ಅನುದಿನದ ಅಂತರಂಗ – 1 : ಅಪರಿಚಿತ ಅಭಿಮಾನಿಯ ಆತಿಥ್ಯ ಸವಿದ ಘಳಿಗೆ

“..ಭಾವಾವೇಶಕ್ಕೆ ಒಳಗಾಗಿ ಕಣ್ಣು ತೋಯಿಸಿಕೊಂಡ ಹಲವು ಸನ್ನಿವೇಶ, ಘಟನೆಗಳು ಪ್ರತಿ ಬರಹಗಾರನ ಬದುಕಿನೊಳಗೆ ಬೆಚ್ಚಗೆ ಮಲಗಿರುತ್ತವೆ. ಅಂತಹ ಅಪರೂಪದ ಪ್ರಸಂಗಗಳನ್ನು ಈ ಅಂಕಣದಲ್ಲಿ ಕಟ್ಟಿಕೊಡುವ ಪುಟ್ಟ ಪ್ರಯತ್ನ ನನ್ನದು..” ಅನುದಿನದ ಅಂತರಂಗ ಅಂಕಣದ ಮೊದಲ ಲೇಖನ.. ವಿಮರ್ಶಕರಾದ ನಾಗೇಶ್ ಜೆ ನಾಯಕ ಅವರ ಬರಹದಲ್ಲಿ

ನೀವು ನಿಧಾನವಾಗಿ
ಸಾಯತೊಡಗುವಿರಿ....
ಲೋಕ ಸುತ್ತದೇ ಇದ್ದರೆ
ಕೋಶ ಓದದೇ ಇದ್ದರೆ
ಬಾಳಿನ ಸದ್ದುಗಳ ಕೇಳದೆ ಇದ್ದರೆ
-ಪಾಬ್ಲೊ ನೆರೂದ

ಕವಿತೆ, ಕಥೆ, ಲೇಖನ, ಅಥವಾ ಸಾಹಿತ್ಯದ ಯಾವುದೇ ಪ್ರಕಾರದ ಬರವಣಿಗೆಯಾಗಿರಲಿ ‘ಅದು ಬರೆಯುವಾಗ ಮಾತ್ರ ಬರಹಗಾರನದು. ಬರೆದಾದ ಮೇಲೆ ಅದು ಓದುಗನದು’ ಎಂಬ ಮಾತಿದೆ. ಲೇಖಕನೊಬ್ಬ ಧನ್ಯತೆ ಅನುಭವಿಸುವುದು, ತನ್ನ ಬರಹವನ್ನು ಓದುಗ ಮೆಚ್ಚಿ ಮಾತನಾಡಿದಾಗ ಮಾತ್ರ. ಬರವಣಿಗೆ ಲೋಕದ ಮೆಚ್ಚುಗೆ, ತಿರಸ್ಕಾರ, ಅಭಿಮಾನದ ಹುಚ್ಚು, ಕಾಲೆಳೆವ ಹಿತಶತ್ರುಗಳು, ದಕ್ಕಿದ ಉಡುಗೊರೆ, ಭಾವಾವೇಶಕ್ಕೆ ಒಳಗಾಗಿ ಕಣ್ಣು ತೋಯಿಸಿಕೊಂಡ ಹಲವು ಸನ್ನಿವೇಶ, ಘಟನೆಗಳು ಪ್ರತಿ ಬರಹಗಾರನ ಬದುಕಿನೊಳಗೆ ಬೆಚ್ಚಗೆ ಮಲಗಿರುತ್ತವೆ. ಅಂತಹ ಅಪರೂಪದ ಪ್ರಸಂಗಗಳನ್ನು ಈ ಅಂಕಣದಲ್ಲಿ ಕಟ್ಟಿಕೊಡುವ ಪುಟ್ಟ ಪ್ರಯತ್ನ ನನ್ನದು.

ಹೊಸದಾಗಿ ಪ್ರಕಟಗೊಂಡ ಸಂಕಲನಗಳ ಬಗ್ಗೆ ನಿರಂತರವಾಗಿ ಪರಿಚಯ, ಒಳನೋಟ ಬರೆಯುತ್ತಿದ್ದ ಸಂದರ್ಭವದು. ಸಣ್ಣದಾಗಿ ‘ವಿಮರ್ಶಕರು’ ಎಂಬ ಹಣೆಪಟ್ಟಿ ಹೆಗಲೇರಿ ಪುಳಕ ಇಮ್ಮಡಿಗೊಳಿಸಿತ್ತು. ಮಂಡ್ಯದ ಮಿತ್ರ ಸತೀಶ್ ಜವರೇಗೌಡ ಅವರು ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಏರ್ಪಡಿಸಿದ ರಾಜ್ಯಮಟ್ಟದ ಕವಿ ಕಾವ್ಯ ಸಮ್ಮಿಲನದ ಅಧ್ಯಕ್ಷತೆ ನನ್ನ ಪಾಲಿಗೆ ಒದಗಿ ಬಂದಿತ್ತು. ಮೊದಲು ಜರುಗಬೇಕಿದ್ದ ಉದ್ಘಾಟನಾ ಕಾರ್ಯಕ್ರಮ ಸ್ವಲ್ಪ ವಿಳಂಬವಾಗಿದ್ದರಿಂದ ಕವಿಗೋಷ್ಠಿ ಕೂಡ ತಡವಾಗಿಯೇ ಶುರುವಾಯಿತು. ವೇದಿಕೆ ಮೇಲಿನ ಅತಿಥಿಗಳು ಮಾತನಾಡಿದರು, ಐವತ್ತಕ್ಕಿಂತ ಹೆಚ್ಚು ಕವಿಗಳು ಕವಿತೆ ಓದಿ ಖುಷಿಪಟ್ಟರು. ಕೊನೆಗೆ ನಾನು ಅಧ್ಯಕ್ಷೀಯ ನುಡಿಗಳನ್ನಾಡಬೇಕು ಎನ್ನುವಷ್ಟರಲ್ಲಿ ಸಮಯ ಎರಡುಗಂಟೆಯ ಮೇಲಾಗಿತ್ತು. ನಿರೂಪಣೆಯಲ್ಲಿ ‘ಕೊನೆಯದಾಗಿ ಅಧ್ಯಕ್ಷತೆಯ ಮಾತು. ಈಗಾಗಲೇ ಸಮಯ ಆಗಿರುವುದರಿಂದ ಅಧ್ಯಕ್ಷರು ಹತ್ತು ನಿಮಿಷದಲ್ಲಿ ಮಾತನಾಡಬೇಕೆಂದು ವಿನಂತಿಸಿಕೊಳ್ಳುತ್ತೇವೆ’ ಫರ್ಮಾನು ಹೊರಡಿಸಲಾಯಿತು.

‘ಬೆಳಗಾವಿ ಜಿಲ್ಲೆಯಿಂದ ಒಂದಿಡೀ ರಾತ್ರಿ ಪ್ರಯಾಣ ಮಾಡಿ ನಿಮ್ಮ ಜಿಲ್ಲೆಗೆ ಬಂದಿರುವೆ. ಐವತ್ತು ಕವಿಗಳ ಕವಿತೆ ಕೇಳಿಸಿಕೊಂಡಿದ್ದೇನೆ. ನೀವೀಗ ಬರೀ ಹತ್ತು ನಿಮಿಷದಲ್ಲಿ ಮಾತು ಮುಗಿಸಿ ಎನ್ನುತ್ತೀರಿ, ಅದು ಹೇಗೆ ಸಾಧ್ಯ?’ ಎನ್ನುತ್ತ ಅರ್ಧ ಗಂಟೆಗಿಂತಲೂ ಹೆಚ್ಚು ಕಾಲ ಮಾತನಾಡಿದೆ. ಕುಳಿತು ಕೇಳಿಸಿಕೊಳ್ಳುತ್ತಿದ್ದವರೆಲ್ಲ ‘ನೀವು ಇನ್ನಷ್ಟು ಮಾತನಾಡಿ ಸರ್…’ ಎಂದು ಪ್ರೀತಿಯಿಂದ ಒತ್ತಾಯಿಸಿ, ಸಮಯವಾದರೂ ನನ್ನ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡರು. ಕಾರ್ಯಕ್ರಮ ಮುಗಿದ ಬಳಿಕ ಊಟಕ್ಕೆ ಅಣಿಯಾಗಬೇಕೆನ್ನುವಷ್ಟರಲ್ಲಿ ಬಳಿ ಬಂದ ಒಬ್ಬರು “ಸರ್ ನಮಸ್ತೆ, ನಿಮ್ಮ ಅಷ್ಟೂ ಮಾತುಗಳನ್ನು ಕೇಳಿಸಿಕೊಂಡೆ. ನಿಮ್ಮ ಬರಹಗಳನ್ನು ಪತ್ರಿಕೆಗಳಲ್ಲೂ, ಮುಖಪುಟದಲ್ಲೂ ಓದಿದ್ದೇನೆ. ನಿಮ್ಮ ಬರಹಗಳೆಂದರೆ ನನಗೆ ತುಂಬಾ ಇಷ್ಟ. ದಯವಿಟ್ಟು ನೀವು ನಮ್ಮನೆಗೆ ಊಟಕ್ಕೆ ಬರಬೇಕು” ಎಂದು ಒತ್ತಾಯ ಮಾಡತೊಡಗಿದರು. ನಾನು ನಯವಾಗಿ ತಿರಸ್ಕರಿಸಿದರೂ ಅವರ ಪ್ರೀತಿಯ ಬಲವಂತಕ್ಕೆ, ಬರವಣಿಗೆ ಮೇಲೆ ಇಟ್ಟಿರುವ ಅಭಿಮಾನಕ್ಕೆ ಒಪ್ಪಿಕೊಳ್ಳದೇ ಇರಲಾಗಲಿಲ್ಲ. ಬೈಕ್ ಮೇಲೆ ನನ್ನನ್ನು ಕೂರಿಸಿಕೊಂಡು ತಮ್ಮ ಮನೆಗೆ ಕರೆದೊಯ್ದು, ತಾಯಿಯನ್ನು, ತಮ್ಮ ಕುಟುಂಬವನ್ನು ಪರಿಚಯಿಸಿ ಅವರ ಮುಂದೆ ನನ್ನ ಕುರಿತು ಹೇಳುವಾಗ ಕಣ್ಣು ಮಂಜು ಮಂಜು. ಊಟ ಮುಗಿದಾದ ಮೇಲೆ ಅಷ್ಟಕ್ಕೆ ನಿಲ್ಲಲಿಲ್ಲ ಅವರ ಅಭಿಮಾನ, ಅವರ ಊರಿನ ಐತಿಹಾಸಿಕ ದೇವಾಲಯಕ್ಕೆ ಕರೆದೊಯ್ದು ವೀಕ್ಷಣೆ ಮಾಡಿಸಿದರು. ಅವರೊಬ್ಬ ನುರಿತ ಫೋಟೋಗ್ರಾಫರ್ ಆಗಿರುವುದರಿಂದ ನನ್ನ ವಿವಿಧ ಭಂಗಿಯ ಭಾವಚಿತ್ರಗಳನ್ನು ಸೆರೆ ಹಿಡಿದರು. ನಾನಿರುವಲ್ಲಿಗೆ ವಾಪಸು ಕರೆತಂದು ಬಿಟ್ಟರು.

ಹತ್ತು ವರ್ಷಗಳ ಹಿಂದೆ ನಡೆದ ಘಟನೆಯಿದು. ಒಮ್ಮೆಯೂ ನೋಡಿರದ, ಬರೀ ಬರಹಗಳಿಂದಲೇ ಮೆಚ್ಚಿಕೊಂಡು, ವೇದಿಕೆಯ ಮೇಲಿನ ಮಾತುಗಳನ್ನು ಕೇಳಿ ಅಭಿಮಾನದಿಂದ ಮನೆಗೆ ಕರೆದೊಯ್ದು ಊಟ ಮಾಡಿಸಿ ಕಾಳಜಿ ತೋರಿದ ಆ ಅಭಿಮಾನಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಬರವಣಿಗೆಯ ಶಕ್ತಿ ಎಂದರೆ ಇದುವೇ. ಅಕ್ಷರ ಸಾಂಗತ್ಯ ಉಂಟು ಮಾಡುವ ಬಾಂಧವ್ಯಕ್ಕೆ ಕೊನೆ ಉಂಟೇ? ಈ ಘಟನೆ ಇಂದಿಗೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಅಪರಿಚಿತ ಓದುಗ ಅಭಿಮಾನಿಗೆ ಹೃದಯತುಂಬಿದ ಸಲಾಮ್.

Related Articles

ಇತ್ತೀಚಿನ ಸುದ್ದಿಗಳು