ಬೆಂಗಳೂರಿನಲ್ಲಿ ಅಂತಾರಾಜ್ಯ ನಕಲಿ ನೋಟು ಮುದ್ರಣ ಜಾಲ ಭೇದಿಸಿದ ಪೊಲೀಸರು: 7 ಮಂದಿ ಬಂಧನ, ₹21.68 ಲಕ್ಷ ಮೌಲ್ಯದ ನಕಲಿ ನೋಟು ಜಪ್ತಿ

ಬೆಂಗಳೂರು: ಸುಲಭವಾಗಿ ಹಣ ಸಂಪಾದಿಸುವ ದುರುದ್ದೇಶದಿಂದ ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಅಂತಾರಾಜ್ಯ ಜಾಲವನ್ನು ಬೆಂಗಳೂರಿನ ಚಾಮರಾಜಪೇಟೆ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರರಾಜ್ಯಗಳ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಬರೋಬ್ಬರಿ 21,68,500 ರೂಪಾಯಿ ಮುಖಬೆಲೆಯ 500 ಮುಖಬೆಲೆಯ 4,337 ನಕಲಿ ನೋಟುಗಳು, ಕಾರು, ಮೊಬೈಲ್‌ಗಳು ಹಾಗೂ ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೆಪ್ಟೆಂಬರ್ 14 ರಂದು ಮೈಸೂರು ರಸ್ತೆ ಮೇಲ್ಸೇತುವೆಯ ಇಳಿದಾಣದ ಬಳಿಯ ಪೆಟ್ರೋಲ್ ಬಂಕ್ ಸಮೀಪ ಕಾರಿನಲ್ಲಿ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಚಾಮರಾಜಪೇಟೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಅವರಿಂದ 3,000 ನಕಲಿ 500 ರೂಪಾಯಿ ನೋಟುಗಳು, ಒಂದು ಕಾರು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿತ್ತು.

ಬಂಧಿತರನ್ನು ನ್ಯಾಯಾಲಯದ ಅನುಮತಿಯೊಂದಿಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ತಾವು ಇತರ 9 ಮಂದಿ ಸಹಚರರೊಂದಿಗೆ ಸೇರಿ ಈ ದಂಧೆ ನಡೆಸುತ್ತಿರುವುದಾಗಿ ಬಾಯಿಬಿಟ್ಟಿದ್ದರು. ಆರೋಪಿಗಳು ನೀಡಿದ ಮಹತ್ವದ ಸುಳಿವಿನ ಮೇರೆಗೆ ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು, ಸೆಪ್ಟೆಂಬರ್ 16 ರಂದು ತಮಿಳುನಾಡಿನ ಚೆನ್ನೈನಲ್ಲಿ ಇಬ್ಬರನ್ನು ಹಾಗೂ ಸೆಪ್ಟೆಂಬರ್ 18 ರಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಮೂವರನ್ನು ಬಂಧಿಸಿ ಅವರ ಬಳಿಯಿದ್ದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡರು.

ನಂತರ ಸೆಪ್ಟೆಂಬರ್ 24 ಮತ್ತು 25 ರ ಅವಧಿಯಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿರುವ ಆರೋಪಿಯೊಬ್ಬನ ಮನೆಯ ಮೇಲೆ ದಾಳಿ ನಡೆಸಿದ ತನಿಖಾ ತಂಡ, ಅಲ್ಲಿ ಬಚ್ಚಿಟ್ಟಿದ್ದ 1,337 ನಕಲಿ ನೋಟುಗಳು ಸೇರಿದಂತೆ ಕಂಪ್ಯೂಟರ್, ಲ್ಯಾಪ್‌ಟಾಪ್, ಲ್ಯಾಮಿನೇಟರ್, ಕಲರ್ ಪ್ರಿಂಟರ್, ಕಟಿಂಗ್ ಮೆಷಿನ್, ನಕಲಿ ಹೊಲೊಗ್ರಾಮ್ ಮತ್ತು ಜೆರಾಕ್ಸ್ ಯಂತ್ರಗಳನ್ನು ಜಪ್ತಿ ಮಾಡಿದೆ. ಬಂಧಿತ ಏಳು ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ನಾಲ್ವರು ಸಹಚರರ ಪತ್ತೆಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು