Friday, June 14, 2024

ಸತ್ಯ | ನ್ಯಾಯ |ಧರ್ಮ

ಕನ್ನಡ ಭಾಷೆ, ಧ್ವಜ ವಿಚಾರ: ಬಿಜೆಪಿಗೆ ಖರ್ಗೆ ತಿರುಗೇಟು

ಮೈಸೂರು: ಕನ್ನಡ ಧ್ವಜ ಮತ್ತು ಕನ್ನಡಿಗರನ್ನು ಕಂಡರೆ ಕಾಂಗ್ರೆಸ್‌ಗೆ ದ್ವೇಷ ಎಂದು ಬಿಜೆಪಿ ಕಟುವಾಗಿ ಟೀಕಿಸಿರುವ ಹಿನ್ನಲೆ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಕನ್ನಡ ಬಾವುಟ ವಿಚಾರವಾಗಿ ಬಿಜೆಪಿ ಮಾಡಿರುವ ಟೀಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾವು ನಮ್ಮದೇ ಆದ ಧ್ವಜ ಹೊಂದಲು ಮುಂದಾಗಿದ್ದೆವು. ಆಗ ಬಿಜೆಪಿ ಸರ್ಕಾರ ನಿರಾಕರಿಸಿತ್ತು. ಈಗ ಡಬಲ್ ಇಂಜಿನ್ ಸರ್ಕಾರ ಇದೆಯಲ್ಲ, ಈಗ ಅಧಿಕೃತವಾಗಿ ಧ್ವಜ ನೀಡಲಿ ಎಂದು ಹೇಳಿದರು.

ಈ ಹಿಂದಿನ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ ರವಿ ಅವರು ನಾವು ಒಂದು ದೇಶವಾಗಿ ಬದುಕುತ್ತಿದ್ದು, ಪ್ರತ್ಯೇಕ ಧ್ವಜದ ಅಗತ್ಯವಿಲ್ಲ ಎಂದು ಹೇಳಿದ್ದರು. ಈಗ ಇವರು ಕನ್ನಡ ಭಾಷೆ ಬಗ್ಗೆ ಇಷ್ಟು ಮಾತನಾಡುತ್ತಾರಲ್ಲ, ಹಿಂದಿ ದಿನ ಆಚರಣೆಗೆ ಮುಂದಾಗಿದ್ದು ಯಾರು? ಕೇಂದ್ರದ ಎಲ್ಲ ಸರ್ಕಾರಿ ಕಾರ್ಯಕ್ರಮದಲ್ಲಿ ಕನ್ನಡ ಬಳಕೆ ಮಾಡುತ್ತಾರಾ? ಎಂದು ಪ್ರಶ್ನಿಸಿದರು.

 ರಾಷ್ಟ್ರಪತಿಗಳು ದಸರಾ ಕಾರ್ಯಕ್ರಮಕ್ಕೆ ಬಂದಾಗ ಕನ್ನಡ ಬಳಸಿರಲಿಲ್ಲ. ಐಪಿಬಿಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಸುತ್ತಿಲ್ಲ ಯಾಕೆ? ಭಾರತದ ಇತಿಹಾಸದಲ್ಲಿ ಅವರದು ಅತ್ಯಂತ ಶಕ್ತಿಶಾಲಿ ಸರ್ಕಾರವಾಗಿದ್ದು, ರಾಜ್ಯ ಸರ್ಕಾರ ನಾಳೆ ರಾಜ್ಯ ಧ್ವಜದ ಪ್ರಸ್ತಾಪ ಕಳುಹಿಸಿ ಅದಕ್ಕೆ ಕೇಂದ್ರದ ಒಪ್ಪಿಗೆ ಪಡೆಯಲಿ. ನಾನು ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು