ಸಿಇಸಿ ಜ್ಞಾನೇಶ್ ಕುಮಾರ್ ಅವರ 14 ವಿವಾದಾತ್ಮಕ ನಿರ್ಧಾರಗಳ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ

ದೆಹಲಿ: ಕೇಂದ್ರ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ ಮತ್ತು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ತೆಗೆದುಕೊಂಡಿರುವ ಸರಣಿ ಏಕಪಕ್ಷೀಯ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸೋಮವಾರ (ಅಕ್ಟೋಬರ್ 5) ವಿಚಾರಣೆ ನಡೆಸಲಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ಮಹತ್ವದ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಕಳೆದ 10 ತಿಂಗಳುಗಳಲ್ಲಿ ಮತದಾರರ ನೋಂದಣಿ, ಹೆಸರುಗಳ ಅಳಿಸುವಿಕೆ ಮತ್ತು ಮರುಸೇರ್ಪಡೆ, ‘ಫಾರ್ಮ್ 6’ ನಲ್ಲಿನ ಬದಲಾವಣೆಗಳು ಹಾಗೂ ಮತದಾರರ ಪಟ್ಟಿ ಡೇಟಾಬೇಸ್ ಮೇಲಿನ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಉಳಿದ ಇಬ್ಬರು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕನಿಷ್ಠ 14 ಬಾರಿ ಲಿಖಿತ ಆಕ್ಷೇಪಣೆ ದಾಖಲಿಸಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಈ ಅರ್ಜಿಗಳು ದಾಖಲಾಗಿವೆ. ಸಂಪೂರ್ಣ ತ್ರಿಸದಸ್ಯ ಆಯೋಗದ ಒಪ್ಪಿಗೆ ಅಥವಾ ಗಮನಕ್ಕೆ ತರದೆ ಈ ನಿರ್ಧಾರಗಳನ್ನು ಜಾರಿಗೊಳಿಸಲಾಗಿದೆ ಎಂದು ಆಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಈ ಸಂಬಂಧ ರಾಕೇಶ್ ಕುಮಾರ್ ಸಿಂಗ್ ಹಾಗೂ ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದು, “ಸಂವಿಧಾನಬದ್ಧವಾಗಿ ಚುನಾವಣಾ ಆಯೋಗಕ್ಕೆ ನೀಡಿರುವ ಅಧಿಕಾರಗಳನ್ನು ಸಿಇಸಿ ಒಬ್ಬರೇ ಪ್ರತ್ಯೇಕವಾಗಿ ಚಲಾಯಿಸಲು ಸಾಧ್ಯವಿಲ್ಲ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ 2023 ರ ಕಾಯ್ದೆಯ ಸೆಕ್ಷನ್ 18 ರ ಪ್ರಕಾರ ಆಯೋಗದ ಎಲ್ಲಾ ನಿರ್ಧಾರಗಳು ಒಮ್ಮತದಿಂದ ಅಥವಾ ಬಹುಮತದ ಆಧಾರದ ಮೇಲೆ ನಡೆಯಬೇಕು,” ಎಂದು ಪ್ರತಿಪಾದಿಸಿದ್ದಾರೆ.

ಅಲ್ಲದೆ, ವಿಚಾರಣೆ ಮುಗಿಯುವವರೆಗೆ ಜ್ಞಾನೇಶ್ ಕುಮಾರ್ ಅವರನ್ನು ಸಿಇಸಿ ಕರ್ತವ್ಯದಿಂದ ಅಮಾನತುಗೊಳಿಸಬೇಕು, ಆಯೋಗದ ಮೂಲ ದಾಖಲೆಗಳನ್ನು ವಶಕ್ಕೆ ಪಡೆಯಬೇಕು ಹಾಗೂ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ಅಥವಾ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಕೋರಲಾಗಿದೆ. ಆಯುಕ್ತರ ಒಪ್ಪಿಗೆಯಿಲ್ಲದೆ ತರಲಾದ ಸಾಫ್ಟ್‌ವೇರ್ ಬದಲಾವಣೆಗಳು ಮತ್ತು ಮಾರ್ಗಸೂಚಿಗಳನ್ನು ರದ್ದುಗೊಳಿಸುವಂತೆ ವಕೀಲ ತ್ರಿಪಾಠಿ ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ಆದರೆ ಚುನಾವಣಾ ಆಯೋಗವು ಈ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಆಂತರಿಕ ಚರ್ಚೆಗಳ ವೇಳೆ ಭಿನ್ನಾಭಿಪ್ರಾಯಗಳು ಮತ್ತು ಸಲಹೆಗಳು ಬರುವುದು ಸಾಂಸ್ಥಿಕ ಪ್ರಕ್ರಿಯೆಯ ಸಾಮಾನ್ಯ ಭಾಗವಾಗಿದ್ದು, ಅಂತಿಮವಾಗಿ ಆಯೋಗ ಕೈಗೊಂಡ ಎಲ್ಲಾ ನಿರ್ಧಾರಗಳೂ ಸರ್ವಾನುಮತದಿಂದಲೇ ಕೂಡಿವೆ ಎಂದು ಇಸಿಐ ಸಮರ್ಥಿಸಿಕೊಂಡಿದೆ.

ಟಿ.ಎನ್. ಶೇಷನ್ ಕಾಲದಲ್ಲೇ ಬಹುಸದಸ್ಯ ಆಯೋಗದಲ್ಲಿ ಸಿಇಸಿ ಮತ್ತು ಇತರೆ ಆಯುಕ್ತರಿಗೆ ಸಮಾನ ಮತದಾನದ ಹಕ್ಕಿರುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿರುವ ಹಿನ್ನೆಲೆಯಲ್ಲಿ, ಈ 14 ಆಕ್ಷೇಪಣೆಗಳು ಕೇವಲ ಚರ್ಚೆಯ ಭಾಗವಾಗಿದ್ದವೋ ಅಥವಾ ಆಯುಕ್ತರ ಒಪ್ಪಿಗೆಗೂ ಮುನ್ನವೇ ನಿರ್ಧಾರಗಳನ್ನು ಜಾರಿಗೊಳಿಸಲಾಗಿತ್ತೋ ಎಂಬುದನ್ನು ಸುಪ್ರೀಂ ಕೋರ್ಟ್ ಇಂದು ಕೂಲಂಕಷವಾಗಿ ಪರಿಶೀಲಿಸಲಿದೆ.

Related Articles

ಇತ್ತೀಚಿನ ಸುದ್ದಿಗಳು