ದೇಶೀಯ ಎಲ್ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಮಹತ್ವದ ನಿಯಮಾವಳಿಯನ್ನು ಜಾರಿಗೆ ತಂದಿದ್ದು, ಅಕ್ಟೋಬರ್ 1 ರಿಂದ ಸಬ್ಸಿಡಿ ದರದ ನಿಯಂತ್ರಿತ ಬೆಲೆಯಲ್ಲಿ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಕಾಯ್ದಿರಿಸಲು ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ (ಇ-ಕೆವೈಸಿ) ಕಡ್ಡಾಯಗೊಳಿಸಲಾಗಿದೆ. ಆಧಾರ್ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಗ್ರಾಹಕರಿಗೆ ಇನ್ನು ಮುಂದೆ ರಿಯಾಯಿತಿ ದರದ ನಿಯಮಿತ 14.2 ಕೆಜಿ ಸಿಲಿಂಡರ್ ಬುಕಿಂಗ್ ಮಾಡಲು ಸಾಧ್ಯವಾಗುವುದಿಲ್ಲ.
ಈಗಾಗಲೇ ಆಧಾರ್ ಇ-ಕೆವೈಸಿ ಪೂರ್ಣಗೊಳಿಸಿರುವ ಗ್ರಾಹಕರು ಎಂದಿನಂತೆ ಸಿಲಿಂಡರ್ ರೀಫಿಲ್ ಪಡೆಯಬಹುದಾಗಿದ್ದು, ಅವರು ಯಾವುದೇ ಹೊಸ ಪ್ರಕ್ರಿಯೆ ಮಾಡುವ ಅಗತ್ಯವಿಲ್ಲ. ಆದರೆ, ಬಯೋಮೆಟ್ರಿಕ್ ಪರಿಶೀಲನೆ ಮಾಡಿಸದ ಗ್ರಾಹಕರಿಗೆ ಮಾರುಕಟ್ಟೆ ದರದಲ್ಲಿ ಲಭ್ಯವಿರುವ 5 ಕೆಜಿ ಮುಕ್ತ ವ್ಯಾಪಾರ (ಎಫ್ಟಿಎಲ್) ಅಥವಾ 10 ಕೆಜಿಯ ಕಾಂಪೊಸಿಟ್ ಸಿಲಿಂಡರ್ಗಳನ್ನು ಮಾತ್ರ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
ಸಬ್ಸಿಡಿಯು ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುವಂತೆ ಮಾಡಲು, ನಕಲಿ ಸಂಪರ್ಕಗಳನ್ನು ಪತ್ತೆಹಚ್ಚಲು ಹಾಗೂ ಗೃಹಬಳಕೆಯ ಸಿಲಿಂಡರ್ಗಳು ವಾಣಿಜ್ಯ ಉದ್ದೇಶಕ್ಕೆ ದುರುಪಯೋಗವಾಗುವುದನ್ನು ತಡೆಯಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 19 ರ ವೇಳೆಗೆ ದೇಶದ ಶೇ. 89.9 ರಷ್ಟು ಅಂದರೆ ಸುಮಾರು 27.43 ಕೋಟಿ ಸಕ್ರಿಯ ಗ್ರಾಹಕರು ಈ ಪ್ರಕ್ರಿಯೆಯನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.
ಇನ್ನೂ ಇ-ಕೆವೈಸಿ ಮಾಡಿಸದ ಗ್ರಾಹಕರು ಸಿಲಿಂಡರ್ ವಿತರಣೆಯ ಸಮಯದಲ್ಲಿ ಡೆಲಿವರಿ ಸಿಬ್ಬಂದಿಯ ಮೂಲಕ, ಎಲ್ಪಿಜಿ ವಿತರಕರ ಕಚೇರಿಗೆ ಭೇಟಿ ನೀಡಿ ಅಥವಾ ಆಯಾ ತೈಲ ಕಂಪನಿಗಳ ಅಧಿಕೃತ ಮೊಬೈಲ್ ಆ್ಯಪ್ಗಳಾದ ಇಂಡಿಯನ್ ಆಯಿಲ್ ಒನ್ (ಇಂಡೇನ್), ಹಲೋ ಬಿಪಿಸಿಎಲ್ (ಭಾರತ್ಗ್ಯಾಸ್) ಮತ್ತು ಎಚ್ಪಿ ಪೇ (ಎಚ್ಪಿ ಗ್ಯಾಸ್) ಮೂಲಕ ದೃಢೀಕರಣ ಪೂರ್ಣಗೊಳಿಸಬಹುದು.
ಇದೇ ವೇಳೆ, ಅಕ್ಟೋಬರ್ 1 ರಿಂದ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 62.50 ರೂ. ಏರಿಕೆಯಾಗಿದ್ದು, ದೆಹಲಿಯಲ್ಲಿ ಇದರ ದರ 2,810 ರೂ.ಗೆ ತಲುಪಿದೆ. 5 ಕೆಜಿ ಸಿಲಿಂಡರ್ ದರವೂ 15.50 ರೂ. ಹೆಚ್ಚಳವಾಗಿದ್ದು 779.50 ರೂ. ಆಗಿದೆ. ಆದರೆ 14.2 ಕೆಜಿ ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
