ಬೆಂಗಳೂರು: ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರ ‘ಉರ್ದು ಹಬ್ಬ’ ಆಯೋಜಿಸಲು ಮುಂದಾಗಿರುವ ನಿರ್ಧಾರವನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರವಾಗಿ ಖಂಡಿಸಿದೆ. ಸರ್ಕಾರದ ಈ ನಿಲುವನ್ನು ಅವಿವೇಕದ, ಅಪ್ರಬುದ್ಧ ಹಾಗೂ ದುರಹಂಕಾರದ ನಡೆ ಎಂದು ಬಣ್ಣಿಸಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ವಿಧಾನಸೌಧದ ಆವರಣದಲ್ಲಿ ನಡೆಯಲು ಬಿಡುವುದಿಲ್ಲ ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸರ್ಕಾರದ ನಡೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಅವರು, “ಸರ್ಕಾರಕ್ಕೆ ಮಾಡಲು ಜನಪರವಾದ ಅನೇಕ ಕೆಲಸಗಳಿವೆ. ಅಂತಹ ಕೆಲಸಗಳನ್ನು ಬಿಟ್ಟು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ನಡೆಸುವ ತಲೆಹರಟೆ ಆಲೋಚನೆ ಯಾರದ್ದು? ಕನ್ನಡಿಗರು ಮತ್ತು ಉರ್ದು ಭಾಷಿಕರ ನಡುವೆ ಪರಸ್ಪರ ವೈಮನಸ್ಸು ಸೃಷ್ಟಿಸುವ ವ್ಯವಸ್ಥಿತ ಹುನ್ನಾರ ಇದಾಗಿದೆ. ಹಿಂದೆ ಉರ್ದು ವಾರ್ತೆ ಪ್ರಸಾರಕ್ಕೆ ಸಂಬಂಧಿಸಿದಂತೆ ನಡೆದ ಕೋಮುಗಲಭೆಯ ಕರಾಳ ಇತಿಹಾಸವನ್ನು ಸರ್ಕಾರ ಮರೆತಂತಿದೆ. ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವ ಇಂತಹ ದುಸ್ಸಾಹಸಕ್ಕೆ ಸರ್ಕಾರ ಇಳಿದಿದೆ” ಎಂದು ಆಪಾದಿಸಿದ್ದಾರೆ.
ಇಂದು ಉರ್ದು ಹಬ್ಬಕ್ಕೆ ಅನುಮತಿ ನೀಡಿದರೆ, ಮುಂದಿನ ದಿನಗಳಲ್ಲಿ ಹಿಂದಿ, ತಮಿಳು, ತೆಲುಗು ಮತ್ತು ಮರಾಠಿ ಹಬ್ಬಗಳನ್ನೂ ವಿಧಾನಸೌಧದ ಮುಂದೆಯೇ ನಡೆಸಿ ಕೊನೆಗೆ ಕರ್ನಾಟಕವನ್ನೇ ಕನ್ನಡೇತರರಿಗೆ ಪರಭಾರೆ ಮಾಡುವ ಹಂತಕ್ಕೆ ತಲುಪುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ. “ನಾವು ಉರ್ದು ಸೇರಿದಂತೆ ಯಾವುದೇ ಭಾಷೆಯ ವಿರೋಧಿಗಳಲ್ಲ. ಉರ್ದು ಹಬ್ಬ ಮಾಡಲು ಬೆಂಗಳೂರಿನಲ್ಲಿ ಬೇರೆ ಅನೇಕ ಜಾಗಗಳಿವೆ. ನಾಡಿನ ಶಕ್ತಿಸೌಧವಾದ ವಿಧಾನಸೌಧವೇ ಅದಕ್ಕೆ ಬೇಕಾಗಿಲ್ಲ” ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಮಧ್ಯಪ್ರವೇಶಿಸಿ ಈ ನಿರ್ಧಾರವನ್ನು ಕೈಬಿಡಬೇಕು ಮತ್ತು ಸಮಾಜದಲ್ಲಿ ಸೌಹಾರ್ದತೆ ಕೆಡಿಸಲು ಸಂಚು ರೂಪಿಸುವ ಶಕ್ತಿಗಳನ್ನು ದೂರವಿಡಬೇಕು ಎಂದು ಆಗ್ರಹಿಸಿರುವ ಅವರು, ಸರ್ಕಾರವೇ ಮುಂದೆ ನಿಂತು ನಾಡಿನ ನೆಮ್ಮದಿಯನ್ನು ಹಾಳುಗೆಡಹಲು ಯತ್ನಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
