ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR): ನೋಟಿಸ್ ಪಡೆದವರ ಮನೆ ಬಾಗಿಲಲ್ಲೇ ದಾಖಲೆ ಸಂಗ್ರಹಿಸಲು ಚುನಾವಣಾ ಆಯೋಗ ಆದೇಶ; ಆನ್‌ಲೈನ್ ವಿಚಾರಣೆಗೆ ಆದ್ಯತೆ

ದೆಹಲಿ: ಪ್ರಸ್ತುತ ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರಿಗೆ ಅನನುಕೂಲವಾಗದಂತೆ ಕೇಂದ್ರ ಚುನಾವಣಾ ಆಯೋಗವು ಮಹತ್ವದ ವಿನಾಯಿತಿಗಳನ್ನು ಪ್ರಕಟಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನವದೆಹಲಿಯ ನಿರ್ವಾಚನ ಸದನದಲ್ಲಿ ನಡೆದ ಆಯೋಗದ ಪೂರ್ಣ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ವಿಳಾಸ/ಮ್ಯಾಪಿಂಗ್ ಕೊರತೆ ಅಥವಾ ತಾರ್ಕಿಕ ವ್ಯತ್ಯಾಸಗಳ ಕಾರಣದಿಂದಾಗಿ ನೋಟಿಸ್ ಪಡೆದ ಮತದಾರರು ವಿಚಾರಣೆಗಾಗಿ ಇಆರ್‌ಒ (ಚುನಾವಣಾ ನೋಂದಣಿ ಅಧಿಕಾರಿ) ಅಥವಾ ಎಇಆರ್‌ಒ ಕಚೇರಿಗಳಿಗೆ ಖುದ್ದು ಅಲೆಯುವ ಅಗತ್ಯವಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ. ಬದಲಿಗೆ, ಬೂತ್ ಮಟ್ಟದ ಅಧಿಕಾರಿಗಳೇ (BLOs) ಅಂತಹ ವ್ಯಕ್ತಿಗಳ ಮನೆಗಳಿಗೆ ತೆರಳಿ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ‘ಇಸಿಐನೆಟ್’ (ECINet) ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ.

ಕೇವಲ ಅನಿವಾರ್ಯ ಅಥವಾ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇಆರ್‌ಒ ನಿರ್ಧಾರದಂತೆ ವಿಚಾರಣೆ ನಡೆಯಲಿದ್ದು, ಅದನ್ನು ಆದಷ್ಟು ಆನ್‌ಲೈನ್ ಮೂಲಕವೇ ಕೈಗೊಳ್ಳಲು ಮತ್ತು ಮತದಾರರ ಪರವಾಗಿ ಕುಟುಂಬದ ವಯಸ್ಕ ಸದಸ್ಯರು ಹಾಜರಾಗಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಇದರೊಂದಿಗೆ, ಸಮಾಜದ ಹಿಂದುಳಿದ ವರ್ಗಗಳಾದ ರಾತ್ರಿ ಆಶ್ರಯ ತಾಣಗಳಲ್ಲಿ (ನೈಟ್ ಶೆಲ್ಟರ್) ನೆಲೆಸಿರುವವರು, ಕಾರ್ಮಿಕರು, ಬಡವರು ಹಾಗೂ ನಿರಾಶ್ರಿತ ಮತದಾರರ ನೋಂದಣಿಗಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಅಗತ್ಯಕ್ಕೆ ತಕ್ಕಂತೆ ಹೆಲ್ಪ್ ಡೆಸ್ಕ್ ಮತ್ತು ವಿಶೇಷ ಶಿಬಿರಗಳನ್ನು ಆಯೋಜಿಸುವಂತೆ ನಿರ್ದೇಶಿಸಲಾಗಿದೆ. ಮತ್ತೊಂದೆಡೆ, ರಾಜ್ಯ ಸಿಇಒಗಳ ಮನವಿ ಮೇರೆಗೆ ಹಕ್ಕು ಮಂಡನೆ ಮತ್ತು ಆಕ್ಷೇಪಣೆ ಸಲ್ಲಿಸುವ ಕೊನೆಯ ದಿನಾಂಕವನ್ನು ದೆಹಲಿಯಲ್ಲಿ ಅಕ್ಟೋಬರ್ 30ರವರೆಗೆ (ವಿಲೇವಾರಿ ನವೆಂಬರ್ 30) ಹಾಗೂ ಮಹಾರಾಷ್ಟ್ರದಲ್ಲಿ ಅಕ್ಟೋಬರ್ 12ರವರೆಗೆ (ವಿಲೇವಾರಿ ನವೆಂಬರ್ 10) ವಿಸ್ತರಿಸಲಾಗಿದೆ.

ಬಿಹಾರ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಈಗಾಗಲೇ 20 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಈ ಅವಧಿಯಲ್ಲಿ ಹೆಸರು ಬಿಟ್ಟುಹೋಗಿರುವವರು ಅಥವಾ ಹೊಸ ಮತದಾರರು ತಮ್ಮ ಹೆಸರನ್ನು ಸೇರಿಸಲು ನಿರಂತರ ಪರಿಷ್ಕರಣೆ ಪ್ರಕ್ರಿಯೆಯಡಿ ಅರ್ಜಿ ಸಲ್ಲಿಸಬಹುದಾಗಿದ್ದು, ಇದಕ್ಕಾಗಿ ತಕ್ಷಣವೇ ವಿಶೇಷ ಅಭಿಯಾನ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಇಸಿಐನೆಟ್ ಪೋರ್ಟಲ್ ಕಾನೂನು ಹಾಗೂ ನಿಯಮಾವಳಿಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಿರಿಯ ಉಪ ಚುನಾವಣಾ ಆಯುಕ್ತರು ಹಾಗೂ ಐಐಟಿ/ಐಐಐಟಿ ತಜ್ಞರನ್ನೊಳಗೊಂಡ ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ ಎಂದು ಆಯೋಗ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು