ತಿರುವನಂತಪುರಂ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರು ಕೇರಳದ ಲೋಕೋಪಯೋಗಿ ಇಲಾಖೆಯ (PWD) ಕಾರ್ಯದರ್ಶಿಯಾಗಿದ್ದ 2006ರ ಅವಧಿಗೆ ಸಂಬಂಧಿಸಿದ ಹಳೆಯ ಪ್ರಕರಣವೊಂದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಕೇರಳ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ (VACB) ತನಿಖೆಗೆ ಆದೇಶಿಸಿದ್ದಾರೆ.
ಈ ಪ್ರಕರಣವು ಕೇರಳ ರಾಜ್ಯ ಸಾರಿಗೆ ಯೋಜನೆ (KSTP) ಅಡಿಯಲ್ಲಿ ಎಂ.ಸಿ. ರಸ್ತೆಯ ಮೇಲ್ದರ್ಜೆ ಕಾಮಗಾರಿಗೆ ಸಂಬಂಧಿಸಿದೆ. ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ PATI-BEL ಒಕ್ಕೂಟದೊಂದಿಗೆ ಸಂಬಂಧ ಹೊಂದಿದ್ದ ಮಲೇಷ್ಯಾದ ಎಂಜಿನಿಯರ್ ಲೀ ಬೀನ್ ಸೀನ್ ಅವರು 2006ರಲ್ಲಿ ಕೌಲಾಲಂಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆ ಪತ್ರದಲ್ಲಿ ಕೇರಳದ ಕೆಲವು ಸರ್ಕಾರಿ ಅಧಿಕಾರಿಗಳ ವಿರುದ್ಧ ಅಸಮಾಧಾನ ಮತ್ತು ಆರೋಪಗಳನ್ನು ಉಲ್ಲೇಖಿಸಲಾಗಿತ್ತು. ಅದರಲ್ಲಿ ಅಂದಿನ PWD ಕಾರ್ಯದರ್ಶಿಯಾಗಿದ್ದ ಜ್ಞಾನೇಶ್ ಕುಮಾರ್ ಅವರ ಹೆಸರೂ ಇತ್ತು ಎಂದು ವರದಿಯಾಗಿದೆ.
ಘಟನೆ ಬಳಿಕ ಪ್ರಕರಣಕ್ಕೆ ಸಂಬಂಧಿಸಿದಂತೆ 2006ರಲ್ಲಿ ವಿಜಿಲೆನ್ಸ್ ಪ್ರಾಥಮಿಕ ತನಿಖೆ ನಡೆದಿತ್ತು. ಆದರೆ ಆ ತನಿಖೆ ಬಾಹ್ಯ ಒತ್ತಡದಿಂದಾಗಿ ಹಳಿತಪ್ಪಿತು ಎಂಬ ಆರೋಪಗಳು ಇದೀಗ ಮತ್ತೆ ಕೇಳಿಬಂದಿವೆ. ಇದೇ ಹಿನ್ನೆಲೆಯಲ್ಲಿ ಹಳೆಯ ತನಿಖೆಯ ದಾಖಲೆಗಳನ್ನು ಕೇರಳ ಗೃಹ ಇಲಾಖೆ ಕೋರಿದೆ.
ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ವಿಜಿಲೆನ್ಸ್ ನಿರ್ದೇಶಕರಿಗೆ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ವಿಶೇಷವಾಗಿ, ಹಿಂದಿನ ತನಿಖೆಯ ಮೇಲೆ ಯಾವುದೇ ರೀತಿಯ ಬಾಹ್ಯ ಪ್ರಭಾವ ಬೀರಲಾಗಿತ್ತೇ ಎಂಬುದನ್ನು ಪರಿಶೀಲಿಸಿ, ತನಿಖೆಯ ವೇಳೆ ದೊರೆಯುವ ಅಂಶಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.
2006ರಲ್ಲೇ ಈ ಪ್ರಕರಣದ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ಅವರನ್ನು PWD ಕಾರ್ಯದರ್ಶಿ ಸ್ಥಾನದಿಂದ ವರ್ಗಾಯಿಸಲಾಗಿತ್ತು ಮತ್ತು ವಿಜಿಲೆನ್ಸ್ ತನಿಖೆಗೆ ಸೂಚನೆ ನೀಡಲಾಗಿತ್ತು ಎಂದು ಆ ಕಾಲದ ವರದಿಗಳು ಹೇಳುತ್ತವೆ.
ಇದೀಗ ಸುಮಾರು ಎರಡು ದಶಕಗಳ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮತ್ತೆ ಪರಿಶೀಲಿಸುವ ನಿರ್ಧಾರವಾಗಿರುವುದು ಗಮನ ಸೆಳೆದಿದೆ. ಆದರೆ ಪ್ರಸ್ತುತ ಹಂತದಲ್ಲಿ ಜ್ಞಾನೇಶ್ ಕುಮಾರ್ ವಿರುದ್ಧದ ಯಾವುದೇ ಆರೋಪವೂ ನ್ಯಾಯಾಂಗವಾಗಿ ಸಾಬೀತಾಗಿಲ್ಲ; ಹೊಸ ವಿಜಿಲೆನ್ಸ್ ತನಿಖೆಯ ಫಲಿತಾಂಶವೇ ಮುಂದಿನ ಬೆಳವಣಿಗೆಗಳನ್ನು ನಿರ್ಧರಿಸಲಿದೆ.
