ಮುಂಬೈ: ಖ್ಯಾತ ನಟ ಶೇಖರ್ ಸುಮನ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ “ನನಗೆ ಭಾರತದಲ್ಲಿ ಈಗ ಶಾಂತಿ ಸಿಗುತ್ತಿಲ್ಲ” ಎಂದು ಹೇಳಿಕೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಬಾಲಿವುಡ್ ನಟ ಸಂಜಯ್ ದತ್ ಇದೀಗ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮಾತುಗಳನ್ನು ತಪ್ಪಾಗಿ ಗ್ರಹಿಸಲಾಗಿದೆ ಮತ್ತು ಅದು ಹಾಸ್ಯಭರಿತವಾಗಿ ಸಿದ್ಧಪಡಿಸಲಾದ ಸ್ಕ್ರಿಪ್ಟ್‌ನ ಭಾಗವಾಗಿತ್ತು ಎಂದು ಅವರು ಸಮಜಾಯಿಷಿ ನೀಡಿದ್ದಾರೆ.
ಪಾಡ್‌ಕ್ಯಾಸ್ಟ್ ಸಂಭಾಷಣೆಯ ವೇಳೆ ಸಂಜಯ್ ದತ್ ಅವರು ಭಾರತೀಯರ ಪ್ರೀತಿ ಮತ್ತು ಆತಿಥ್ಯವನ್ನು ಶ್ಲಾಘಿಸುತ್ತಲೇ, ಇತ್ತೀಚಿನ ದಿನಗಳಲ್ಲಿ ಏನೋ ಬದಲಾಗಿದೆ ಎಂದೆನಿಸುತ್ತಿದ್ದು ದೇಶದಲ್ಲಿ ತಮಗೆ ಮೊದಲಿನಂತೆ ಶಾಂತಿ ಸಿಗುತ್ತಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಯ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ವಿವಾದ ಹೆಚ್ಚಾಗುತ್ತಿದ್ದಂತೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡ ಸಂಜಯ್ ದತ್, “ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆಯ ಭಾವನೆಗಳಿಗೆ ಧಕ್ಕೆ ತರುವ ಅಥವಾ ಅಗೌರವ ತೋರುವ ಯಾವುದೇ ಉದ್ದೇಶ ನನಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ,” ಎಂದು ಬರೆದುಕೊಂಡಿದ್ದಾರೆ.
ತಮ್ಮ ಹೇಳಿಕೆಯ ಹಿಂದಿನ ಹಿನ್ನೆಲೆಯನ್ನು ವಿವರಿಸಿದ ಅವರು, “ಆ ಸಂಭಾಷಣೆಯು ಮುನ್ನಾಭಾಯಿ ಸಿನಿಮಾಗಳ ಮಾದರಿಯಲ್ಲಿ, ಪ್ರೀತಿ ಮತ್ತು ಸೌಹಾರ್ದತೆಯನ್ನು ಸಾರುವ ‘ಗಾಂಧಿಗಿರಿ’ ಶೈಲಿಯ ಹಗುರವಾದ ಹಾಸ್ಯ ಮತ್ತು ವ್ಯಂಗ್ಯದ ಉದ್ದೇಶಕ್ಕಾಗಿ ಬರೆಯಲಾದ ಸ್ಕ್ರಿಪ್ಟ್ ಆಗಿತ್ತು. ದುರದೃಷ್ಟವಶಾತ್ ಆ ಸಂದರ್ಭವನ್ನು ಬಿಟ್ಟು ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸಂಜಯ್ ದತ್ ತಮ್ಮ 1993 ರ ಬ್ಲಾಕ್‌ಬಸ್ಟರ್ ‘ಖಲ್‌ನಾಯಕ್’ ಚಿತ್ರದ ಮುಂದುವರಿದ ಭಾಗವಾದ ‘ಖಲ್‌ನಾಯಕ್ ರಿಟರ್ನ್ಸ್’ನಲ್ಲಿ ಮತ್ತೆ ಬಾಲು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
