ಗುಜರಾತ್: ತುರ್ತು ಸಂದರ್ಭಗಳಲ್ಲಿ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಬಳಸಬೇಕಾದ ಅಗ್ನಿಶಾಮಕ ವಾಹನವನ್ನು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವರ ಖಾಸಗಿ ನಿವಾಸದ ಗೋಡೆ ಸ್ವಚ್ಛಗೊಳಿಸಲು ಬಳಸಿದ ಆರೋಪ ಗುಜರಾತ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ.
ಗುಜರಾತ್ ರಾಜ್ಯದ ದಾಹೋದ್ ಜಿಲ್ಲೆಯ ದೇವಗಢ ಬಾರಿಯಾದ ಬಿಜೆಪಿ ಶಾಸಕ ಬಚುಭಾಯಿ ಖಾಬಡ್ ಅವರ ಧಾನ್‌ಪುರ ತಾಲೂಕಿನ ಪಿಪೆರೋ ಗ್ರಾಮದ ನಿವಾಸದಲ್ಲಿ ಈ ಘಟನೆ ನಡೆದಿದೆ. ಅಗ್ನಿಶಾಮಕ ವಾಹನದಿಂದ ಮನೆಯ ಹೊರಗೋಡೆಗಳಿಗೆ ನೀರು ಸಿಂಪಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸರ್ಕಾರಿ ಯಂತ್ರಾಂಗವನ್ನು ಖಾಸಗಿ ಉದ್ದೇಶಕ್ಕೆ ಬಳಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಮಾಹಿತಿಯಂತೆ, ದೇವಗಢ ಬಾರಿಯಾ ನಗರಸಭೆಯ ಅಗ್ನಿಶಾಮಕ ವಾಹನವು ಶಾಸಕರ ನಿವಾಸ ತಲುಪಲು ಸುಮಾರು 24 ಕಿಲೋಮೀಟರ್ ಪ್ರಯಾಣಿಸಿತ್ತು. ನಗರಸಭೆ ಅಧ್ಯಕ್ಷ ಧರ್ಮೇಶ್ ಕಲಾಲ್ ಅವರಿಂದ ಅಗ್ನಿ ಅವಘಡದ ಕರೆ ಬಂದಿದೆ ಎಂದು ತಿಳಿಸಲಾಗಿದ್ದ ಹಿನ್ನೆಲೆಯಲ್ಲಿ ವಾಹನವನ್ನು ಕಳುಹಿಸಲಾಗಿತ್ತು ಎಂದು ಅಗ್ನಿಶಾಮಕ ಅಧಿಕಾರಿ ಮಯೂರ್ ಚೌಹಾಣ್ ತಿಳಿಸಿದ್ದಾರೆ.
ಆದರೆ ಸ್ಥಳಕ್ಕೆ ತೆರಳಿದ ಸಿಬ್ಬಂದಿಗೆ ಅಲ್ಲಿ ಯಾವುದೇ ಬೆಂಕಿ ಅವಘಡವಿಲ್ಲದಿರುವುದು ಕಂಡುಬಂದಿದೆ. ಬದಲಾಗಿ ಮನೆಯ ಹೊರಗೋಡೆಗಳಿಗೆ ನೀರು ಸಿಂಪಡಿಸಿ ಸ್ವಚ್ಛಗೊಳಿಸುವಂತೆ ಸೂಚನೆ ನೀಡಲಾಗಿತ್ತು ಎನ್ನಲಾಗಿದೆ. ಈ ವಿಷಯ ಅಗ್ನಿಶಾಮಕ ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿ, ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಘಟನೆ ವಿವಾದಕ್ಕೆ ಕಾರಣವಾದ ಬಳಿಕ ನಗರಸಭೆ ಆಡಳಿತವು ಸಂಬಂಧಪಟ್ಟ ಶುಲ್ಕವನ್ನು ವಸೂಲಿ ಮಾಡಿದೆ. ಶಾಸಕ ಬಚುಭಾಯಿ ಖಾಬಡ್ ಅವರ ಪುತ್ರ ಬಲ್ವಂತ್ ಖಾಬಡ್ ಅವರ ಹೆಸರಿನಲ್ಲಿ ₹2,700 ಶುಲ್ಕದ ರಸೀದಿ ನೀಡಲಾಗಿದೆ ಎಂದು ವರದಿಯಾಗಿದೆ. ಖಾಸಗಿ ಆಸ್ತಿಯ ಸ್ವಚ್ಛತೆಗೆ ಸರ್ಕಾರಿ ಅಗ್ನಿಶಾಮಕ ವಾಹನವನ್ನು ಯಾವ ನಿಯಮದಡಿ ಬಳಸಲಾಯಿತು ಎಂಬ ಪ್ರಶ್ನೆ ಎದುರಾಗಿದೆ.
ಇನ್ನು ಘಟನೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ. ಅಗ್ನಿಶಾಮಕ ವಾಹನ ಖಾಸಗಿ ನಿವಾಸದ ಸ್ವಚ್ಛತಾ ಕಾರ್ಯದಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ಬೇರೆಡೆ ನಿಜವಾದ ಅಗ್ನಿ ಅವಘಡ ಸಂಭವಿಸಿದ್ದರೆ, ತುರ್ತು ಸೇವೆ ವಿಳಂಬವಾದ ಹೊಣೆಯನ್ನು ಯಾರು ಹೊರುತ್ತಿದ್ದರು ಎಂದು ದೇವಗಢ ಬಾರಿಯಾ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜೇಶ್ ರಾವಲ್ ಪ್ರಶ್ನಿಸಿದ್ದಾರೆ. ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ನಡುವೆ ಶಾಸಕ ಬಚುಭಾಯಿ ಖಾಬಡ್ ಅವರಿಂದ ಈ ವಿವಾದದ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ವರದಿಯಾಗಿದೆ.
