ನಮೂನೆ 6ರಲ್ಲಿನ ಯಾವುದೇ ಬದಲಾವಣೆಯನ್ನು ನಾವು ಅನುಮೋದಿಸಿಲ್ಲ: ಚುನಾವಣಾ ಆಯೋಗದ ಹೇಳಿಕೆ ತಳ್ಳಿಹಾಕಿದ ಸಿಜೆಐ ಸೂರ್ಯಕಾಂತ್

ದೆಹಲಿ: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್ – SIR) ವೇಳೆ ಹೊಸ ಮತದಾರರ ನೋಂದಣಿಗೆ ಬಳಸುವ ‘ಫಾರ್ಮ್ 6’ ಗೆ ಹೆಚ್ಚುವರಿ ಘೋಷಣಾಪತ್ರವನ್ನು ಸೇರಿಸಿರುವ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಹಾಗೂ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ಅಮಾನತಿಗೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ, “ಫಾರ್ಮ್ 6 ರಲ್ಲಿ ಮಾಡಲಾದ ಯಾವುದೇ ಬದಲಾವಣೆಗೆ ನಾವು ಒಪ್ಪಿಗೆ ನೀಡಿಲ್ಲ. ಈ ವಿಚಾರದಲ್ಲಿ ಎಲ್ಲರಿಗೂ ಸ್ಪಷ್ಟತೆ ಇರಲಿ,” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ.

ಹೊಸ ಮತದಾರರ ನೋಂದಣಿಗೆ ಸಂಬಂಧಿಸಿದಂತೆ ‘ಫಾರ್ಮ್ 6’ ಜೊತೆಗೆ ಹೆಚ್ಚುವರಿ ವಿವರಗಳುಳ್ಳ ಘೋಷಣಾಪತ್ರವನ್ನು ಕಡ್ಡಾಯಗೊಳಿಸಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಚುನಾವಣಾ ಆಯೋಗ, “ನಾವು ಶಾಸನಬದ್ಧ ಫಾರ್ಮ್ 6 ಅನ್ನು ಬದಲಾಯಿಸಿಲ್ಲ; ಕೇವಲ ಎಸ್‌ಐಆರ್ ಪ್ರಕ್ರಿಯೆಯ ಅಂಗವಾಗಿ ಹೆಚ್ಚುವರಿ ಘೋಷಣಾಪತ್ರವನ್ನು ಲಗತ್ತಿಸಿದ್ದೇವೆ ಅಷ್ಟೇ. ಅಲ್ಲದೆ, ಬಿಹಾರ ಎಸ್‌ಐಆರ್ ಪ್ರಕರಣದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವೇ ಈ ಘೋಷಣಾಪತ್ರವನ್ನು ಎತ್ತಿಹಿಡಿದಿದೆ,” ಎಂದು ಸಮರ್ಥಿಸಿಕೊಂಡಿತ್ತು.

ಆದರೆ, ಸೋಮವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಚುನಾವಣಾ ಆಯೋಗದ ಈ ವಾದವನ್ನು ನೇರವಾಗಿ ತಳ್ಳಿಹಾಕಿದ್ದಾರೆ. ಬಿಹಾರ ಎಸ್‌ಐಆರ್ ನಡೆಸುವ ಆಯೋಗದ ಅಧಿಕಾರವನ್ನು ನ್ಯಾಯಾಲಯ ಈ ಹಿಂದೆ ಎತ್ತಿಹಿಡಿದಿತ್ತಾದರೂ, ನಿಯಮಗಳಿಗೆ ತಿದ್ದುಪಡಿ ತರದೆ ಫಾರ್ಮ್ 6 ಜೊತೆಗೆ ಹೊಸದಾಗಿ ಸೇರಿಸಲಾದ ಈ ಹೆಚ್ಚುವರಿ ಘೋಷಣಾಪತ್ರಕ್ಕೆ ನ್ಯಾಯಾಂಗದ ಮಾನ್ಯತೆ ಸಿಕ್ಕಿಲ್ಲ ಎಂಬುದು ಸಿಜೆಐ ಅವರ ಮಾತಿನಿಂದ ಸ್ಪಷ್ಟವಾಗಿದೆ.

ಈ ಹಿನ್ನೆಲೆಯಲ್ಲಿ, ಫಾರ್ಮ್ 6 ಗೆ ಸಂಬಂಧಿಸಿದ ಸಂಪೂರ್ಣ ಮೂಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು ಚುನಾವಣಾ ಆಯೋಗಕ್ಕೆ ಆದೇಶಿಸಿದೆ. “ದಾಖಲೆಗಳು ನ್ಯಾಯಾಲಯದ ಮುಂದೆ ಬಂದ ನಂತರ, ಈ ಫಾರ್ಮ್‌ನಲ್ಲಿ ಯಾರು ಬದಲಾವಣೆ ಮಾಡಿದ್ದಾರೆ ಮತ್ತು ಅದನ್ನು ಹೇಗೆ ಜಾರಿಗೊಳಿಸಲಾಗಿದೆ ಎಂಬುದನ್ನು ನಾವು ಕೂಲಂಕಷವಾಗಿ ಪರಿಶೀಲಿಸಲಿದ್ದೇವೆ,” ಎಂದು ಪೀಠ ತಿಳಿಸಿದೆ. ಕೇಂದ್ರ ಸರ್ಕಾರ ಹಾಗೂ ಭಾರತ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಲಾಗಿದ್ದು, ಒಂದು ವಾರದೊಳಗೆ ವಿವರವಾದ ಉತ್ತರ ಸಲ್ಲಿಸುವಂತೆ ಸೂಚಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು