ರಸ್ತೆ ಕಾಮಗಾರಿ ಗುಣಮಟ್ಟ ಪ್ರಶ್ನಿಸಿ ವಿಡಿಯೋ ಮಾಡಿದ ಯುವಕನಿಗೆ ಕಪಾಳಮೋಕ್ಷ: ದೆಹಲಿ ಬಿಜೆಪಿ ನಾಯಕ ಪರ್ವೇಶ್ ವರ್ಮಾ ವಿರುದ್ಧ ಆಪ್ ಆಕ್ರೋಶ

ರಸ್ತೆ ಕಾಮಗಾರಿಯ ಕಳಪೆ ಗುಣಮಟ್ಟವನ್ನು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಯುವಕನೊಬ್ಬನಿಗೆ ದೆಹಲಿಯ ಬಿಜೆಪಿ ಮುಖಂಡ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಕಪಾಳಮೋಕ್ಷ ಮಾಡಿರುವ ಘಟನೆ ರಾಜಧಾನಿಯಲ್ಲಿ ತೀವ್ರ ಉದ್ವಿಗ್ನತೆ ಮತ್ತು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಹೊಸದಾಗಿ ನಿರ್ಮಿಸಲಾಗುತ್ತಿರುವ ರಸ್ತೆಯ ಗುಣಮಟ್ಟದ ಕುರಿತು ಭಾನುವಾರ ಬಿಜೆಪಿ ನಾಯಕ ಹಾಗೂ ಆಮ್ ಆದ್ಮಿ ಪಕ್ಷದ (ಆಪ್) ಶಾಸಕರ ನಡುವೆ ತೀವ್ರ ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ತಿಲಕ್ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ರಸ್ತೆಯೊಂದನ್ನು ಪರಿಶೀಲಿಸಲು ಪರ್ವೇಶ್ ವರ್ಮಾ ಆಗಮಿಸಿದ್ದರು. ಅದೇ ವೇಳೆಗೆ ಸ್ಥಳೀಯ ಆಪ್ ಶಾಸಕ ಜರ್ನೈಲ್ ಸಿಂಗ್ ಕೂಡ ಸ್ಥಳಕ್ಕೆ ತಲುಪಿದ್ದರು.

ನಿಯಮಗಳ ಪ್ರಕಾರ ಕಾಮಗಾರಿ ನಡೆಯುತ್ತಿಲ್ಲ ಹಾಗೂ ಅತ್ಯಂತ ಕಳಪೆಯಾಗಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ವರ್ಮಾ ಮತ್ತು ಅವರ ಜತೆಗಿದ್ದವರು ಆಪಾದಿಸಿದರು. ಅಷ್ಟೇ ಅಲ್ಲದೆ, ಹೊಸದಾಗಿ ಹಾಕಲಾಗಿದ್ದ ಡಾಂಬರನ್ನು ಕೈಯಲ್ಲೇ ಕಿತ್ತು ತೆಗೆದು ಇದೇನಾ ಗುಣಮಟ್ಟ ಎಂದು ಪ್ರಶ್ನಿಸಿದಾಗ, ಇಬ್ಬರು ನಾಯಕರ ನಡುವೆ ವಾಗ್ವಾದ ತಾರಕಕ್ಕೇರಿತು. ರಸ್ತೆಯ ದುಸ್ಥಿತಿ ಹಾಗೂ ಮುಖಂಡರ ನಡುವಿನ ಜಗಳವನ್ನು ಸ್ಥಳೀಯ ಯುವಕನೊಬ್ಬ ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿರುವುದನ್ನು ಗಮನಿಸಿದ ವರ್ಮಾ, ಆತನ ಕೆನ್ನೆಗೆ ಹೊಡೆದಿದ್ದಾರೆ.

ಈ ದೌರ್ಜನ್ಯದ ವಿರುದ್ಧ ಆಮ್ ಆದ್ಮಿ ಪಕ್ಷವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಳಪೆ ರಸ್ತೆ ನಿರ್ಮಾಣದ ಬಂಡವಾಳ ಎಲ್ಲಿ ಬಯಲಾಗುವುದೋ ಎಂಬ ಭಯದಿಂದಲೇ, ಪೊಲೀಸರ ಬೆಂಬಲದೊಂದಿಗೆ ಈ ರೀತಿ ದೌರ್ಜನ್ಯ ಎಸಗಲಾಗಿದೆ ಎಂದು ಆಪ್ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ. ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯ ರಕ್ಷಣೆ ಇಲ್ಲದೆ ಆ ಯುವಕನ ಮುಂದೆ ಬಂದು ನಿಲ್ಲಿ ಎಂದು ಅವರು ಸವಾಲು ಹಾಕಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು