ಪಾಕ್ ಮೂಲದ ಉಗ್ರರ ಸಂಪರ್ಕ ಆರೋಪ: ಬೀದರ್‌ನಲ್ಲಿ 24 ವರ್ಷದ ಯುವಕನ ಬಂಧನ

ಬೀದರ್: ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಜಾಲದೊಂದಿಗೆ ನಂಟು ಹೊಂದಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ 24 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಭಾಲ್ಕಿ ತಾಲೂಕಿನ ಏಣಕೂರು ಗ್ರಾಮದ ನಿವಾಸಿ ವಿಶಾಲ್ ಕುಮಾರ್ ಮೇತ್ರೆ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಆತನ ಚಲನವಲನ ಹಾಗೂ ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳ ಮೇಲೆ ಗುಪ್ತಚರ ಸಂಸ್ಥೆಗಳು ನಿಗಾ ಇರಿಸಿದ್ದವು ಎನ್ನಲಾಗಿದೆ.

ಪೊಲೀಸರ ಪ್ರಕಾರ, ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್ ಮೂಲಕ ಪಾಕಿಸ್ತಾನ ಮೂಲದ ಶಹಜಾದ್ ಭಟ್ಟಿ, ರಾಣಾ ಹುಸೇನ್ ಹಾಗೂ ನೋಮಿ ಖಾನ್ ಎಂಬವರೊಂದಿಗೆ ವಿಶಾಲ್ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಭಾರತ ವಿರೋಧಿ ಪ್ರಚಾರ ಮತ್ತು ಪ್ರಚೋದನಕಾರಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರೆನ್ನಲಾದ ಕೆಲವು ಸಾಮಾಜಿಕ ಜಾಲತಾಣ ಗುಂಪುಗಳು ಹಾಗೂ ಚಾನೆಲ್‌ಗಳಲ್ಲಿಯೂ ಆತ ಸಕ್ರಿಯವಾಗಿದ್ದ ಎಂಬ ಆರೋಪ ಕೇಳಿಬಂದಿದೆ.

ಇದರ ಬೆನ್ನಲ್ಲೇ ಅಕ್ರಮ ಶಸ್ತ್ರಾಸ್ತ್ರಗಳ ವ್ಯವಹಾರಕ್ಕೆ ಸಂಬಂಧಿಸಿದ ಮತ್ತೊಂದು ಆರೋಪವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಅಶು ಶರ್ಮಾ ಹಾಗೂ ಮಧ್ಯಪ್ರದೇಶದ ರಾಜ್ ಭಾಯ್ ಅಲಿಯಾಸ್ ಲಕ್ಕಿ ಸಿಂಗ್ ಎಂಬವರೊಂದಿಗೆ ಸಂಪರ್ಕ ಹೊಂದಿದ್ದ ವಿಶಾಲ್, ಅಕ್ರಮವಾಗಿ ಬಂದೂಕು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ತರಿಸಿ ಮಾರಾಟ ಮಾಡುವ ಜಾಲದಲ್ಲಿ ಭಾಗಿಯಾಗಿದ್ದನೆಂದು ಪೊಲೀಸರು ಶಂಕಿಸಿದ್ದಾರೆ.

ಆರೋಪಿಯ ಬಂಧನದ ಬಳಿಕ ಆತನ ಮೊಬೈಲ್ ಫೋನ್ ಸೇರಿದಂತೆ ಹಲವು ಡಿಜಿಟಲ್ ಸಾಧನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅವುಗಳಲ್ಲಿರುವ ಸಂಪರ್ಕಗಳು, ಸಂದೇಶಗಳು ಹಾಗೂ ಇತರ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ಈ ಮೂಲಕ ಆರೋಪಿಯ ಸಂಪರ್ಕ ಜಾಲದ ವ್ಯಾಪ್ತಿ ಮತ್ತು ಇತರ ವ್ಯಕ್ತಿಗಳ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಒಟ್ಟು ಏಳು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿರುವುದಾಗಿ ತಿಳಿದುಬಂದಿದೆ.

ಪ್ರಕರಣದ ತನಿಖೆ ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಟ್ಟಕ್ಕೂ ವಿಸ್ತರಿಸಿದ್ದು, ಪಾಕಿಸ್ತಾನ ಮೂಲದ ಸಂಪರ್ಕಗಳು ಹಾಗೂ ಅಕ್ರಮ ಶಸ್ತ್ರಾಸ್ತ್ರ ಜಾಲದ ಕುರಿತು ತನಿಖಾ ಸಂಸ್ಥೆಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿವೆ.

Related Articles

ಇತ್ತೀಚಿನ ಸುದ್ದಿಗಳು