ನೇಪಾಳ ಜಲಪ್ರಳಯ: 40 ದಿನಗಳ ಬಳಿಕ ಶೋಧ ಕಾರ್ಯಾಚರಣೆ ಸ್ಥಗಿತ, ಬೆಚ್ಚಿ ಬೀಳಿಸುವ ಅಂಕಿ ಅಂಶಗಳ ವರದಿ

ಕಠ್ಮಂಡು: ನೇಪಾಳದಲ್ಲಿ ಆಗಸ್ಟ್ 26ರಂದು ಸಂಭವಿಸಿದ ಭೀಕರ ಭೋಟೆಕೋಶಿ-ತ್ರಿಶೂಲಿ ಪ್ರವಾಹದ ಬಳಿಕ ಸುಮಾರು 40 ದಿನಗಳ ಕಾಲ ನಡೆದ ಸಕ್ರಿಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ದುರಂತದಲ್ಲಿ ಇದುವರೆಗೆ 1,455 ಮಂದಿ ಮೃತಪಟ್ಟಿದ್ದು, 5,285 ಜನರು ನಾಪತ್ತೆಯಾಗಿದ್ದಾರೆ. ಪ್ರವಾಹದ ಸಂದರ್ಭದಲ್ಲಿ 13,795 ಮಂದಿಯನ್ನು ರಕ್ಷಿಸಲಾಗಿದೆ ಎಂದು ನೇಪಾಳದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ (NDRRMA) ತಿಳಿಸಿದೆ.

ನೇಪಾಳದ ಚೀನಾ ಗಡಿ ಭಾಗದಲ್ಲಿ ಆರಂಭವಾದ ಭೀಕರ ಪ್ರವಾಹವು ಭೋಟೆಕೋಶಿ ನದಿ ಮೂಲಕ ತ್ರಿಶೂಲಿ ಹಾಗೂ ಇತರ ನದಿ ವ್ಯವಸ್ಥೆಗಳಿಗೆ ವ್ಯಾಪಿಸಿತ್ತು. ಅಪಾರ ಪ್ರಮಾಣದ ನೀರು, ಕೆಸರು ಮತ್ತು ಅವಶೇಷಗಳು ನದಿ ಪಾತ್ರದ ಪ್ರದೇಶಗಳಿಗೆ ನುಗ್ಗಿದ್ದರಿಂದ ಮನೆಗಳು, ರಸ್ತೆಗಳು, ಸೇತುವೆಗಳು, ಕೃಷಿ ಭೂಮಿ ಹಾಗೂ ಪ್ರಮುಖ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ. 12 ಜಲವಿದ್ಯುತ್ ಯೋಜನೆಗಳು ಕೂಡ ಹಾನಿಗೊಳಗಾಗಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.

189 ಭಾರತೀಯರು ಇನ್ನೂ ನಾಪತ್ತೆ
ದುರಂತದ ಬಳಿಕ ನಾಪತ್ತೆಯಾದವರಲ್ಲಿ ವಿದೇಶಿ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೇಪಾಳ ಪ್ರವಾಸೋದ್ಯಮ ಇಲಾಖೆಯ ಮಾಹಿತಿಯಂತೆ, 189 ಭಾರತೀಯರು ಇನ್ನೂ ನಾಪತ್ತೆಯಾಗಿದ್ದಾರೆ. ಒಟ್ಟು 607 ವಿದೇಶಿ ಪ್ರವಾಸಿಗರು 34 ದೇಶಗಳಿಂದ ನಾಪತ್ತೆಯಾಗಿದ್ದಾರೆ ಎಂಬ ಸೆಪ್ಟೆಂಬರ್ 15ರ ಅಧಿಕೃತ ಮಾಹಿತಿಯಿತ್ತು. ಇವರಲ್ಲಿ ಅಮೆರಿಕದ 65, ಮಲೇಷ್ಯಾದ 55, ಉಕ್ರೇನ್‌ನ 54, ಚೀನಾದ 37, ಆಸ್ಟ್ರೇಲಿಯಾ ಮತ್ತು ಲಾಟ್ವಿಯಾದ ತಲಾ 33, ಬ್ರಿಟನ್‌ನ 32 ಹಾಗೂ ಕೆನಡಾದ 30 ಮಂದಿ ಸೇರಿದ್ದರು. 188 ನೇಪಾಳಿ ಪ್ರವಾಸಿಗರೂ ನಾಪತ್ತೆಯಾಗಿದ್ದರು.

ನಾಪತ್ತೆಯಾದವರಿಗಾಗಿ ನಡೆದ ವ್ಯಾಪಕ ಕಾರ್ಯಾಚರಣೆಯ ಹೊರತಾಗಿಯೂ ಸಾವಿರಾರು ಮಂದಿಯ ಸುಳಿವು ಸಿಗದ ಹಿನ್ನೆಲೆಯಲ್ಲಿ, ಇದೀಗ ನೇಪಾಳ ಸರ್ಕಾರ ಪುನರ್‌ನಿರ್ಮಾಣ ಮತ್ತು ಪುನರ್ವಸತಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿದೆ.

₹35 ಸಾವಿರ ಕೋಟಿ ಪುನರ್‌ನಿರ್ಮಾಣ ಯೋಜನೆ
ಪ್ರಧಾನಮಂತ್ರಿ ಬಲೇಂದ್ರ ಶಾ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಮಂಡಳಿ ಸಭೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಪುನರ್‌ನಿರ್ಮಾಣಕ್ಕೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ವಿವಿಧ ಸಚಿವಾಲಯಗಳು ಹಾಗೂ ಸರ್ಕಾರಿ ಸಂಸ್ಥೆಗಳು ಸಲ್ಲಿಸಿರುವ 504 ಪುನರ್‌ನಿರ್ಮಾಣ ಮತ್ತು ಪುನರ್ವಸತಿ ಯೋಜನೆಗಳಿಗೆ 559.17 ಶತಕೋಟಿ ನೇಪಾಳಿ ರೂಪಾಯಿ ಬಜೆಟ್ ಅಗತ್ಯವಿದೆ ಎಂದು ಸಭೆ ಶಿಫಾರಸು ಮಾಡಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸರಿಸುಮಾರು ₹35 ಸಾವಿರ ಕೋಟಿಗೆ ಸಮಾನವಾಗಿದೆ.

ಜಿಲ್ಲಾ ಭದ್ರತಾ ಸಮಿತಿಗಳು, ಜಿಲ್ಲಾ ವಿಪತ್ತು ನಿರ್ವಹಣಾ ಸಂಸ್ಥೆಗಳು, NDRRMA ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ತಂಡಗಳ ವರದಿ ಮತ್ತು ಶಿಫಾರಸುಗಳನ್ನು ಆಧರಿಸಿ ಪುನರ್‌ನಿರ್ಮಾಣ ಯೋಜನೆಗಳನ್ನು ರೂಪಿಸಲಾಗಿದೆ. ವೆಚ್ಚದ ಅಂದಾಜು ಇನ್ನೂ ಪೂರ್ಣಗೊಳ್ಳದ ಕೆಲವು ಯೋಜನೆಗಳಿಗೂ ಮುಂದಿನ ಹಂತದಲ್ಲಿ ಹಣಕಾಸು ವ್ಯವಸ್ಥೆ ಮಾಡುವಂತೆ NDRRMAಗೆ ಸೂಚಿಸಲಾಗಿದೆ.

ಶೋಧ ನಿಂತರೂ ರಕ್ಷಣಾ ಕಾರ್ಯಕ್ಕೆ ಅವಕಾಶ
40 ದಿನಗಳ ಬಳಿಕ ದೊಡ್ಡ ಪ್ರಮಾಣದ ಸಕ್ರಿಯ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವುದರಿಂದ ನಾಪತ್ತೆಯಾದವರ ಕುಟುಂಬಗಳಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಆದರೆ ಇದರಿಂದ ಎಲ್ಲ ರೀತಿಯ ರಕ್ಷಣಾ ಕಾರ್ಯಗಳು ಸಂಪೂರ್ಣವಾಗಿ ನಿಂತಿವೆ ಎಂದರ್ಥವಲ್ಲ.

ಪುನರ್‌ನಿರ್ಮಾಣದ ಸಂದರ್ಭದಲ್ಲಿ ಮಾನವ ಅವಶೇಷಗಳು, ಮೃತದೇಹಗಳು ಅಥವಾ ನಾಪತ್ತೆಯಾದವರ ವಸ್ತುಗಳು ಪತ್ತೆಯಾದರೆ ಅವುಗಳನ್ನು ಸಂಗ್ರಹಿಸಿ ಗುರುತಿಸುವ ಪ್ರಕ್ರಿಯೆ ಮುಂದುವರಿಯಲಿದೆ. ತುರ್ತು ಪರಿಸ್ಥಿತಿಯಲ್ಲಿ ಅಗತ್ಯವಿದ್ದರೆ ರಕ್ಷಣಾ ಕಾರ್ಯಾಚರಣೆಯನ್ನೂ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ದೀರ್ಘಕಾಲದಿಂದ ನಾಪತ್ತೆಯಾಗಿರುವವರನ್ನು ಕಾನೂನುಬದ್ಧವಾಗಿ ಮೃತಪಟ್ಟವರು ಎಂದು ಘೋಷಿಸುವ ಪ್ರಕ್ರಿಯೆಯ ಬಗ್ಗೆಯೂ ನೇಪಾಳ ಸರ್ಕಾರ ಚಿಂತನೆ ನಡೆಸುತ್ತಿದೆ. ಇದರಿಂದ ಅವರ ಕುಟುಂಬಗಳಿಗೆ ವಿಮೆ, ಬ್ಯಾಂಕಿಂಗ್ ಮತ್ತು ಇತರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು