ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಔಷಧಿಗಳ ದುಬಾರಿ ಬೆಲೆಗೆ ಸುಪ್ರೀಂ ಆಕ್ರೋಶ: ಎಲ್ಲಾ ಔಷಧಿಗಳಿಗೂ ಶೇ. 16ರಷ್ಟು ಏಕರೂಪದ ಲಾಭಾಂಶ ನಿಗದಿಗೆ ಸಲಹೆ

ಕಾರ್ಪೊರೇಟ್ ಆಸ್ಪತ್ರೆಗಳು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳ ಔಷಧಿಗಳಿಗೆ ಮೂಲ ಬೆಲೆಗಿಂತ ಹತ್ತು ಪಟ್ಟು ಹೆಚ್ಚಿನ ಬೆಲೆಯನ್ನು ವಸೂಲಿ ಮಾಡುತ್ತಿರುವುದಕ್ಕೆ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.ಇದು ಸಾರ್ವಜನಿಕರ ಹಗಲು ದರೋಡೆಯಾಗಿದ್ದು, ಎಲ್ಲಾ ಔಷಧಿಗಳ ಮೇಲೂ ಗರಿಷ್ಠ ಶೇಕಡಾ 16ರಷ್ಟು ಏಕರೂಪದ ಲಾಭಾಂಶವನ್ನು (ಮಾರ್ಜಿನ್) ನಿಗದಿಪಡಿಸಬೇಕು ಎಂದು ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ಸೂಚಿಸಿದೆ.

ಆಸ್ಪತ್ರೆಗಳು ರೋಗಿಗಳಿಗೆ ತಮ್ಮ ಆಸ್ಪತ್ರೆಯ ಔಷಧಾಲಯಗಳಿಂದಲೇ (ಫಾರ್ಮಸಿ) ದುಬಾರಿ ಬೆಲೆಗೆ ಔಷಧಿಗಳನ್ನು ಖರೀದಿಸುವಂತೆ ಒತ್ತಾಯಿಸುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ತಕ್ಷಣವೇ ಗಮನಹರಿಸಬೇಕು ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ನಿರ್ದೇಶಿಸಿದೆ. ಈ ವ್ಯವಸ್ಥೆಯಿಂದಾಗಿ ಸಾಮಾನ್ಯ ನಾಗರಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ ಎಂದು ಪೀಠ ವಿಷಾದಿಸಿದೆ.

ಚಿಲ್ಲರೆ ವ್ಯಾಪಾರಿಗಳಿಗೆ ಕೇವಲ ₹2,700ಕ್ಕೆ ಪೂರೈಕೆಯಾಗುವ ಕ್ಯಾನ್ಸರ್ ಔಷಧಿಗೆ ಬರೋಬ್ಬರಿ ₹27,000 ಎಂಆರ್‌ಪಿ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ.ಕಾರ್ಪೊರೇಟ್ ಆಸ್ಪತ್ರೆಗಳು ಹಣಕ್ಕಾಗಿ ಯಾರನ್ನೂ ಬಿಡುವುದಿಲ್ಲ, ಹಣ ಪಾವತಿಯಾಗದ ಹೊರತು ಶವವನ್ನೂ ಹೊರಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ; ಇತ್ತ ಫಾರ್ಮಾ ರಂಗಕ್ಕೂ ಈ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂದು ಪೀಠ ಕಟುವಾಗಿ ತರಾಟೆಗೆ ತೆಗೆದುಕೊಂಡಿತು. ಖಾಸಗಿ ಆರೋಗ್ಯ ಸಂಸ್ಥೆಗಳು ಸೇವಾ ವಲಯದಂತೆ ಕೆಲಸ ಮಾಡದೆ ಲಾಭಕೋರ ಕೈಗಾರಿಕೆಗಳಂತೆ ವರ್ತಿಸುತ್ತಿವೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.

ಔಷಧ ಬೆಲೆ ನಿಯಂತ್ರಣ ಆದೇಶ (ಡಿಪಿಸಿಒ) 2013ರ ಅಡಿಯಲ್ಲಿ ಔಷಧಿಗಳ ಬೆಲೆ ನಿಯಂತ್ರಣ, ಜೆನೆರಿಕ್ ಔಷಧಿಗಳ ಪ್ರಿಸ್ಕ್ರಿಪ್ಷನ್ ಹಾಗೂ ವೈದ್ಯಕೀಯ ಉಪಕರಣಗಳ ನಿಯಂತ್ರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಮೌಖಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳನ್ನು ಆಸ್ಪತ್ರೆಯ ಒಳಗಿನ ಫಾರ್ಮಸಿಗಳಿಂದಲೇ ಔಷಧಿ ಖರೀದಿಸಲು ಬಲವಂತಪಡಿಸಲಾಗುತ್ತದೆ, ಹೊರಗಿನಿಂದ ಕಡಿಮೆ ಬೆಲೆಗೆ ತಂದರೆ ಸೂಕ್ತ ಚಿಕಿತ್ಸೆಯ ಭರವಸೆಯನ್ನೂ ನೀಡುವುದಿಲ್ಲ ಎಂಬ ದೂರುಗಳಿವೆ ಎಂದು ನ್ಯಾಯಾಲಯ ಗಮನಿಸಿತು.

ಸರ್ಕಾರಿ ಆರೋಗ್ಯ ವಿಮಾ ಯೋಜನೆಗಳ ಫಲಾನುಭವಿಗಳ ವಿಚಾರದಲ್ಲೂ ಈ ದಂಧೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಪೀಠ ಎತ್ತಿ ತೋರಿಸಿತು. ಸರ್ಕಾರಿ ಯೋಜನೆಯಡಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಆಸ್ಪತ್ರೆಗಳು ಇಂತಹ ಹತ್ತು ಪಟ್ಟು ದುಬಾರಿ ಎಂಆರ್‌ಪಿ ವಿಧಿಸಿದಾಗ, ಸರ್ಕಾರವು ತನ್ನ ಬೊಕ್ಕಸದಿಂದ ಆ ಹಣವನ್ನು ಆಸ್ಪತ್ರೆಗೆ ಮರುಪಾವತಿಸುತ್ತದೆ. ಹೀಗಾಗಿ ಈ ಅತಿಯಾದ ಬೆಲೆಯ ಹೊರೆಯನ್ನು ಅಂತಿಮವಾಗಿ ದೇಶದ ಪ್ರಾಮಾಣಿಕ ತೆರಿಗೆದಾರರೇ ಹೊರಬೇಕಾಗುತ್ತದೆ ಎಂದು ನ್ಯಾಯಪೀಠ ಹೇಳಿತು.

ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಸಮಸ್ಯೆಯನ್ನು ಒಪ್ಪಿಕೊಂಡು, ಸಮಗ್ರ ನಿಯಂತ್ರಣದ ಅಗತ್ಯವಿದೆ ಎಂದರು.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ನಿಲುವು ತಿಳಿಸಲು ಅವರು ಕಾಲಾವಕಾಶ ಕೋರಿದರು. ಎಲ್ಲಾ ಔಷಧಿಗಳಿಗೂ ಶೇಕಡಾ 16ರಷ್ಟು ಸಮಾನ ಮಾರ್ಜಿನ್ ನಿಗದಿಪಡಿಸಲು ಇರುವ ಅಡ್ಡಿಯೇನು ಎಂದು ಪ್ರಶ್ನಿಸಿದ ನ್ಯಾಯಾಲಯ, ಮೂಲ ಬೆಲೆ ಮತ್ತು ಎಂಆರ್‌ಪಿ ನಡುವಿನ ಈ ಬೃಹತ್ ವ್ಯತ್ಯಾಸದ ಹಣ ಯಾರ ಜೇಬಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿತು.

ಇದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್, ಈ ದರ ವ್ಯತ್ಯಾಸದಿಂದ ಔಷಧ ತಯಾರಕ ಕಂಪನಿಗಳಿಗಿಂತ ಖಾಸಗಿ ಆಸ್ಪತ್ರೆಗಳೇ ಸಿಂಹಪಾಲು ಲಾಭ ಮಾಡಿಕೊಳ್ಳುತ್ತಿವೆ ಎಂದರು. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್ 12ಕ್ಕೆ ನಿಗದಿಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು