ನವದೆಹಲಿ : ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಜಂತರ್ ಮಂತರ್‌ನಲ್ಲಿ ಶುಕ್ರವಾರ ನಡೆಯಲಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಆರೋಪಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೆ ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದಾರೆ.
ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಜಂತರ್ ಮಂತರ್ ಹಾಗೂ ಮಧ್ಯ ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ. ಜಂತರ್ ಮಂತರ್‌ಗೆ ತೆರಳುವ ಪ್ರಮುಖ ರಸ್ತೆಗಳಲ್ಲೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಅನಧಿಕೃತವಾಗಿ ಜನ ಸೇರುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಇದರ ನಡುವೆಯೇ ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (DMRC) ಮಧ್ಯ ದೆಹಲಿಯ 11 ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ಮುಂದಿನ ಆದೇಶದವರೆಗೆ ಬಂದ್ ಮಾಡಿದೆ. ಜನಪಥ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯಟ್, ರಾಜೀವ್ ಚೌಕ್, ಸೇವಾ ತೀರ್ಥ, ಮಂಡಿ ಹೌಸ್, ಲೋಕ ಕಲ್ಯಾಣ ಮಾರ್ಗ, INA, ಚಾವಡಿ ಬಜಾರ್, ರಾಮಕೃಷ್ಣ ಆಶ್ರಮ ಮಾರ್ಗ ಹಾಗೂ ನವದೆಹಲಿ ಮೆಟ್ರೋ ನಿಲ್ದಾಣಗಳು ಈ ಪಟ್ಟಿಯಲ್ಲಿವೆ.
ಆದರೆ ಪ್ರಯಾಣಿಕರ ಅನುಕೂಲಕ್ಕಾಗಿ ರಾಜೀವ್ ಚೌಕ್, ಮಂಡಿ ಹೌಸ್, ನವದೆಹಲಿ ಹಾಗೂ ಸೆಂಟ್ರಲ್ ಸೆಕ್ರೆಟರಿಯಟ್ ನಿಲ್ದಾಣಗಳಲ್ಲಿ ಮೆಟ್ರೋ ಮಾರ್ಗ ಬದಲಾವಣೆ (Interchange) ಸೌಲಭ್ಯ ಮುಂದುವರಿಯಲಿದೆ ಎಂದು DMRC ತಿಳಿಸಿದೆ.
ಇದೇ ವೇಳೆ, ನವದೆಹಲಿ ಜಿಲ್ಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಸೆಕ್ಷನ್ 163 ಅಡಿಯಲ್ಲಿ ನಿರ್ಬಂಧಾಜ್ಞೆ ಜಾರಿಗೊಳಿಸಲಾಗಿದ್ದು, ಜಂತರ್ ಮಂತರ್ ಸುತ್ತಮುತ್ತ ಜನರ ಸಂಚಾರ ಮತ್ತು ವಾಹನಗಳ ಓಡಾಟದ ಮೇಲೂ ನಿಯಂತ್ರಣ ಹೇರಲಾಗಿದೆ.
ದೆಹಲಿ ಸಂಚಾರ ಪೊಲೀಸರು ಕೂಡ ಜಂತರ್ ಮಂತರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ನಿಯಂತ್ರಣ ಮತ್ತು ಮಾರ್ಗ ಬದಲಾವಣೆ ಕುರಿತು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಕನ್ನಾಟ್ ಪ್ಲೇಸ್, ಸಂಸತ್ ಮಾರ್ಗ ಸೇರಿದಂತೆ ಕೇಂದ್ರ ದೆಹಲಿಯ ಪ್ರಮುಖ ರಸ್ತೆಗಳ ಮೇಲೆ ಸಂಚಾರದ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸುವಂತೆ ಸೂಚಿಸಲಾಗಿದೆ.
ಪ್ರತಿಭಟನೆಗೆ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA), ರಾಜ್ಯಸಭಾ ಸದಸ್ಯ ಮನೋಜ್ ಝಾ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಮುಖಂಡರು ಕರೆ ನೀಡಿದ್ದರು. SIR ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದ ಅಕ್ರಮಗಳಾಗಿವೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದ್ದು, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ ಅಥವಾ ವಜಾಗೊಳಿಸುವಂತೆ ಒತ್ತಾಯಿಸಲಾಗಿದೆ. ಈ ಆರೋಪಗಳನ್ನು ಚುನಾವಣಾ ಆಯೋಗ ಒಪ್ಪಿಕೊಂಡಿಲ್ಲ.
ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ಭದ್ರತಾ ಪಡೆಗಳ ನಿಯೋಜನೆ ಹೆಚ್ಚಿಸಲಾಗಿದ್ದು, ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ನಿರಂತರ ನಿಗಾ ವಹಿಸಿದ್ದಾರೆ. ಶುಕ್ರವಾರ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ಸೇರಿದ್ದು, ಕೆಲವರನ್ನು ಪೊಲೀಸರು ವಶಕ್ಕೆ ಪಡೆದಿರುವ ವರದಿಗಳೂ ಪ್ರಕಟವಾಗಿವೆ.
