಾಕಾಂಡದಲ್ಲಿಯೂ ಆರ್ಥಿಕತೆ ಇತ್ತು. ಮುಖ್ಯವಾಗಿ ಯಹೂದಿಗಳ ಮನೆ, ಉದ್ಯಮ, ಆಸ್ತಿಪಾಸ್ತಿ, ಹಣ, ಒಡವೆ ಮಾತ್ರವಲ್ಲ; ನಂತರ ಉಟ್ಟ ಬಟ್ಟೆಯನ್ನೂ ಕಸಿದುಕೊಳ್ಳಲಾಯಿತು. ಅವರಿಂದ ಯುದ್ಧದ ಸಿದ್ಧತೆಗಾಗಿ ಗುಲಾಮಿ ದುಡಿತವನ್ನೂ ಮಾಡಿಸಲಾಯಿತು. ಗಂಡಸರು ಮತ್ತು ಹೆಂಗಸರ ತಲೆಬೋಳಿಸಿ ಕೂದಲನ್ನು ಸೈನಿಕರಿಗೆ ಸ್ವೆಟರ್ ತಯಾರಿಸಲು ಬಳಸಲಾಯಿತು. ಕೊನೆಗೆ ಎಲುಬುಗಳನ್ನೂ ಬಿಡದೆ ಕ್ಯಾಲ್ಸಿಯಂಗಾಗಿ ಬಳಸಲಾಯಿತು. ನಾಝಿ ಕ್ರೌರ್ಯವನ್ನು ಬಣ್ಣಿಸುವುದು ಈ ಬರಹದ ಉದ್ದೇಶವಲ್ಲ.

ಆರಂಭದಲ್ಲಿ ನಾಝಿ ಸರ್ವಾಧಿಕಾರವು ಪ್ರಜಾಪ್ರಭುತ್ವದ ಸೋಗಿನಲ್ಲೇ ಬಂತು. ಮೊದಲ ಮಹಾಯುದ್ಧದ ಸೋಲಿನಿಂದ ಅದರ ರಾಷ್ಟ್ರೀಯ ಸ್ವಾಭಿಮಾನಕ್ಕೆ ಬಲವಾದ ಹೊಡೆತಬಿದ್ದಿತ್ತು. ಆರ್ಥಿಕತೆ ಕುಸಿದಿತ್ತು. ಯುವಜನರು ನಿರುದ್ಯೋಗದಿಂದ ಕಂಗಾಲಾಗಿದ್ದರು. ಆ ಹೊತ್ತಿಗೆ ಯಹೂದಿಗಳು ವ್ಯಾಪಾರ, ಲೇವಾದೇವಿ, ಬ್ಯಾಂಕಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಕೊಂಡು ಸಾಕಷ್ಟು ಉತ್ತಮ ಸ್ಥಿತಿಯಲ್ಲಿದ್ದರು. ಯುದ್ಧದ ಅವಮಾನ, ಯುವಜನರ ಕೋಪ ಇತ್ಯಾದಿಗಳನ್ನೆಲ್ಲಾ ನಾಝಿಗಳು ಜರ್ಮನ್ ಶ್ರೇಷ್ಠತೆಯ ಭ್ರಮೆಯಲ್ಲಿ ಯಹೂದಿಗಳ ವಿರುದ್ಧ ತಿರುಗಿಸಿದರು. ಶತಮಾನಗಳ ಹಿಂದೆಯೇ ಬಂದು ನೆಲಸಿದ್ದ ಅವರನ್ನು ವಿದೇಶೀಯರು ಎಂಬಂತೆ, ಜರ್ಮನಿಯ ಎಲ್ಲಾ ಸಮಸ್ಯೆಗಳಿಗೆ ಅವರೇ ಕಾರಣಕರ್ತರು ಎಂಬಂತೆ ಬಿಂಬಿಸಿದರು. ಅವರಿದನ್ನು ಒಮ್ಮೆಗೇ ಬಹಿರಂಗವಾಗಿ ಮಾಡಲಿಲ್ಲ.

ನಾಝಿಗಳ ಕಾರ್ಯತಂತ್ರಗಳು ಏನಾಗಿದ್ದವು? ಎಲ್ಲರ ಜೊತೆ ಎಲ್ಲರ ಅಭಿವೃದ್ಧಿ- ಅಂದರೆ, ಜರ್ಮನಿಯ ಅಭಿವೃದ್ಧಿ ಎಂಬ ಘೋಷಣೆ ಅಂದೂ ಇತ್ತು. ನಾಜಿಗಳ ಅಪಪ್ರಚಾರ ತಂತ್ರಜ್ಞ ಜೋಸೆಫ್ ಗೋಬೆಲ್ಸ್ (Joseph Goebbels) 1927ರಲ್ಲಿ ಬರೆದ “Nazi-Sozi” ಕರಪತ್ರದಲ್ಲಿದ್ದ “10 Commandments for National Socialists” ಪ್ರಚಾರ ಸಿದ್ಧಾಂತದಲ್ಲಿ- ಜರ್ಮನಿಯು ನಿಮ್ಮ ಪಿತೃಭೂಮಿ. ಅದನ್ನು ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರೀತಿಸಿ. ಜರ್ಮನಿಯ ವಿರೋಧಿಗಳು ನಿಮ್ಮ ವಿರೋಧಿಗಳು . ಅವರನ್ನು ಮನಸಾರೆ ದ್ವೇಷಿಸಿ. (ಇಲ್ಲಿಯೂ ಸರಕಾರವನ್ನು ವಿರೋಧಿಸಿದವರಿಗೆ ದೇಶದ್ರೋಹಿಯ ಹಣೆಪಟ್ಟಿ ಕಟ್ಟಲಾಗುತ್ತಿರುವುದನ್ನು ಗಮನಿಸಿದ್ದೀರಲ್ಲ?). ಜರ್ಮನಿಯ ವಿರೋಧಿಗಳ ಕಪಾಳಕ್ಕೆ ಹೊಡೆಯಿರಿ. ಯಹೂದಿಗಳ ಮೇಲಿನ ದ್ವೇಷವನ್ನು ಎದುರಿಗೆ ತೋರಿಸಿಕೊಳ್ಳುವ ಮೂರ್ಖತನ ಮಾಡಬೇಡಿ. (ಇಲ್ಲಿಯೂ ಕೆಲವೊಮ್ಮೆ ಅಲ್ಪಸಂಖ್ಯಾತ ಮತ್ತು ದಲಿತ ಪ್ರೇಮ ಉಕ್ಕುತ್ತಿರುವುದನ್ನು ನೋಡುವಿರಿ). ಮಾತಿಗಿಂತ ಹೆಚ್ಚು ಕೆಲಸ ಮಾಡಿ; ಕರ್ತವ್ಯಗಳ ಬಗ್ಗೆ ಮಾತಾಡಿ, ಹಕ್ಕುಗಳ ಬಗ್ಗೆ ಅಲ್ಲ; ನಾಯಕತ್ವವನ್ನು ಪ್ರಶ್ನಿಸಬೇಡಿ… ಇತ್ಯಾದಿ ನಿರ್ದೇಶನಗಳನ್ನು ನೀಡಲಾಗಿದೆ. ಇಲ್ಲಿ ಜರ್ಮನಿ ತೆಗೆದು ಭಾರತ ಎಂದು ಬರೆದರೆ ಸಾಮ್ಯಗಳನ್ನು ನೀವು ಸುತ್ತಮುತ್ತಲೇ ನೋಡುತ್ತೀರಿ.

ಆದರೆ, ದೇಶದೊಳಗೆ ಜರ್ಮನಿಯ ವಿರೋಧಿಗಳು ಯಾರೆಂದು ಆರಂಭದಲ್ಲಿ ನೇರವಾಗಿ ವಿವರಿಸಲಾಗುತ್ತಿರಲಿಲ್ಲ. ಪರೋಕ್ಷವಾಗಿ ಅವರು ಯಹೂದಿಗಳು, ಬುದ್ಧಿಜೀವಿಗಳು, ಕಮ್ಯುನಿಸ್ಟರು, ಜಿಪ್ಸಿಗಳು ಎಂದು ಸೂಚಿಸಲಾಗುತ್ತಿತ್ತು. ಜೊತೆಗೆಯೇ ನಾಝಿ ಯೂತ್ ಲೀಗ್ ಗೂಂಡಾಗಳು ಚದರಿದಂತೆ ಅಲ್ಲಲ್ಲಿ ಅವರ ಮೇಲೆ ದಾಳಿಗಳನ್ನು ಚಾಲ್ತಿಯಲ್ಲಿಡುತ್ತಿದ್ದರು. ಯಹೂದಿ ಮತ್ತು ಕೆಲವು ಕ್ರೈಸ್ತ ಪಂಥಗಳ ಪೂಜಾಸ್ಥಳಗಳ ಮೇಲೆ ದಾಳಿ ನಡೆಸುತ್ತಿದ್ದರು. ಇನ್ನೊಂದು ವಿಧಾನವೆಂದರೆ, ಅವರ ಜೊತೆ ವ್ಯಾಪಾರ ವಹಿವಾಟು ನಡೆಸಬೇಡಿ ಎಂದು ಪ್ರಚೋದಿಸುವುದು ಹಾಗೂ ಅವರು ದೇಶಕ್ಕೆ ಪರಕೀಯರು ಎಂಬಂತೆ ಬಿಂಬಿಸುತ್ತಾ ಬರುವುದು.

ನಮ್ಮಲ್ಲಿ ಕೂಡಾ ಇಂತಹ ದಾಳಿಗಳು ನಡೆಯುತ್ತಿರುವುದು, ನಿರ್ದಿಷ್ಟ ಸಮುದಾಯಗಳ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ, ಅವರ ರಿಕ್ಷಾಗಳಲ್ಲಿ ಕುಳಿತುಕೊಳ್ಳಬೇಡಿ ಮುಂತಾಗಿ ಪ್ರಚೋದಿಸುವ ಯತ್ನಗಳು ನಡೆಯುತ್ತಿರುವುದನ್ನು ಕಾಣಬಹುದು. ನೂರಾರು ವರ್ಷಗಳಿಂದ ಇಲ್ಲಿ ಬಾಳಿ-ಬದುಕಿ ಭಾರತೀಯ ಸಂಸ್ಕೃತಿಯಲ್ಲಿ ಮಿಳಿತವಾಗಿರುವ ಸಮುದಾಯಗಳಲ್ಲಿ ಕೂಡ ಪರಕೀಯ ಪ್ರಜ್ಞೆ ಮೂಡಿಸುವ ಕೆಲಸಗಳೂ ನಿರಂತರವಾಗಿ ನಡೆಯುತ್ತಿವೆ.

ಜರ್ಮನ್ ರಾಷ್ಟ್ರೀಯತೆ ಮತ್ತು ಆರ್ಯ ಜನಾಂಗದ ಶ್ರೇಷ್ಟತೆಯು ನಾಝಿ ಮೂಲಮಂತ್ರಗಳಲ್ಲಿ ಒಂದು. ನಮ್ಮಲ್ಲಿ ಕೂಳಿಲ್ಲದಿದ್ದರೂ ಪರವಾಗಿಲ್ಲ; ಜಗತ್ತಿಗೆ ಎಲ್ಲವನ್ನೂ ನೀಡಿದವರು ನಾವೇ ಎಂಬ ಮೇಲರಿಮೆಯ ಭ್ರಮೆ ಹುಟ್ಟಿಸುವುದು ಇದರ ಮೂಲ ಲಕ್ಷಣ. ಪರಸ್ಪರ ಕೊಡುಕೊಳ್ಳುವಿಕೆಯೇ ಐತಿಹಾಸಿಕ ಪ್ರಗತಿಯ ಜೀವಾಳ ಎಂಬುದನ್ನು ಮರೆಸಿ, ಅದನ್ನು ಕಂಡುಹಿಡಿದವರು ನಾವು, ಇದನ್ನು ಕಂಡುಹಿಡಿದವರು ನಾವು, ಜಗತ್ತಿಗೆ ಎಲ್ಲವನ್ನು ನೀಡಿದವರು ನಮ್ಮ ಪೂರ್ವಜರು, ನಾವು ವಿಶ್ವಗುರುಗಳು ಎಂಬ ಕಟ್ಟುಕತೆಗಳನ್ನು ಇತ್ತೀಚೆಗೆ ಯದ್ವಾತದ್ವಾ ಹಾಸ್ಯಾಸ್ಪದವಾಗಿ ಹರಿಯಬಿಡಲಾಗುತ್ತಿದೆ. ಭಾರತವು ಜಗತ್ತಿಗೆ ಬಹಳಷ್ಟನ್ನು ನೀಡಿದೆ ಎಂಬುದು ನಿಜ. ಅದಕ್ಕಿಂತ ಹೆಚ್ಚನ್ನು ಪಡಕೊಂಡಿದೆ ಎಂಬುದೂ ನಿಜ.

ಮತ್ತೆ ಜನಾಂಗೀಯ ಶ್ರೇಷ್ಟತೆಯ ಮಟ್ಟಿಗೆ ಹೇಳುವುದಾದರೆ “ಭಾರತೀಯತೆ” ಎಂಬುದು ಒಂದೇ ಜನಾಂಗವಲ್ಲ. ಭಾರತದ ಬಹುತೇಕ ನಿವಾಸಿಗಳು ಸಾವಿರಾರು ವರ್ಷಗಳಾಚೆಗೆ ಜಗತ್ತಿನ ಬೇರೆಬೇರೆ ಕಡೆಗಳಿಂದ ಬಂದು ನೆಲೆಸಿದವರು. ವಿಜ್ಞಾನವು ಡಿಎನ್ಎ ಪರೀಕ್ಷೆಗಳ ಮೂಲಕ ಆಧುನಿಕ ಭಾರತೀಯರಲ್ಲಿ ಹಲವಾರು ರೀತಿಯ ಮೂಲ ಮುಖ ಮತ್ತು ದೇಹ ಲಕ್ಷಣಗಳನ್ನು ಗುರುತಿಸಿದೆ.

ಈ ಜನಾಂಗಗಳು ಮೂಲತಃ ಈಗಿನ ಮಧ್ಯ ಮತ್ತು ಪೂರ್ವ ಯುರೋಪ್, ಪಶ್ಚಿಮ ಏಷ್ಯಾ, ಟಿಬೆಟ್, ದಕ್ಷಿಣದಲ್ಲಿ ಇಂಡೋನೇಷ್ಯಾ, ಬಾಲಿ, ಸುಮಾತ್ರ ದ್ವೀಪ ಸಮುದಾಯಗಳಿಂದ ಬಂದಿವೆ. ಅದಕ್ಕಿಂತಲೂ ಪೂರ್ವದಲ್ಲಿ ಉತ್ತರ ಆಫ್ರಿಕಾದಿಂದ ಆದಿಮಾನವ ಸಮುದಾಯ ಲಕ್ಷ ವರ್ಷಗಳ ಹಿಂದೆಯೇ ಬೇರೆ ಬೇರೆ ಕವಲುಗಳಾಗಿ ಜಗತ್ತಿನಾದ್ಯಂತ ಪಸರಿಸಿರುವುದನ್ನು ವಿಜ್ಞಾನ ವಿವಾದೀತವಾಗಿ ಗುರುತಿಸಿದೆ. ವರ್ಣಾಶ್ರಮ ವ್ಯವಸ್ಥೆಯ ಬಳಿಕ ಅಂತರ್ಜಾತೀಯ ಸಂಬಂಧಗಳನ್ನು ನಿಷೇಧಿಸಲಾದರೂ, ಅದಕ್ಕಿಂತ ಮೊದಲೂ, ನಂತರವೂ ಅಂತರ್ಸಂಬಂಧಗಳು ನಡೆದಿವೆ- ನೈತಿಕ, ಅನೈತಿಕ ಎಂಬ ಜಿಜ್ಞಾಸೆ ನಮಗೆ ಬಿಟ್ಟದ್ದು. ಸಾವಿರಾರು ವರ್ಷಗಳ ಯುದ್ಧಗಳ ವೇಳೆ ಹೆಣ್ಣುಗಳನ್ನು ಲೈಂಗಿಕ ಸರಕುಗಳನ್ನಾಗಿ ಬಳಸಿದುದು, ಅತ್ಯಾಚಾರಗಳು ಮುಂತಾದವುಗಳ ಪರಿಣಾಮವಾಗಿ, ಗರ್ಭನಿರೋಧಕಗಳು ಇಲ್ಲದ ಕಾಲದಲ್ಲಿ ಉಂಟಾದ ವರ್ಣ ಸಂಕರಗಳ ಬಳಿಕ ಯಾವ ರಕ್ತ ಎಲ್ಲಿ ಬೆರೆತಿದೆ ಎಂದು ಗುರುತಿಸುವುದೇ ಕಷ್ಟ.

ಹೀಗಿರುವಾಗ, ಹಳೆಯ ವರ್ಣಾಶ್ರಮ, ಜಾತಿ ಪದ್ಧತಿಯ ಆಧಾರದಲ್ಲಿ ಜನಾಂಗೀಯ ಶುದ್ಧತೆ ಮತ್ತು ಶ್ರೇಷ್ಟತೆಯನ್ನು ಪ್ರತಿಪಾದಿಸುವ ಮತ್ತು ಅನೇಕಾನೇಕ ಸೂಕ್ಷ್ಮ ವಿಧಾನಗಳ ಮೂಲಕ ಜಾತಿವ್ಯವಸ್ಥೆಯ ಮೇಲುಕೀಳನ್ನು ಉಳಿಸಿಕೊಂಡು ಧರ್ಮದ ಹೆಸರಿನಲ್ಲಿ ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನಗಳನ್ನು ಏನೆಂದು ಕರೆಯಬಹುದು? ಹಿಟ್ಲರನ ಸರ್ವಾಧಿಕಾರಿ ಮಾದರಿ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ಕಲಿಯಬಹುದಾದ ಪಾಠಗಳ ಬಗ್ಗೆ ಮುಂದೆ ವಿವರವಾಗಿ ನೋಡೋಣ.

Related Articles

ಇತ್ತೀಚಿನ ಸುದ್ದಿಗಳು