ದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಶಾಲೆಗಳಲ್ಲಿ 6ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಡ್ಡಾಯ ತ್ರಿಭಾಷಾ ಸೂತ್ರದಿಂದ ವಿನಾಯಿತಿ ನೀಡುವಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ಈಗಾಗಲೇ 7, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ನೀಡಲಾಗಿರುವ ವಿನಾಯಿತಿಯನ್ನು ಪ್ರಸ್ತುತ 6ನೇ ತರಗತಿಯಲ್ಲಿರುವ ಮಕ್ಕಳಿಗೂ ವಿಸ್ತರಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯನ್ನು 2027ರ ಏಪ್ರಿಲ್ 1 ರಿಂದ ಜಾರಿಗೆ ತರಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಭಾಷಾ ನೀತಿಯಲ್ಲಿ ದಿಢೀರ್ ಬದಲಾವಣೆ ಮಾಡಿರುವುದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಯಾವುದೇ ಪೂರ್ವಸಿದ್ಧತೆಯಿಲ್ಲದೆ ಹೊಸ ಭಾಷೆಗಳನ್ನು ಕಲಿಯಬೇಕಾಗಿರುವುದು ಹಾಗೂ ಅಗತ್ಯ ಪಠ್ಯಪುಸ್ತಕಗಳು ಮಾರುಕಟ್ಟೆಯಲ್ಲಿ ಭೌತಿಕವಾಗಿ ಲಭ್ಯವಿಲ್ಲದಿರುವ ಕುರಿತು ಪೋಷಕರು ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿ, ದೇಶಾದ್ಯಂತ ಕೇವಲ ಶೇಕಡಾ 1.2 ರಷ್ಟು ಶಾಲೆಗಳಲ್ಲಿ ಮಾತ್ರ ಈ ಸಮಸ್ಯೆಯಿದೆ ಎಂದು ತಿಳಿಸಿದರು. ಆದಾಗ್ಯೂ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ ಈ ಮಹತ್ವದ ವಿನಾಯಿತಿ ಆದೇಶ ಹೊರಡಿಸಿದೆ.
