ಉನ್ನತ ವ್ಯಾಸಂಗ ಮಾಡುತ್ತಿರುವ ಶೇ. 9ರಷ್ಟು ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆಯ ಯೋಚನೆ: ಎನ್‌ಟಿಎಫ್ ಸಮೀಕ್ಷಾ ವರದಿಯಲ್ಲಿ ಬಹಿರಂಗ

ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತೀವ್ರ ಮಾನಸಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ವಿದ್ಯಾರ್ಥಿಗಳ ಮೇಲೆ ರಾಷ್ಟ್ರವ್ಯಾಪಿ ಸಮೀಕ್ಷೆ ನಡೆಸಿದೆ.

ದೇಶವ್ಯಾಪಿ ನಡೆಸಿದ ಈ ಸಮೀಕ್ಷೆಯ ಪ್ರಕಾರ, ಶೇಕಡಾ 9ರಷ್ಟು ವಿದ್ಯಾರ್ಥಿಗಳು ಆತ್ಮಹತ್ಯೆಯ ಆಲೋಚನೆಗಳಿಂದ ಬಳಲುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿರುವುದಾಗಿ ಸುಪ್ರೀಂ ಕೋರ್ಟ್ ನೇಮಿತ ಸಮಿತಿ ಬಹಿರಂಗಪಡಿಸಿದೆ.ಇನ್ನು ಉನ್ನತ ಶಿಕ್ಷಣ ಸಂಸ್ಥೆಗಳ ಸುಮಾರು ಶೇ.15ರಷ್ಟು ವಿದ್ಯಾರ್ಥಿಗಳು ಕಳೆದ ಆರು ತಿಂಗಳಲ್ಲಿ ಹಲವು ಸಂದರ್ಭಗಳಲ್ಲಿ ಅತಿಯಾದ ಸಂತೋಷ ಹಾಗೂ ಮತ್ತೆ ಕೆಲವು ಸಂದರ್ಭಗಳಲ್ಲಿ ತೀವ್ರ ದುಃಖ, ಆತಂಕ ಮತ್ತು ಖಿನ್ನತೆಯನ್ನು ಅನುಭವಿಸಿರುವುದಾಗಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿನ ಮಾನಸಿಕ ಆತಂಕವನ್ನು ನಿವಾರಿಸಲು ಹಾಗೂ ಅವರಲ್ಲಿ ಮೂಡುವ ಆತ್ಮಹತ್ಯೆಯ ಯೋಚನೆಗಳನ್ನು ತಗ್ಗಿಸುವ ಉದ್ದೇಶದಿಂದ ರಾಷ್ಟ್ರೀಯ ಕಾರ್ಯಪಡೆ (ಎನ್‌ಟಿಎಫ್) ಈ ಸಮೀಕ್ಷೆಯ ಮೂಲಕ ವಿವರಗಳನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಿದೆ. ಅಕ್ಟೋಬರ್ 31ರಂದು ಈ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.

ಇತ್ತೀಚೆಗಷ್ಟೇ ಐಐಟಿ ದೆಹಲಿ ಮತ್ತು ಐಐಟಿ ಬಾಂಬೆ ಶಿಕ್ಷಣ ಸಂಸ್ಥೆಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿ ಪ್ರಾಣ ಕಳೆದುಕೊಂಡಿದ್ದರು. ಈ ಹಿಂದೆ ಕೂಡ ಸುಪ್ರೀಂ ಕೋರ್ಟ್ ಸಮಿತಿಯು ಮಧ್ಯಂತರ ವರದಿಯೊಂದನ್ನು ಸಲ್ಲಿಸಿತ್ತು. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಅಸಮಾನತೆಗಳಿದ್ದು, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳದ ಪ್ರಮಾಣ ಹೆಚ್ಚಾಗಿದೆ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಇದರೊಂದಿಗೆ ವೈದ್ಯಕೀಯ, ಕಾನೂನು ಮತ್ತು ರಾಜ್ಯ ವಿಶ್ವವಿದ್ಯಾಲಯಗಳ ಬೋಧಕ ಸಿಬ್ಬಂದಿಯಲ್ಲಿ ಲಿಂಗ ತಾರತಮ್ಯವಿದೆ ಎಂದೂ ತಿಳಿಸಲಾಗಿತ್ತು. ನೀಟ್ ಯುಜಿ ಮತ್ತು ಜೆಇಇ ರ್ಯಾಂಕ್‌ಗಳಲ್ಲಿ ಜಾತಿ ಆಧಾರಿತ ಗುರುತಿಸುವಿಕೆ, ಜಾತಿ ತಾರತಮ್ಯ, ಜಾತಿಯ ಹೆಸರಿನಲ್ಲಿ ಅವಮಾನ ಹಾಗೂ ಪ್ರವೇಶ ಪ್ರಕ್ರಿಯೆಯ ವೇಳೆ ಜಾತಿಯ ಪ್ರಸ್ತಾಪ ಮುಂತಾದ ಕಾರಣಗಳಿಂದ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ ಎಂದು ವರದಿ ಹೇಳಿತ್ತು.

ಎನ್‌ಟಿಎಫ್ ವರದಿಯ ಪ್ರಕಾರ, ಸಮೀಕ್ಷೆಯ ಭಾಗವಾಗಿ ಸುಮಾರು 2.43 ಲಕ್ಷ ವಿದ್ಯಾರ್ಥಿಗಳನ್ನು ಪ್ರಶ್ನಿಸಲಾಗಿದೆ. ಇದರಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಶೇಕಡಾ 67ರಷ್ಟಿದ್ದಾರೆ. ಇವರ ಪೈಕಿ ಶೇ. 34ರಷ್ಟು ಮಂದಿ ಕ್ಯಾಂಪಸ್‌ನಲ್ಲಿ ತಾವು ‘ಹೊರಗಿನವರು’ ಎಂಬ ಕೀಳರಿಮೆ ಅಥವಾ ಪ್ರತ್ಯೇಕತೆಯ ಭಾವನೆಗೆ ಒಳಗಾಗುತ್ತಿರುವುದಾಗಿ ತಿಳಿಸಿದ್ದಾರೆ. ಸುಮಾರು ಶೇ. 15ರಷ್ಟು ವಿದ್ಯಾರ್ಥಿಗಳು ಕಳೆದ ಆರು ತಿಂಗಳಿಂದ ಮಾನಸಿಕ ಯಾತನೆ ಅನುಭವಿಸುತ್ತಿರುವುದಾಗಿ ಹೇಳಿದ್ದು, ವಾರಗಳ ಕಾಲ ಆತಂಕದಲ್ಲೇ ಕಳೆದಿದ್ದಾಗಿ ಹೇಳಿಕೊಂಡಿದ್ದಾರೆ.

ಇನ್ನು ಶೇ. 9ರಷ್ಟು ವಿದ್ಯಾರ್ಥಿಗಳು ಕಳೆದೊಂದು ವರ್ಷದಿಂದ ತಮಗೆ ಪದೇಪದೇ ಆತ್ಮಹತ್ಯೆಯ ಯೋಚನೆಗಳು ಬರುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.ಶಿಕ್ಷಣ ಸಂಸ್ಥೆಗಳಲ್ಲಿ ಎದುರಾಗುವ ಇಂತಹ ಗಂಭೀರ ಸವಾಲುಗಳನ್ನು ನಿಭಾಯಿಸಲು ಅಲ್ಲಿನ ಆಡಳಿತ ಮಂಡಳಿಗಳು ಸಮರ್ಥವಾಗಿವೆ ಎಂದು ಕೇವಲ ಶೇ.56ರಷ್ಟು ಮಂದಿ ಮಾತ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಉಳಿದಂತೆ ಶೇಕಡಾ 32ರಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಕೌನ್ಸಿಲಿಂಗ್ ಸೌಲಭ್ಯಗಳೇ ಇಲ್ಲದಿರುವುದು ಸಮೀಕ್ಷೆಯಿಂದ ದೃಢಪಟ್ಟಿದೆ.

ಕಳೆದ ಕೆಲವು ತಿಂಗಳುಗಳಿಂದ ಎನ್‌ಟಿಎಫ್ ಸುಮಾರು 19 ಶಿಕ್ಷಣ ಸಂಸ್ಥೆಗಳೊಂದಿಗೆ 30 ಸಭೆಗಳನ್ನು ನಡೆಸಿದೆ. ದೆಹಲಿ, ಎನ್‌ಸಿಆರ್, ತಮಿಳುನಾಡು, ಕರ್ನಾಟಕ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಶಿಕ್ಷಣ ಸಂಸ್ಥೆಗಳೊಂದಿಗೆ ಕಾರ್ಯಪಡೆ ಚರ್ಚೆ ನಡೆಸಿದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಈ ಎನ್‌ಟಿಎಫ್ ಅನ್ನು ರಚಿಸಿತ್ತು. ಈ ಉನ್ನತ ಮಟ್ಟದ ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ವಹಿಸಿದ್ದಾರೆ.ಇವರೊಂದಿಗೆ ಪ್ರಖ್ಯಾತ ಮನೋವೈದ್ಯ ಅಲೋಕ್ ಸಾರೀನ್, ಮೇರಿ ಇ. ಜಾನ್, ಅರ್ಮಾನ್ ಅಲಿ, ರಾಜೇಂದ್ರ ಕಚ್ರೂ, ಸೀಮಾ ಮೆಹ್ರೋತ್ರಾ ಹಾಗೂ ನಿಮ್ಹಾನ್ಸ್‌ನ ತಜ್ಞರು ಈ ಕಾರ್ಯಪಡೆಯ ಸದಸ್ಯರಾಗಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು